Friday, November 20, 2026

ಪ್ರಾಯೋಗಿಕ ಆವೃತ್ತಿ

ಶಾಸಕ ಅನ್ನದಾನಿ ಹೇಳುತ್ತಿರುವ ಸುಳ್ಳುಗಳ ಬಗ್ಗೆ ಎಚ್ಚರವಿರಲಿ : ಪಿ.ಎಂ.ನರೇಂದ್ರಸ್ವಾಮಿ

ಮಳವಳ್ಳಿ ಪಟ್ಟಣದ ಐಬಿಯಲ್ಲಿ ಕುಳಿತು ರಾಜಕಾರಣ ಮಾಡುತ್ತಿದ್ದವರು ಚುನಾವಣೆ ಸಮೀಪಿಸುತ್ತಿದ್ದಂತೆ
ಬೀದಿಗೆ ಬಂದು ಸುಳ್ಳುಗಳನ್ನು ಹೇಳಲು ಶುರು ಮಾಡಿದ್ದು, ಕ್ಷೇತ್ರದ ಜನರು ಹಾಗೂ ಕಾರ್ಯಕರ್ತರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ಮಾಜಿ ಸಚಿವ ಪಿ‌.ಎಂ.ನರೇಂದ್ರಸ್ವಾಮಿ ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ಶಾಂತಿ ಸಮುದಾಯ ಭವನದಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಎಂ.ಬಿ.ಮಲ್ಲಯ್ಯ ಅಧಿಕಾರ ಸ್ವೀಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ನಾಲ್ಕು ವರ್ಷಗಳಿಂದ ಐಬಿಯಲ್ಲಿ ಕುಳಿತು ಕಾಲಹರಣ ಮಾಡಿದ ಶಾಸಕ ಅನ್ನದಾನಿ, ಈಗ ಬೀದಿಗೆ‌ ಇಳಿದು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಕೆಲವರನ್ನು ಬಳಸಿಕೊಂಡು ಅಪಪ್ರಚಾರ ಮಾಡಿಸುವ ಮೂಲಕ ಎತ್ತಿ ಕಟ್ಟುವ ಕೆಲಸ ಮಾಡುವುದರ ಜೊತೆಗೆ ಗೊಂದಲ ಸೃಷ್ಠಿಸಲು ಶುರು ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಕರೆ ನೀಡಿದರು.

ಕಾಂಗ್ರೆಸ್ ಪಕ್ಷ ಅಭಿವೃದ್ದಿಯ ಜೊತೆಯಲ್ಲಿ ಇದ್ದು, ಕ್ಷೇತ್ರವನ್ನು ಯಾವ ರೀತಿ ಅಭಿವೃದ್ದಿ ಪಡಿಸಬೇಕೆಂಬು ವುದನ್ನು ಮಾಡಿ ತೋರಿಸಿದೆ. ಆದರೆ ಕಳೆದ ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಮಳವಳ್ಳಿ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಅಭಿವೃದ್ಧಿ ನಡೆದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಅಭಿವೃದ್ಧಿ ಮರೀಚಿಕೆ

ಕಾಂಗ್ರೆಸ್ ಪಕ್ಷ ಚುನಾವಣೆಯನ್ನು ಎದುರು ನೋಡುತ್ತಿದೆ. ಇಡೀ ರಾಜ್ಯದಲ್ಲಿ ಹೇಗಾದರೂ ಸರಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಕೇಂದ್ರ ಬಿಜೆಪಿ ಸರ್ಕಾರ, ರಾಜ್ಯದಲ್ಲಿರುವ ಬಿಜೆಪಿ ಮತ್ತು ಜೆಡಿಎಸ್ ಸೇರಿ, ಷಡ್ಯಂತ್ರ ನಡೆಸಿವೆ. ಜನರ ಮನಸ್ಸಿನಲ್ಲಿ ಪ್ರಾಮಾಣಿಕ ಪಕ್ಷವಾಗಿ ಕಾಂಗ್ರೆಸ್ ನೆಲೆಸಿದ್ದು, ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಎಲ್ಲರೂ ಒಗ್ಗಟ್ಟಿನಿಂದ ಚುನಾವಣೆಯನ್ನು ಎದುರಿಸಿ ಯಶಸ್ಸು
ಪಡೆಯುತ್ತೇವೆ‌. ಕಳೆದ ನಾಲ್ಕೂವರೆ ವರ್ಷದಲ್ಲಿ ಕ್ಷೇತ್ರದಲ್ಲಿ ಅಭಿವೃದ್ದಿ ಎಂಬುದು ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅವ್ಯವಹಾರ ಬಿಚ್ಚಿಡುವೆ

ನಾನು ಇದುವರೆಗೂ ಶಾಸಕ ಅನ್ನದಾನಿ ಅವರ ಬಗ್ಗೆ ಮಾತಾಡಿರಲಿಲ್ಲ‌.ಎಚ್‌ಡಿ.ಕುಮಾರಸ್ವಾಮಿ ಅವರ ಯಾತ್ರೆ ಮುಗಿದ ನಂತರ ಮಳವಳ್ಳಿ ತಾಲ್ಲೂಕಿನಲ್ಲಿ ನಡೆಯುತ್ತಿರುವ ದುರಾಡಳಿತ, ಭ್ರಷ್ಟಚಾರ ಸೇರಿದಂತೆ ಇತರೆ ಅವ್ಯವಹಾರಗಳು, ಮಳವಳ್ಳಿ ಜನರಿಗೆ ಮಾಡಿರುವ ಅನ್ಯಾಯವನ್ನು ದಾಖಲೆ ಸಮೇತ ಬಿಚ್ಚಿಡುವ ಕೆಲಸ ಮಾಡುತ್ತೇನೆ. ಕೇಂದ್ರದ ಯೋಜನೆಯಲ್ಲಿ ನಡೆದಿರುವ ಡೀಲ್ ಬಗ್ಗೆ ಮಾತನಾಡುವ ದಿನ ಬಂದಿದ್ದು, ದಾಖಲೆಯೊಂದಿಗೆ ಮಾತನಾಡುತ್ತೇನೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ವೇಳೆ ಮಾತಿನಲ್ಲಿ ಹಿಡಿತವಿರಲಿ, ಟೀಕೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆದರದೆ ತಕ್ಕ ಉತ್ತರವನ್ನು ನೀಡಲಿದ್ದಾರೆಂದು ಎಚ್ಚರಿಸಿದರು.

ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ನೇಮಕಾತಿ ಪತ್ರವನ್ನು ಎಂ.ಬಿ.ಮಲ್ಲಯ್ಯ ಅವರಿಗೆ ಹಸ್ತಾಂತರ ಮಾಡಿದರು. ನೂತನ ಕಾರ್ಯಾಧ್ಯಕ್ಷ ಮಲ್ಲಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ಕಾರ್ಯಕರ್ತರು ಅಭಿನಂದಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಕೆಪಿಸಿಸಿ ಸದಸ್ಯರಾದ ಸಿದ್ದೇಗೌಡ, ಪುಟ್ಟಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ತಾ.ಪಂ ಮಾಜಿ ಉಪಾಧ್ಯಕ್ಷ ಸಿ. ಮಾಧು, ಜಿ.ಪಂ.ಮಾಜಿ ಸದಸ್ಯೆ ಸುಷ್ಮಾ, ತಾ.ಪಂ. ಮಾಜಿ ಅಧ್ಯಕ್ಷ ವಿಶ್ವಾಸ್, ಸುಂದರೇಶ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಸುಂದರ್‌ರಾಜು, ಖಜಾಂಚಿ ಬಂಕ್ ಮಹದೇವು, ದೇವರಾಜು, ಶಿವರಾಜು ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ