ಕಬ್ಬು ಬೆಲೆ ನಿಗದಿ, ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 52 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ, ರಾಜ್ಯ ಸರ್ಕಾರ ಸ್ಪಂದಿಸದ ಹಿನ್ನಲೆಯಲ್ಲಿ ಇಂದು ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಮಂಡ್ಯ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಇಂದು ರೈತರು ಸರ್ಕಾರದ ಗಮನ ಸೆಳೆಯಲು ಕೈ ಯಿಂದ ರಕ್ತ ಬಸಿದುಕೊಂಡು ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ ಮಾಡುವ ಮೂಲಕ ಹೋರಾಟದ ಕಿಚ್ಚನ್ನು ಹೆಚ್ಚಿಸಿದರು.

ಪ್ರತಿಭಟನೆ ಸ್ಥಳದಲ್ಲಿ ಪೋಲಿಸರು ಇದ್ದಂತೆಯೇ ಕಾರಿನಿಂದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆ ತಂದು ಇಡುತ್ತಿದ್ದಂತೆಯೇ, ಮೊದಲೇ ಸಿರಿಂಜಿನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ ರಕ್ತವನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆಗೆ ಸುರಿದರು.
ಸುಮಾರು 30 ಕ್ಕೂ ಹೆಚ್ಚು ರೈತರು ಸಿಎಂಗೆ ರಕ್ತಾಭಿಷೇಕ ಮಾಡಿದರು. ಕೂಡಲೇ ಪೋಲಿಸರು ರಕ್ತಾಭಿಷೇಕ ಮಾಡಿದ ರೈತರನ್ನು ಬಂಧಿಸಿ, ಕರೆದೊಯ್ದರು.
ರಕ್ತದ ಅಭಿಷೇಕಕ್ಕೆ ಒಳಗಾದ ಸಿಎಂ ಪ್ರತಿಮೆಯನ್ನು ವಶಕ್ಕೆ ಪಡೆದ ಪೊಲೀಸರು,ಶಾಮಿಯಾನ ಕಿತ್ತು ಹಾಕಿದರು.ಪಾತ್ರೆಗಳು,ಸ್ಟವ್,ಹೊದಿಕೆಗಳು,ಅಕ್ಕಿ,ಈರುಳ್ಳಿ ಸೇರಿದಂತೆ ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡಿದರು.
ಈ ಸಂದರ್ಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಮುಖಂಡರಾದ ಮಧುಚಂದನ್, ಪ್ರಸನ್ನ ಗೌಡ, ಹರೀಶ್, ವಿಜಯ್ ಕುಮಾರ್, ಲಿಂಗಪ್ಪಾಜಿ ಸೇರಿದಂತೆ ಹಲವರಿದ್ದರು.




