ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಬ್ಲಫ್ ಬಳಿ ಕಳೆದ 2 ದಿನಗಳಿಂದ 60 ಆಳದ ನಾಲೆಗೆ ಬಿದ್ದು ಪರದಾಡುತ್ತಿದ್ದ ಮರಿ ಕಾಡಾನೆಯನ್ನು ಬೃಹತ್ ಗಾತ್ರದ ಕ್ರೇನ್ ಬಳಕೆ ಮಾಡಿ ಯಶಸ್ವಿ ಕಾರ್ಯಾಚರಣೆ ನಡೆಸುವ ಮೂಲಕ ಮಂಗಳವಾರ ಹೊರಕ್ಕೆ ತೆಗೆಯಲಾಗಿದೆ.
ಹಿರಿಯ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಂಡು ಬೃಹದಾಕಾರ ಕ್ರೇನ್ ಬಳಸಿ 60 ಅಡಿ ಆಳದ ನಾಲೆಯಿಂ ಹೊರ ತೆಗೆಯಲಾಯಿತು.
ಕಾರ್ಯಾಚರಣೆ ನಡೆದದ್ದು ಹೇಗೆ ?
ಹಲವು ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಾಲೆ ಒಳಗೆ ಇದ್ದಂತಹ ಆನೆಯನ್ನು ಮೇಲೆತ್ತಲು ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಯೋಜನೆಯಂತೆ ವೈಧ್ಯಾಧಿಕಾರಿಗಳ ತಂಡ ಮೊದಲು ಆನೆಯ ಆರೋಗ್ಯ ಸ್ಥಿತಿಗತಿಯನ್ನು ಗಮನಿಸಿ ಅನೆಯು ಸೂಕ್ತವಾದಂತಹ ಸ್ಥಳಕ್ಕೆ ಬರುವುದನ್ನು ಖಾತರಿಪಡಿಸಿಕೊಂಡು ಅರವಳಿಕೆ ಮದ್ದನ್ನು ನೀಡಲಾಯಿತು.
ನಂತರ ಪ್ರಜ್ಞೆತಪ್ಪಿದ ಆನೆಯು ಬೀಳುವ ಸಂಭವವನ್ನು ಕಾಯುತ್ತಿದ್ದ ವೈದ್ಯರ ತಂಡ ಆನೆಯು ನೆಲಕ್ಕೆ ಬೀಳುತ್ತಿದ್ದಂತೆ ತಕ್ಷಣ ಆನೆಯ ಹತ್ತಿರ ಹೊಗಿ ಸೂಕ್ತ ರೀತಿಯಲ್ಲಿ ಪರೀಕ್ಷಿಸಿ ಚಿಕಿತ್ಸೆ ನೀಡಿ ಬೃಹದಾಕಾರದ ಕ್ರೇನಿನ ಬೃಹತ್ ಗಾತ್ರದ ಕಬ್ಬಿಣದ ತಟ್ಟೆಗೆ 4 ಕಡೆ ಹಗ್ಗಗಳನ್ನು ಬಿಗಿದು ನಾಲೆಯೊಳಗೆ ಇಳಿಬಿಟ್ಟು, ಆನೆಯನ್ನು ಅದರ ಮೇಲೆಕ್ಕೆ ಸ್ಥಳಾಂತರಿಸಲಾಯಿತು.ಆನಂತರ ನಾಲೆಯಿಂದ ಹೊರ ತೆಗೆಯಲಾಯಿತು. ನಂತರ ಆನೆಗೆ ಅವಶ್ಯವಿದ್ಯಂತಹ ಪ್ರಥಮ ಚಿಕಿತ್ಸೆಯನ್ನು ನೀಡಿ ಅದರ ಆರೋಗ್ಯದ ಸ್ಥಿತಿಯನ್ನು ಖಾತರಿಪಡಿಸಿಕೊಂಡು ಪಕ್ಕದಲ್ಲೇ ಇರುವ ಕಾವೇರಿ ವನ್ಯಜೀವಿ ಅರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಯಿತು.
ಈ ಕಾರ್ಯಾಚರಣೆಗೆ ಮಳವಳ್ಳಿ ತಾಲ್ಲೂಕು ತಹಶೀಲ್ದಾರ್ ಪೂರ್ಣ ಕಾರ್ಯಾಚರಣೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದರು.ಮಂಡ್ಯ ಜಿಲ್ಲಾಧಿಕಾರಿಗಳು ಕಾಲಕಾಲಕ್ಕೆ ಮಾಹಿತಿ ಪಡೆದು ಸ್ಥಳೀಯವಾಗಿ ಅವಶ್ಯವಿದ್ಯಂತಹ ವ್ಯವಸ್ಥೆಗಳನ್ನು ಕಲ್ಪಿಸುವ ಮೂಲಕ ಸಹಕಾರ ನೀಡಿದರು. ಕಾರ್ಯಾಚರಣೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಮತ್ತು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಹಕಾರ ನೀಡಿದರು.
ಮಂಡ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರಘು ಡಿ, ಮೈಸೂರು ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭುಗೌಡ ಬಿರಾದರ್, ಮೈಸೂರು ಮೈಗಾಲಯ ಪ್ರಾಧಿಕಾರ ಕಾರ್ಯನಿರ್ವಾಹಕ ಅಧಿಕಾರಿ ಅನುಷಾ, ವನ್ಯಜೀವಿ ವೈಧ್ಯಾಧಿಕಾರಿಗಳಾದ ಡಾ.ರಮೇಶ್ ಮತ್ತು ಡಾ.ಆದರ್ಶ್, ಮಂಡ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹದೇವಸ್ವಾಮಿ, ಮಳವಳ್ಳಿ ವಲಯ ಅರಣ್ಯಾಧಿಕಾರಿ ಬಿ. ಗವಿಯಪ್ಪ, ಚಿರತೆ ಕಾರ್ಯಪಡೆ ಮೈಸೂರು ನಾಗರಹೊಳೆ ಹುಲಿಸಂರಕ್ಷಿತ ಪ್ರದೇಶ ಮತ್ತು ಮಡಿಕೇರಿ ವಿಭಾಗದ ವತಿಯಿಂದ ತಜ್ಞ ಸಿಬ್ಬಂದಿಗಳು ಭಾಗವಹಿಸಿದ್ದರು.




