ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ‘ಸಾಂಬಶಿವ ಪ್ರಹಸನ’ವನ್ನು ಅಸಹ್ಯವಾಗಿ ತಿರುಚಿ ಪ್ರದರ್ಶಿಸಿರುವ ಬಗ್ಗೆ ನನಗೆ ತುಂಬ ವಿಷಾದವಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಿ ಎಂದು ಸಾಹಿತಿ ಡಾ.ಚಂದ್ರಶೇಖರ ಕಂಬಾರ ಮನವಿ ಮಾಡಿದ್ದಾರೆ.
ಈ ಕುರಿತು ಮೈಸೂರಿನ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, “ಮೊದಲನೆಯದಾಗಿ ನನ್ನ ನಾಟಕ ಪ್ರದರ್ಶಿಸುವುದವರ ಬಗ್ಗೆ ನನ್ನ ಅನುಮತಿ ಕೇಳಬೇಕಾಗಿತ್ತು. ಆದರೆ, ಯಾರು ಅನುಮತಿ ಕೇಳಿಲ್ಲ. ಅಲ್ಲದೆ, ರಂಗಾಯಣ ಅನುಮತಿ ಇಲ್ಲದೆ ನಾಟಕ ಪ್ರದರ್ಶನಕ್ಕೆ ಅವಕಾಶ ನೀಡಿದೆ” ಎಂದು ಹೇಳಿದ್ದಾರೆ.
“ಎರಡನೆಯದಾಗಿ, ನಾನು ಬರೆದಿರುವ ಯಾವುದೇ ನಾಟಕಗಳಲ್ಲಿ ವ್ಯಕ್ತಿಗತ ನಿಂದನೆ ಇಲ್ಲ. ಅನುಮತಿ ಇಲ್ಲದೇ ನಾಟಕವನ್ನು ಪ್ರದರ್ಶಿಸಿದ್ದಕ್ಕೆ, ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟವರಿಗೆ, ಇಲ್ಲದ ಸಾಹಿತ್ಯವನ್ನು ಸೇರಿಸಿದ್ದಕ್ಕೆ ನಿರ್ದೇಶಕರ ಮೇಲೂ ಹಾಗೂ ಈ ಅಹಿತಕರ ವಾತಾವರಣಕ್ಕೆ ಕಾರಣರಾದ ಸಂಬಂಧಪಟ್ಟ ಎಲ್ಲರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.