ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ಆರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್, ಕಾಂಗ್ರೆಸ್ ಮುಖಂಡರುಗಳಾದ ವಿಜಯ್ ರಾಮೇಗೌಡ, ಎಂ. ಬಿ.ಕೃಷ್ಣಮೂರ್ತಿ, ನಾಗೇಂದ್ರ ಕುಮಾರ್ ಹಾಗೂ ಕಿಕ್ಕೇರಿ ಸುರೇಶ್ ಕಾಂಗ್ರೆಸ್ ಟಿಕೆಟ್ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಎರಡು ಬಾರಿ ಶಾಸಕರಾಗಿ ಆಯ್ಕೆಗೊಂಡಿರುವ ಕೆ.ಬಿ. ಚಂದ್ರಶೇಖರ್ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಮತ್ತೊಮ್ಮೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲೂ ಸತತವಾಗಿ ಸೋಲು ಕಂಡಿರುವ ಕೆ.ಬಿ. ಚಂದ್ರಶೇಖರ್ ಅವರಿಗೆ ಸಾಕಷ್ಟು ಅವಕಾಶ ನೀಡಲಾಗಿದೆ. ಈಗ ಇತರರಿಗೆ ಅವಕಾಶ ಮಾಡಿಕೊಡಿ ಎಂದು ಕಾಂಗ್ರೆಸ್ ಮುಖಂಡರಾದ ವಿಜಯ ರಾಮೇಗೌಡ, ಮಾಜಿ ಶಾಸಕ ಬಿ. ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡ ಎಂ.ಬಿ. ಕೃಷ್ಣಮೂರ್ತಿ, ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್ ಒತ್ತಾಯಿಸುತ್ತಿದ್ದಾರೆ.
ಬೂಕನಕೆರೆಯ ಉದ್ಯಮಿ ವಿಜಯ್ ರಾಮೇಗೌಡ ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು ಈಗಾಗಲೇ ಕ್ಷೇತ್ರದಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಮಂಡ್ಯ ಜಿಲ್ಲೆಗೆ ಆಗಮಿಸಿದಾಗ ಹಲವು ಜವಾಬ್ದಾರಿ ನಿಭಾಯಿಸಿ ಯಶಸ್ವಿಯಾಗಿ ಹೈಕಮಾಂಡ್ ನಾಯಕರ ಗಮನ ಸೆಳೆದಿದ್ದಾರೆ.

ಕ್ಷೇತ್ರದಾದ್ಯಂತ ಸಾಕಷ್ಟು ಜನ ಸಂಪರ್ಕ ಹೊಂದಿರುವ ವಿಜಯ್ ರಾಮೇಗೌಡ ಈ ಬಾರಿ ತಮಗೊಂದು ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸಿದ್ದಾರೆ.
ಮಾಜಿ ಶಾಸಕ ಬಿ.ಪ್ರಕಾಶ್, ನಾಗೇಂದ್ರ ಕುಮಾರ್, ಕಿಕ್ಕೇರಿ ಸುರೇಶ್, ಎಂ. ಬಿ. ಕೃಷ್ಣಮೂರ್ತಿ ಕೂಡ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿ ನಡೆಸುತ್ತಿದ್ದಾರೆ. ಮಾಜಿ ಶಾಸಕರಾದ ಕೆ.ಬಿ. ಚಂದ್ರಶೇಖರ್, ಬಿ. ಪ್ರಕಾಶ್ ಇವರಿಬ್ಬರೂ ಅಧಿಕಾರ ಅನುಭವಿಸಿದ್ದಾರೆ. ನಮಗೊಂದು ಅವಕಾಶ ಕೊಡಿ ಎನ್ನುವುದು ಉಳಿದ ಆಕಾಂಕ್ಷಿಗಳ ಮಾತು.
ಹೀಗಾಗಿ ಕೆ.ಆರ್. ಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರ ‘ಕೈ’ ಗೆ ದಕ್ಕಲಿದೆ ಎಂಬುದು ಕುತೂಹಲ ಮೂಡಿಸಿರುವುದಂತೂ ಸತ್ಯ.




