ಕೇಂದ್ರ ಗೃಹ ಸಚಿವ ಅಮಿತ್ ಶಾ ಡಿ.30 ರಂದು ಮಂಡ್ಯ ನಗರಕ್ಕೆ ಭೇಟಿ ನೀಡಲಿರುವ ಹಿನ್ನಲೆಯಲ್ಲಿ, ಮಂಡ್ಯ ಪೋಲಿಸರು ರೈತರ ಮೇಲೆ ದಬ್ಬಾಳಿಕೆ ನಡೆಸಿ ಸತ್ಯಾಗ್ರಹದ ಪೆಂಡಾಲ್ ಕಿತ್ತು ಹಾಕಿ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.

ಮಂಡ್ಯದ ಸರ್.ಎಂ.ವಿ. ಪ್ರತಿಮೆ ಬಳಿ ಕಬ್ಬು ದರ ನಿಗದಿ ಹಾಗೂ ಹಾಲಿನ ದರ ಹೆಚ್ಚಳಕ್ಕೆ ಆಗ್ರಹಿಸಿ ಕಳೆದ 52 ದಿನಗಳಿಂದ ರೈತರು ಹೋರಾಟ ಮುಂದುವರೆಸಿದ್ದರು. ಇಂದು ಮುಖ್ಯಮಂತ್ರಿ ಭಾವಚಿತ್ರಕ್ಕೆ ರಕ್ತಾಭಿಷೇಕ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಡಿ.30 ರಂದು ಮಂಡ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ ಸಂದರ್ಭದಲ್ಲಿ ಧರಣಿ ಸತ್ಯಾಗ್ರಹ,ಪ್ರತಿಭಟನೆ ನಡೆಯಬಾರದೆಂದು ಪೋಲಿಸರು ಇಂತಹ ನೀಚ ಕೃತ್ಯಕ್ಕೆ ಕೈ ಹಾಕಿದ್ದಾರೆಂದು ರೈತಸಂಘದ ಮುಖಂಡರು ಆರೋಪಿಸಿದರು.
ಲಾಠಿಯಲ್ಲಿ ಬಡಿದರು
ಸತ್ಯಾಗ್ರಹದ ಪೆಂಡಾಲ್ ಕಿತ್ತುಹಾಕಿ ಹೋರಾಟ ನಿರತ ರೈತರನ್ನು ಬಂಧಿಸುತ್ತಿದ್ದ ಸಂದರ್ಭದಲ್ಲಿ ಪೋಟೋ, ವೀಡಿಯೋ ಮಾಡುತ್ತಿದ್ದ ರೈತರ ಮೇಲೆ ಪೋಲಿಸರು ಲಾಠಿಯಿಂದ ತೀವ್ರವಾಗಿ ಬಡಿದರು.

ವೇದಿಕೆಯನ್ನು ಕಿತ್ತೊಗೆದು ಶಾಮಿಯಾನವನ್ನು ನೆಲಸಮ ಮಾಡಿದರು. ಹೋರಾಟ ನಿರತ ರೈತರ ಮೇಲೆ ಬಿಜೆಪಿ ಸರ್ಕಾರ ದಮನಕಾರಿ ನೀತಿ ಮೂಲಕ ಹತ್ತಿಕ್ಕಿರುವುದಕ್ಕೆ ರೈತ ಸಮುದಾಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ರಾಷ್ಟ್ರ ನಾಯಕರಿಗೆ ಅವಮಾನ
ಸತ್ಯಾಗ್ರಹದ ವೇದಿಕೆಯಲ್ಲಿದ್ದ ರಾಷ್ಟ್ರ ನಾಯಕರ ಭಾವಚಿತ್ರಗಳನ್ನು ಉದ್ಯಾನವನದ ಬೇಲಿಯ ಬಳಿ ಬಿಸಾಕಲಾಗಿತ್ತು. ಹೋರಾಟಗಾರ ಸುಂದರೇಶ್ ರ ಭಾವಚಿತ್ರ ನೆಲದ ಮೇಲೆ ಬಿದ್ದಿದ್ದರೆ, ಮಹಾತ್ಮ ಗಾಂಧೀಜಿಯವರ ಭಾವಚಿತ್ರ ಕುರ್ಚಿಯ ಮೇಲೆ ಅಂಗಾತ ಬಿದ್ದಿತ್ತು.

ಬಿ.ಆರ್. ಅಂಬೇಡ್ಕರ್, ಪ್ರೊ.ಎಂ.ಡಿ.ನಂಜುಂಡಸ್ವಾಮಿ, ರೈತ ನಾಯಕ ಕೆ.ಎಸ್ ಪುಟ್ಟಣ್ಣಯ್ಯನವರ ಭಾವಚಿತ್ರ ಕುರ್ಚಿ ಮೇಲಿದ್ದವು. ಸಾರ್ವಜನಿಕರು ರಾಷ್ಟ್ರ ನಾಯಕರ ಭಾವಚಿತ್ರವನ್ನು ಬಿಸಾಡಿರುವ ಬಗ್ಗೆ ಕಿಡಿಕಾರಿದಾಗ ಪೊಲೀಸರು ಫೋಟೋಗಳನ್ನು ಟೆಂಪೋ ದೊಳಗೆ ಹಾಕಿದರು.
ಹತ್ತಿಕ್ಕಲೆಂದೇ ಬಂದಿದ್ರು
ಪ್ರತಿಭಟನಾ ಸ್ಥಳದಲ್ಲಿದ್ದ ಅಸ್ತವ್ಯಸ್ತವನ್ನು ನೋಡಿದರೆ ಪೊಲೀಸರು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಉದ್ದೇಶ ಹೊಂದಿದ್ದರೆ ವಿನಹ ಕಾನೂನಾತ್ಮಕ ಪ್ರಕ್ರಿಯೆಯನ್ನು ನಡೆಸಲು ಬಂದಿರಲಿಲ್ಲ ಎಂಬುದು ಗೊತ್ತಾಗುತ್ತಿತ್ತು.

ವೇದಿಕೆಗೆ ಹಾಕಿದ್ದ ಡಯಾಸ್, ಶಾಮಿಯಾನ,ಅಕ್ಕಿ,ಈರುಳ್ಳಿ,ಗ್ಯಾಸ್ ಸಿಲಿಂಡರ್ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ರೈತರ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕಲು ಪೋಲಿಸರು ಬಂದಿದ್ದರು ಎಂದು ರೈತಸಂಘದ ಕಾರ್ಯಕರ್ತರು ಕಿಡಿಕಾರಿದರು.




