ವರದಿ : ಪ್ರಭು ವಿ ಎಸ್
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಬಹುಮತ ಬಂದರಲ್ಲವೇ ದಲಿತ ಉಪ ಮುಖ್ಯಮಂತ್ರಿ ಮಾಡುವ ಮಾತು ಎಂದು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ವ್ಯಂಗ್ಯವಾಡಿದರು.
ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಜೆಡಿಎಸ್ ಅಧಿಕಾರಕ್ಕೆ ಬಂದರೆ, ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಹೇಳಿರುವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಹುಮತ ಬಂದರೆ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸುವುದೋ ಅಥವಾ ಬಿಜೆಪಿ ಹಾಗೂ ಇನ್ನಿತರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡರೂ ಸಹ ಉಪ ಮುಖ್ಯಮಂತ್ರಿ ಸ್ಥಾನ ನೀಡುತ್ತಾರೆಯೇ? ಎಂದು ಪ್ರಶ್ನಿಸಿದರು.
ನಂತರ ಮದ್ದೂರು ತಾಲ್ಲೂಕಿನ ಮರಳಿಗ ಗ್ರಾಮದಲ್ಲಿ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ನಾನು ಅಭಿವೃದ್ಧಿ ಕೆಲಸ ಮಾಡಿದರೂ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಿದ್ದು ನೋವುಂಟು ಮಾಡಿತು. ನಾನು ಸಚಿವನಾಗಿದ್ದಾಗ ಮೆಡಿಕಲ್ ಕಾಲೇಜು, ಕೆ ಎಸ್ ಆರ್ ಟಿ ಸಿ ಡಿಪೋ, ಕಾವೇರಿ ಭವನ, ಲೋಕೋಪಯೋಗಿ ಕಚೇರಿ, ಆರ್ ಟಿ ಓ ಕಚೇರಿ ಸೇರಿದಂತೆ ಇನ್ನಿತರ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರೂ ಸಹ ಚುನಾವಣೆಯಲ್ಲಿ 47,000 ಕ್ಕೂ ಅಧಿಕ ಮತದಿಂದ ತಮ್ಮನ್ನು ಸೋಲಿಸಿದ್ದು ಬೇಸರ ತಂದಿತ್ತು. ಆಗಲೇ ನಾನು ರಾಜಕೀಯ ನಿವೃತ್ತಿ ಪಡೆಯಬೇಕೆಂಬ ಚಿಂತೆ ಮಾಡಿದೆನಾದರೂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಒತ್ತಾಸೆಯ ಮೇರೆಗೆ ರಾಜಕೀಯದಲ್ಲಿ ಮತ್ತೆ ಸಕ್ರಿಯನಾಗಿದ್ದೇನೆ, ಮುಂದಿನ ಚುನಾವಣೆಯಲ್ಲಿ ಕೊಪ್ಪ ಭಾಗದ ಸಂಪೂರ್ಣ ಅಭಿವೃದ್ಧಿ ಮಾಡುತ್ತೇನೆ ಎಂದರು.
ಸಭೆಯಲ್ಲಿ ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ದಿವಾಕರ್, ತಾ.ಪಂ.ಮಾಜಿ ಉಪಾಧ್ಯಕ್ಷ ಬಿ ಎಂ ರಘು, ಮನ್ಮುಲ್ ಮಾಜಿ ನಿರ್ದೇಶಕ ಕುಮಾರ್ ಕೊಪ್ಪ, ಕಾಂಗ್ರೆಸ್ ಮುಖಂಡರಾದ ಗಟ್ಟಹಳಿ ಹರೀಶ್, ಮರಳಿಗ ಸ್ವಾಮಿ, ಶಂಕರಯ್ಯ, ಮೊಡ್ಲಗೌಡ, ಮಲ್ಲೇಶ್ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.




