ಮಂಡ್ಯ ಜಿಲ್ಲೆಯಾದ್ಯಂತ ರೈತರ ಬೆಳೆಗಳನ್ನು ಕಾಡು ಹಂದಿಗಳು ನಾಶಪಡಿಸುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯಾಧಿಕಾರಿಗಳಿಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ರೈತರು ಪ್ರಧಾನವಾಗಿ ಕಬ್ಬು, ತೆಂಗು, ರಾಗಿ ಮತ್ತು ಭತ್ತವನ್ನು ಹೆಚ್ಚಿನದಾಗಿ ಬೆಳೆಯುತ್ತಾರೆ. ಆದರೆ ಕಾಡು ಹಂದಿಗಳ ಹಿಂಡು ರೈತರ ಎಲ್ಲಾ ಬೆಳೆಗಳನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ಹಂದಿಗಳು ಹಿಂಡು ಹಿಂಡಾಗಿ ಹೊಲಗದ್ದೆಗಳಗೆ ನುಗ್ಗಿ ರೈತರಿಗೆ ಬೆಳೆ ಕೈಗೆ ಎಟುಕದ ಹಾಗೆ ಮಾಡುತ್ತಿವೆ.
ಇದುವರೆಗೆ ರೈತರ ನೂರಾರು ಎಕರೆ ಪ್ರದೇಶದಲ್ಲಿ ಕಾಡು ಹಂದಿಗಳು ಮತ್ತು ಚಿರತೆಗಳ ಹಾವಳಿ ಹೆಚ್ಚುತ್ತಿವೆ ಎಂದು ಅನೇಕ ಮಾಧ್ಯಮಗಳು ಪ್ರಕಟ ಮಾಡಿವೆ. ಆದರೂ ಅರಣ್ಯ ಇಲಾಖೆ ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಬೇಸತ್ತ ರೈತರು ತಾವುಗಳೇ ಕಾಡು ಹಂದಿಗಳನ್ನು ನಿಯಂತ್ರಿಸಲು ಮುಂದಾಗಬೇಕಾದ ಪರಿಸ್ಥಿತಿ ಬಂದಿದೆ.

ರೈತರೇ ನಿಯಂತ್ರಿಸಲು ಪ್ರಯತ್ನ ಪಟ್ಟರೆ ಕಾನೂನಿನ ಅಡಿಯಲ್ಲಿ ಅಪರಾಧ ಎಂದು ಅವರುಗಳನ್ನು ಬಂಧಿಸುವುದು, ಇಲ್ಲವೇ ರೈತರ ಮೇಲೆ ದಂಡಗಳನ್ನು ವಿಧಿಸುವುದು ಕಂಡುಬಂದಿವೆ. ಒಂದು ವೇಳೆ ರೈತರುಗಳು ಕಾಡು ಹಂದಿಗಳನ್ನು ಗುಂಡು ಹಾರಿಸಿ ಕೊಂದರೆ 24 ಗಂಟೆಯ ಒಳಗಾಗಿ ಅರಣ್ಯ ಇಲಾಖೆಗಳ ಸುಪರ್ದಿಗೆ ಒಪ್ಪಿಸಬೇಕು ಎಂಬ ಕಾನೂನುಗಳು ಇವೆ. ಆದರೆ ಬಂದೂಕುಗಳು ಇಲ್ಲದಿರುವ ರೈತರ ಕಥೆ ಏನಾಗಬೇಕು ಎಂದು ದೂರಿದ್ದಾರೆ.
ರೈತರು ಬಂದೂಕುಗಳನ್ನು ಕೊಂಡುಕೊಳ್ಳಲು ಶಕ್ತರಾಗಿಲ್ಲ. ಅರಣ್ಯಾಧಿಕಾರಿಗಳು ಕೂಡಲೇ ಇದರ ಬಗ್ಗೆ ಗಮನವಹಿಸಿ ಹಂದಿಗಳ ಹಾವಳಿಗಳನ್ನು ತಪ್ಪಿಸಬೇಕು ಹಾಗೂ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅರಣ್ಯ ಅಧಿಕಾರಿಗಳು ಈ ವಿಷಯದ ಬಗ್ಗೆ ಗಮನವಹಿಸಿ ಕಾಡು ಹಂದಿಗಳನ್ನು ರೈತರೇ ನಿಯಂತ್ರಣ ಮಾಡಿಕೊಳ್ಳುವ ಸಲುವಾಗಿ ಕಾನೂನನ್ನು ಸಡಿಲಗೊಳಿಸಬೇಕೆಂದು ಮನವಿ ಮಾಡಿದರು.




