Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಪೋಷಕರ ನೆಮ್ಮದಿ ಕಿತ್ತು ಕೊಂಡ ದೋಷಪೂರಿತ ಸ್ಕ್ಯಾನಿಂಗ್ ವರದಿ

ಮದ್ದೂರು ಪಟ್ಟಣದ ಬಸ್ ಡಿಪೋ ಬಳಿ ಇರುವ ಡಿ2 ಡಯಾಗ್ನೋಸ್ಟಿಕ್ ಸೆಂಟರ್ ದೋಷಪೂರಿತ ವರದಿ ನೀಡಿ ಪೋಷಕರ ನೆಮ್ಮದಿಯನ್ನೇ ಕಿತ್ತುಕೊಂಡಿದೆ.

  • ಸಿಂಧುಶ್ರೀ ಮತ್ತು ಮಹೇಶ್ ದಂಪತಿಯ ಮೂರೂವರೆ ವರ್ಷದ ಮಗು ರುಚಿತಾ
  • ಡಾ. ದೀಪಕ್ ಗೌತಮ್, ಡಾ. ಚೇತನ್ ಬಿ. ಎಸ್.ಡಾ. ದಯಾನಂದ ಎಂಬ ಮೂವರು ವೈದ್ಯರು ಸೇರಿ ನಡೆಸುತ್ತಿರುವ ಡಿ2 ಡಯಾಗ್ನೋಸ್ಟಿಕ್ ಸೆಂಟರ್
  • ಜಿಲ್ಲಾ ಗ್ರಾಹಕರ ವೇದಿಕೆ ಮೆಟ್ಟಿಲೇರಿದ ಸಿಂಧುಶ್ರೀ ಮತ್ತು ಮಹೇಶ್ ಅವರ ಪರವಾಗಿ ವಕೀಲ ಆರ್.ಜಗನ್ನಾಥ್ ವಾದ
  • ಈ ವಿಷಯದ ಬಗೆಗೆ ನಾನು ಗಂಭೀರವಾಗಿ ಪರಿಶೀಲನೆ ಡಿಎಚ್ಓ ಡಾ. ಧನಂಜಯ

ಮದ್ದೂರು ತಾಲೂಕಿನ ಗೊರವನಹಳ್ಳಿಯ ಸಿಂಧುಶ್ರೀ ಮತ್ತು ಮಹೇಶ್ ಎಂಬ ದಂಪತಿಗಳು ಡಿ2 ಡಯಾಗ್ನೋಸ್ಟಿಕ್ ಸೆಂಟರ್ ನೀಡಿದ ದೋಷಪೂರಿತ ವರದಿಯಿಂದ ಡೌನ್ ಸಿಂಡ್ರೋಮ್ (ಅನುವಂಶಿಕ ಅಸ್ವಸ್ಥತೆಯಿಂದ ಉಂಟಾಗುವ ಮಾನಸಿಕ ಮತ್ತು ದೈಹಿಕ ಅಂಗವೈಕಲ್ಯ) ಹೆಣ್ಣು ಮಗು ಜನಿಸಿದ್ದು, ಸಿಂಧುಶ್ರೀ,ಮಹೇಶ್ ಮತ್ತವರ ಪೋಷಕರು ಬದುಕಿರುವವರೆಗೂ ನೆಮ್ಮದಿಯಿಂದ ಜೀವನ ಮಾಡದೆ,ಕಣ್ಣೀರಿನಲ್ಲಿಯೇ ಜೀವನ ದೂಡುವಂತಹ ಪರಿಸ್ಥಿತಿಗೆ ತಂದಿಟ್ಟಿದೆ.

ಸಿಂಧುಶ್ರೀ ಮತ್ತು ಮಹೇಶ್ ದಂಪತಿಯ ಮೂರೂವರೆ ವರ್ಷದ ಮಗು ರುಚಿತಾ ಎಲ್ಲಾ ಮಕ್ಕಳಂತೆ ಮಾತನಾಡುವುದಿಲ್ಲ, ಎದ್ದು ನಿಲ್ಲುವುದಿಲ್ಲ, ಆಟವಾಡುವುದಿಲ್ಲ,ಡೌನ್ ಸಿಂಡ್ರೋಮ್ ಮಗುವಾದ ಕಾರಣ ಹುಟ್ಟಿದಾಗಿನಿಂದ ಹೃದಯ ಮತ್ತು ಇತರ ಅಂಗಗಳಲ್ಲಿ ದೋಷವಿದೆ.ಇದಕ್ಕೆಲ್ಲ ಕಾರಣ, ಡಿ2 ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ವೈದ್ಯ ದೀಪಕ್ ಗೌತಮ್.

ಡಾ. ದೀಪಕ್ ಗೌತಮ್, ಡಾ. ಚೇತನ್ ಬಿ. ಎಸ್.ಡಾ. ದಯಾನಂದ ಎಂಬ ಮೂವರು ವೈದ್ಯರು ಸೇರಿ ನಡೆಸುತ್ತಿರುವ ಡಿ2 ಡಯಾಗ್ನೋಸ್ಟಿಕ್ ಸೆಂಟರ್ ಗೆ ದಂಪತಿಗಳಾದ ಮಹೇಶ್ ಹಾಗೂ ಸಿಂಧುಶ್ರೀ ಕಳೆದ 21.01.2019 ರಂದು ಹೋದಾಗ ಅವರಿಗೆ ಅನಾಮಲಿ(Anamoly) ಸ್ಕ್ಯಾನಿಂಗ್ ಮಾಡಿಸಿದ್ದಾರೆ.ವರದಿಯಲ್ಲಿ ಮಗುವಿನಲ್ಲಿ ಯಾವುದೇ ದೋಷಗಳಿಲ್ಲ. ಮಗು ಆರೋಗ್ಯವಾಗಿ,ಚೆನ್ನಾಗಿದೆ ಎಂದು ತಪ್ಪಾದ ವರದಿ ನೀಡಿದ್ದಾರೆ.

ಇದರಿಂದಾಗಿ ಸಿಂಧುಶ್ರೀ ಅವರಿಗೆ 16-5-2019 ರಂದು ಹೆಣ್ಣು ಮಗು ಜನಿಸಿದೆ. ಡೌನ್ ಸಿಂಡ್ರೋಮ್ ಹೊಂದಿದ ಮಗು ಜನಿಸಿದ್ದರಿಂದ ಅಂದಿನಿಂದಲೂ ದಂಪತಿಗಳಾದ ಸಿಂಧುಶ್ರೀ, ಮಹೇಶ್ ಹಾಗೂ ಅವರ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ಕಳೆದ ಮೂರೂವರೆ ವರ್ಷಗಳಿಂದ ಇದೇ ಚಿಂತೆಯಲ್ಲಿ ದಂಪತಿಗಳು ಕೊರಗುತ್ತಿದ್ದಾರೆ.

ದಂಪತಿಗಳಾದ ಮಹೇಶ್ ಮತ್ತು ಸಿಂಧುಶ್ರೀ ರಕ್ತ ಸಂಬಂಧಿಗಳಾಗಿದ್ದು, ಇದು ಡಾ.ದೀಪಕ್ ಗೌತಮ್ ಅವರಿಗೆ ತಿಳಿದಿತ್ತು.ಈ ಕಾರಣದಿಂದ ಅವರು ಸ್ಕ್ಯಾನಿಂಗ್ ವರದಿಯನ್ನು ಇನ್ನಷ್ಟು ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ನೀಡಬೇಕಿತ್ತು.ಆದರೆ ಹಾಗೆ ಮಾಡದ ಕಾರಣ ಅಂಗವೈಕಲ್ಯದ ಮಗು ಜನಿಸಿದೆ.ಮೊದಲನೆಯ ಮಗು ಗಂಡು ಮಗುವಾಗಿದ್ದು ಆತ ಆರೋಗ್ಯವಂತನಾಗಿದ್ದಾನೆ. ಆದರೆ ಹೆಣ್ಣು ಮಗು ಬುದ್ಧಿಮಾಂದ್ಯವಾಗಿ ಜನಿಸಿರುವುದು, ಇತರ ಮಕ್ಕಳಂತೆ ಆಡಿ, ನಲಿದಾಡದೆ ಕುಳಿತ ಜಾಗದಲ್ಲಿ ಇರಬೇಕಾದ ಪರಿಸ್ಥಿತಿಯನ್ನು ಕಂಡು ಸಿಂಧುಶ್ರೀ, ಮಹೇಶ್ ಮತ್ತವರ ಕುಟುಂಬಸ್ಥರು ಕಣ್ಣೀರಿಡುವಂತೆ ಮಾಡಿದೆ.

15 ಲಕ್ಷ ದಂಡ
ಡೌನ್ ಸಿಂಡ್ರೋಮ್ ಮಗು ಜನಿಸಲು ಕಾರಣವಾದ ಡಿ2 ಡಯಾಗ್ನೋಸ್ಟಿಕ್ ಸೆಂಟರ್ ಮತ್ತು ಡಾ‌‌.ದೀಪಕ್ ಗೌತಮ್ ನಿರ್ಲಕ್ಷ್ಯದ ವಿರುದ್ಧ ಜಿಲ್ಲಾ ಗ್ರಾಹಕರ ವೇದಿಕೆ ಮೆಟ್ಟಿಲೇರಿದ ಸಿಂಧುಶ್ರೀ ಮತ್ತು ಮಹೇಶ್ ಅವರ ಪರವಾಗಿ ವಕೀಲ ಆರ್.ಜಗನ್ನಾಥ್ ವಾದ ಮಂಡಿಸಿದ್ದರು.

ಡಿ2 ಡಯಾಗ್ನೋಸ್ಟಿಕ್ ಸೆಂಟರ್ ದೋಷಪೂರಿತ ಸ್ಕ್ಯಾನಿಂಗ್ ವರದಿ ನೀಡಿರುವುದು ಸಾಬೀತಾಗಿದೆ ಎಂದು ತಿಳಿಸಿರುವ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಸಿ.ಎಂ.ಚಂಚಲ ಅವರು ಮಗುವಿನ ಪೋಷಕರಿಗೆ ಡಿ2 ಡಯಾಗ್ನೋಸ್ಟಿಕ್ ಸೆಂಟರ್ 15 ಲಕ್ಷ ಹಣ ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ.

ಇದನ್ನೂ ಓದಿರಿ : ಸ್ಕ್ಯಾನಿಂಗ್ ಲೋಪ : ಮದ್ದೂರಿನ ಡಿ2 ಡಯಗ್ನೋಸ್ಟಿಕ್ ಸೆಂಟರ್ ಗೆ 15 ಲಕ್ಷ ರೂ.ದಂಡ

ಲೈಸನ್ಸ್ ರದ್ದು ಮಾಡಿ
ದೋಷಪೂರಿತ ವರದಿ ನೀಡಿರುವ d2 ಡಯಾಗ್ನೋಸ್ಟಿಕ್ ಸೆಂಟರ್ ಲೈಸೆನ್ಸ್ ರದ್ದು ಮಾಡಿ ವೈದ್ಯರ ನಿರ್ಲಕ್ಷಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಗೊರವನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಂತಹ ದೋಷ ಪೂರಿತ ವರದಿಯಿಂದ ಮಗು ಹೆತ್ತವರು ಕಣ್ಣೀರುಡುವ ಸ್ಥಿತಿ ಇನ್ನಾರಿಗೂ ಬರಬಾರದು ಎನ್ನುವ ಗ್ರಾಮಸ್ಥರು ಜಿಲ್ಲಾ ಗ್ರಾಹಕರ ವೇದಿಕೆ ಡಿ2 ಡಯಾಗ್ನೋಸ್ಟಿಕ್ ಸೆಂಟರ್ ಗೆ ವಿಧಿಸಿರುವ 15 ಲಕ್ಷ ದಂಡದ ಹಣ ಶೀಘ್ರವಾಗಿ ಮಗುವಿನ ಪೋಷಕರಿಗೆ ಸಿಗುವಂತೆ ಮಾಡಬೇಕು ಎನ್ನುತ್ತಾರೆ.

ಅರ್ಹತೆ ಇಲ್ಲದೆ ದೋಷಪೂರಿತ ವರದಿ ನೀಡಿರುವ ವೈದ್ಯರ ಮೇಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕ್ರಮ ಜರುಗಿಸಬೇಕು.

ಪರಿಶೀಲನೆ ಮಾಡಿಸುವೆ


ಡಿಎಚ್ಓ ಡಾ. ಧನಂಜಯ ಅವರು ನುಡಿ ಕರ್ನಾಟಕ. ಕಾಮ್ ಜೊತೆ ಮಾತನಾಡಿ, ಡಿ2 ಡಯಾಗ್ನೋಸ್ಟಿಕ್ ಸೆಂಟರ್ ನೀಡಿರುವ ದೋಷಪೂರಿತ ವರದಿಯಿಂದ ಡೌನ್ ಸಿಂಡ್ರೋಮ್ ಹೊಂದಿರುವ ಮಗು ಜನಿಸಿರುವುದಕ್ಕೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಜಿಲ್ಲಾ ಗ್ರಾಹಕರ ವೇದಿಕೆ 15 ಲಕ್ಷ ದಂಡ ವಿಧಿಸಿರುವುದರಿಂದ ಬಗ್ಗೆ ನಾನು ಗಂಭೀರವಾಗಿ ಪರಿಶೀಲನೆ ನಡೆಸಿ, ತಪ್ಪಾಗಿದ್ದರೆ ಕ್ರಮ ಜರುಗಿಸುವುದಾಗಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ