ಭಾನುವಾರ ನಡೆದ ಬಾಂಗ್ಲಾದೇಶದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಭಾರತ ಸೋಲು ಕಂಡಿದೆ. ಭಾರತ ತಂಡ ಸೋಲಿನ ಸುಳಿಯಲ್ಲಿದ್ದಾಗ ಕ್ಯಾಚ್ ಬಿಟ್ಟ ವಾಷಿಂಗ್ಟನ್ ಸುಂದರ್ಗೆ ನಾಯಕ ರೋಹಿತ್ ಶರ್ಮಾ ಅವಾಚ್ಯ ಪದ ಬಳಸಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಶೇರ್ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ವಿಕೆಟ್ ಸೋಲು ಅನುಭವಿಸಿದೆ. ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಕಂಡ ಈ ಪಂದ್ಯದಲ್ಲಿ ಮತ್ತೊಂದೆಡೆ ಕಳಪೆ ಫೀಲ್ಡಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪ್ರಶ್ನೆಗಳು ಎದ್ದಿವೆ.
ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್ ಸೇರಿದಂತೆ ಹಲವು ಆಟಗಾರರ ಕಳಪೆ ಫೀಲ್ಡಿಂಗ್ ಕೂಡ ಪಂದ್ಯದಲ್ಲಿ ಕಂಡು ಬಂದಿದೆ. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಕಠಿಣ ಹೋರಾಟ ನೀಡುತ್ತಿದ್ದ ಟೀಮ್ ಇಂಡಿಯಾ ಸಣ್ಣಪುಟ್ಟ ತಪ್ಪುಗಳಿಂದಾಗಿ ಪಂದ್ಯ ಸೋತಿತ್ತು. ಕ್ಯಾಚ್ನ ಯತ್ನವನ್ನು ಮಾಡದ ವಾಷಿಂಗ್ಟನ್ ಸುಂದರ್ ಅವರ ಕಳಪೆ ಫೀಲ್ಡಿಂಗ್ ನೋಡಿ ರೋಹಿತ್ ಶರ್ಮಾ ಆಘಾತಕ್ಕೊಳಗಾಗಿದ್ದರು.
ನಾಯಕ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮಿತಿಮೀರಿದ್ದು, ವಾಷಿಂಗ್ಟನ್ ಬಗ್ಗೆ ಕೆಟ್ಟ ಪದ ಬಳಿಸಿದ್ದಾರೆ. ಢಾಕಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 186 ರನ್ಗಳ ಅಲ್ಪಮೊತ್ತಕ್ಕೆ ಆಲೌಟ್ ಆಯಿತು. ಭಾರತ ನೀಡಿದ 187 ರನ್ ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಬಾಂಗ್ಲಾದೇಶ 9 ವಿಕೆಟ್ ನಷ್ಟಕ್ಕೆ 187 ರನ್ ಬಾರಿಸಿ ಗೆಲುವು ಕಂಡಿತ್ತು.