Thursday, November 19, 2026

ಪ್ರಾಯೋಗಿಕ ಆವೃತ್ತಿ

ಆಳುವವರು – ಸಮಾಜದ ನಡುವಿನ ಸೇತುವೆ ಪತ್ರಿಕಾರಂಗ : ನಿರ್ಮಲಾನಂದನಾಥಶ್ರೀ

ಸರಿಯಾದ ರೀತಿ ಮಾಹಿತಿ ಪಡೆದ ಪ್ರಜೆಯಿಂದ ಮಾತ್ರ ಪ್ರಜಾಪ್ರಭುತ್ವ ಉಳಿಸಲು ಸಾಧ್ಯ. ಸಮಾಜ ಹಾಗೂ ಆಳುವ ವರ್ಗಗಳ ನಡುವೆ ನಿಜವಾದ ಸೇತುವೆಯಾಗಿ ಕೆಲಸ ಮಾಡುವುದೇ ಪತ್ರಿಕಾ ರಂಗದ ಜವಾಬ್ದಾರಿ ಎಂದು ಆದಿಚುಂಚನಗಿರಿ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಮಂಡ್ಯನಗರದ ಕೆ.ವಿ.ಶಂಕರಗೌಡ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮಂಡ್ಯ ಜಿಲ್ಲಾ ಘಟಕದ ವತಿಯಿಂದ ಆಯೋಜನಗೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಮತ್ತು ಮಂಡ್ಯ ಜಿಲ್ಲಾ ಘಟಕದ ೨೦೨೫-೨೮ ನೇ ಸಾಲಿನ ನೂತನ ಆಡಳಿತ ಮಂಡಳಿಯ ಅಧಿಕಾರ ಸ್ವೀಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗವಾಗಿದ್ದು ಅದಕ್ಕೆ ಅತಿಯಾದ ಶಕ್ತಿಯಿದೆ. ಆ ಶಕ್ತಿಯನ್ನು ಜಾಗರೂಕತೆಯಿಂದ ಬಳಸಿಕೊಳ್ಳಬೇಕು. ಆರೋಗ್ಯಕರ ಮಾಹಿತಿ, ಅನಾರೋಗ್ಯಕರವಾದರೆ ಪ್ರಜಾಪ್ರಭುತ್ವದ ವ್ಯವಸ್ಥೆ ಕುಸಿಯುತ್ತದೆ. ಅನಾರೋಗ್ಯಕರ ಮಾಹಿತಿ, ಸಮಾಜವನ್ನು ಒಡೆಯುವ ಕೆಲಸ ಮಾಡುತ್ತದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.

ಪತ್ರಕರ್ತರ ಮೇಲೆ ಸಮಾಜಕ್ಕೆ ತುಂಬ ವಿಶ್ವಾಸವಿದೆ. ನೀವು ನೀಡಿದ ಮಾಹಿತಿಯನ್ನು ಆ ಕ್ಷಣಕ್ಕೆ ಸಮಾಜ ನಂಬುತ್ತದೆ. ನೀವು ಮನಸ್ಸು ಮಾಡಿದರೆ ಒಬ್ಬ ವ್ಯಕ್ತಿಯನ್ನು ಯಾವ ಎತ್ತರಕ್ಕೆ ಬೇಕಾದರೂ ಕೊಂಡೊಯ್ಯೊಬಹುದು. ಯಾವ ಪಾತಾಳಕ್ಕೂ ಕುಸಿಯುವಂತೆ ಮಾಡಬಹುದು ಎಂದು ಎಚ್ಚರಿಸಿದರು.

ಶಾಸಕ ಪಿ.ರವಿಕುಮಾರ್ ಗೌಡ ಮಾತನಾಡಿ, ಪತ್ರಕರ್ತರ ಸಂಘದ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನು ನೀಡಿದೆ. ಸರ್ಕಾರ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪತ್ರಕರ್ತರ ಜೊತೆಯಿದ್ದಾರೆ. ಶಿವಾನಂದ ತಗಡೂರು ಅವರು ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಬೆನ್ನಿಗೆ ಬಿದ್ದು ಕೆಲಸ ಮಾಡಿಸುತ್ತಾರೆ ಎಂದು ಹೇಳಿದರು.

ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘ ರಾಜ್ಯದಲ್ಲಿಯೇ ಅತಿ ದೊಡ್ಡ ಭವನವನ್ನು ಹೊಂದುವಂತಾಗಬೇಕು. ಸಂಘಕ್ಕೆ ಒಂದು ಎಕರೆ ಸ್ಥಳ ಪಡೆದು ದೊಡ್ಡ ಪತ್ರಕರ್ತರ ಭವನ ನಿರ್ಮಾಣವಾಗಲಿ. ಮೂಡಾ ಮೂಲಕ ಸ್ಥಳ ನೀಡಲು ಮಂಡ್ಯ ಜಿಲ್ಲಾ ಸಂಘಕ್ಕೆ ಸ್ಥಳ ನೀಡಲು ಸಿದ್ದನಿದ್ದೇನೆ. ನೀವು ಅರ್ಜಿ ಸಲ್ಲಿಸಿ ನಿಮ್ಮ ಜೊತೆ ಇರುತ್ತೇವೆ ಎಂದು ಘೋಷಣೆ ಮಾಡಿದರು.

ಜಿಲ್ಲಾಧಿಖಾರಿ ಡಾ.ಕುಮಾರ ಮಾತನಾಡಿ, ಪತ್ರಿಕಾ ರಂಗದವರಿಗೆ ಅವರದೇ ಆದ ಗುರುತರವಾದ ಜವಾಬ್ದಾರಿಯಿದೆ. ಸಮಾಜವನ್ನು ತಿದ್ದಿ ಸರಿದಾರಿಗೆ ಕೊಂಡೊಯ್ಯವ ಮೂಲಕ ಸಾಮಾಜಿಕ ಋಣ ತೀರಿಸಬೇಕು. ಆ ಹೊಣೆಗಾರಿಯ ಮೂಲಕ ಆರೋಗ್ಯಕರ ಸಮಾಜವನ್ನು ಉನ್ನತ ರೀತಿಯಲ್ಲಿ ಕಟ್ಟಬೇಕು ಎಂದು ಸಲಹೆ ನೀಡಿದರು.

ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ಆರೋಗ್ಯಕರ ಪೈಪೋಟಿ ಮಾಡಿದರೆ ಸಮಾಜ ಹೆಚ್ಚು ತಿಳಿಯಾಗುತ್ತದೆ. ಆಡಳಿತ ವೇಳೆಯಲ್ಲಿ ಪ್ರತಿಯೊಬ್ಬ ಅಧಿಕಾರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವಂತೆ ಕ್ರಿಯಾತ್ಮಕ, ಕ್ರಿಯಾಶೀಲವಾಗಿ ಮಾಧ್ಯಮ ಕೆಲಸ ಮಾಡುತ್ತಿದೆ ಶ್ಲಾಘನೆ ವ್ಯಕ್ತಪಡಿಸಿದರು.
ಮಾಧ್ಯಮ ರಂಗ ಒಂದು ಘಟನೆಗೆ ಎಷ್ಟು ವೇಗವಾಗಿ ಪ್ರತಿಸ್ಪಂಧನೆಯನ್ನು ನೀಡುವ ಮೂಲಕ ವಿಶೇಷ ಸಾಧನೆಗೆ ದಾರಿಮಾಡಿಕೊಡುತ್ತದೆ. ಮಾಧ್ಯಮ ರಂಗದಲ್ಲಿ ಯಶಸ್ಸು ಸಾಧಿಸಲು ಜ್ಞಾನ, ಹೃದಯವಂತಿಕೆ, ಭರವಣಿಗೆಯಲ್ಲಿ ಕೌಶಲ್ಯವಿರಬೇಕು ಎಂದು ತಿಳಿಸಿದರು.

ಶಿವಾನಂದ ತಗಡೂರು ಅವರು, ಪತ್ರಕರ್ತರ ಧ್ವನಿಯಾಗಿ ದನಿಯಾಗಿ ನಿಂತು ಸಹಬಾಳ್ವೆಯಿಂದ ಎಲ್ಲರ ಭಾವನೆಗೆ ಸ್ಪಂಧಿಸುವುದು ಸುಲಭದ ಮಾತಲ್ಲ, ಆದರೆ ಆ ಕೆಲಸ ಮಾಡುತ್ತಿದ್ದಾರೆ. ಇಷ್ಟು ಪತ್ರಕರ್ತರ ಒಳಿತಿಗೆ ಕೆಲಸ ಮಾಡುವ ಶಕ್ತಿ ದೇವರು ಕರುಣಿಸಲಿ ಎಂದು ಆಶಿಸಿದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ೧೯೩೨ರಲ್ಲಿ ಡಿ.ವಿ.ಗುಂಡಪ್ಪ ಅವರು ಹುಟ್ಟುಹಾಕಿದ ಪತ್ರಕರ್ತರ ವೃತ್ತಿಪರ ಸಂಘಟನೆ ಎಂದರೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಸಂಘಟನೆ ಬೆಳೆಯಲು ಮಂಡ್ಯ ಜಿಲ್ಲೆಯ ಪತ್ರಕರ್ತ ಸಮುದಾಯ ಅಪಾರ ಕೊಡುಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಕಾರಣದಿಂದಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯ ಉಪಾಧ್ಯಕ್ಷರಾಗಿ ಮತ್ತೀಕೆರೆ ಜಯರಾಮ್ ಹಾಗೂ ಕಾರ್ಯದರ್ಶಿಯಾಗಿ ಸೋಮಶೇಖರ್ ಕೆರಗೋಡು ಅವರ ಸ್ಥಾನಗಳನ್ನು ಮಂಡ್ಯ ಜಿಲ್ಲೆಗೆ ಉಳಿಕೊಟ್ಟಿದ್ದೇವೆ. ರಾಜ್ಯ ಸಂಘದಲ್ಲಿ ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು ಸಂಘಟನೆಯಲ್ಲಿ ಹೆಗಲಿಗೆ ಹೆಗಲು ನೀಡಿ ಕೆಲಸ ಮಾಡುತ್ತಿದ್ದಾರೆ ಎಂದು ಹೆಮ್ಮೆಯ ನುಡಿಗಳನ್ನಾಡಿದರು.

ಪತ್ರಕರ್ತರ ಸಂಘದ ಚುನಾವಣೆ ನಡೆಸಲು ಎರೆಡು ಕೆರೆ ನೀರು ಕುಡಿದಿರಬೇಕು. ಸರ್ಕಾರಿ ಅಧಿಕಾರಿಗಳು ಚುನಾವಣೆ ನಡೆಸಲು ಹರಸಾಹಸ ಪಡುವಂತಾಗುತ್ತದೆ. ಚುನಾವಣೆ ನಡೆಸಲು ೬ ತಿಂಗಳು ಶ್ರಮಿಸಬೇಕು. ರಾಜ್ಯದ ೩೨ ಜಿಲ್ಲೆಗಳು ಸೇರಿ ಹೊರಗಿನ ಮುಂಬೈ ಕರ್ನಾಟಕ ಹಾಗೂ ಕಾಸರಗೂಡಿನ ಸಂಘದ ಚುನಾವಣೆಗಳು ನಡೆಸಬೇಕಿರುತ್ತದೆ. ಇದನ್ನು ಪೂರ್ಣಗೊಳಿಸಲು ದೆಷ್ಟು ಬಾರಿ ನ್ಯಾಯಾಲಯಗಳಿಗೆ ಹಾಜರಾಗಬೇಕು ಎಂಬುದನ್ನು ಲೆಕ್ಕಿಸಲಾಗದು ಎಂದು ಹೇಳಿಕೊಂಡರು.

ಮಾತುಕತೆಯಿಂದ ಸಾಕಷ್ಟು ಸಮಸ್ಯೆಗಳನ್ನು ಬಗೆಹರಿಸಿ, ಎಲ್ಲ ಜಿಲ್ಲೆಗಳಲ್ಲು ಆದಷ್ಟು ಅವಿರೋಧ ಆಯ್ಕೆಗೆ ಶ್ರಮಿಸುವ ಕೆಲಸ ಮಾಡಿದರೂ ಅಲ್ಲಲ್ಲಿ ಇನ್ನಷ್ಟು ಸಮಸ್ಯೆಗಳು ಎದುರಾಗುತ್ತವೆ. ಕಳೆದ ಬಾರಿ ಚುಣಾವಣೆ ನಡೆಯುತ್ತಿರುವಂತೆಯೇ ಹೈಕೋರ್ಟ್ ಮೆಟ್ಟಿಲೇರುವಂತಾಯಿತು. ಚುನಾವಣಾ ಫಲಿತಾಂಶ ಘೋಷಣೆ ಮಾಡದೇ ಮುಚ್ಚಿನ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ನೀಡುವಂತೆ ಆರೋಪ ಮಾಡಲಾಗಿತ್ತು. ನ್ಯಾಯಾಲಯ ಚುನಾವಣೆಯನ್ನು ಶಿಸ್ತುಬದ್ಧವಾಗಿ ನಡೆದಿದೆ ಎಂದು ತೀರ್ಪು ಸಂಘಟನೆ ಪರವಾಗಿ ಎತ್ತಿ ಹಿಡಿದಿತ್ತು ಎಂದು ನೆನೆದರು.

ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಅಧಿಕಾರ ಸ್ವೀಕಾರ ಸಮಾರಂಭದ ಸೌಭಾಗ್ಯ ಎಲ್ಲರಿಗೂ ಬರಲು ಸಾಧ್ಯವಿಲ್ಲ. ರಾಜ್ಯ ಸಂಘವೂ ಈ ತೀರ್ಮಾನ ಮಾಡಿರುವುದು ಕಾಕತಾಳಿಯವಲ್ಲ ಎಂದರು.

ಪದಗ್ರಹಣ ನಿಮಿತ್ತ ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದ ನಿರ್ಗಮಿತ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್ ಹಾಗೂ ಪ್ರಧಾನ ಕಾರ್ಯದರ್ಶಿ ಆನಂದ್ ಅವರು ನೂತನ ಅಧ್ಯಕ್ಷ ಕೆ.ಎನ್.ರಾಘವೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಿದರು.

ಕಾರ್‍ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಪಿ.ಜೆ.ಚೈತನ್ಯ ಕುಮಾರ್, ಕೆ.ಎನ್.ರವಿ, ಬಿ.ಪಿ. ಪ್ರಕಾಶ್, ಹಿರಿಯ ಪತ್ರಕರ್ತರಾದ ಎ.ಎಲ್.ಬಸವೇಗೌಡ, ಚುನಾವಣಾಧಿಕಾರಿ ಶಿವಾನಂಜಯ್ಯ (ನಂಜಪ್ಪ), ನಿರ್ಗಮಿತ ಅಧ್ಯಕ್ಷ ಕೆ.ಎನ್.ನವೀನ್ ಕುಮಾರ್, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಆನಂದ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅಂಶಿ ಪ್ರಸನ್ನಕುಮಾರ್, ಉಪಾಧ್ಯಕ್ಷ ಮತ್ತೀಕೆರೆ ಜಯರಾಮ್, ಜಿ.ಸಿ.ಲೋಕೇಶ್, ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ