ನಾಗಮಂಗಲ ತಾಲ್ಲೂಕಿಗೆ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ ಭೇಟಿ ನೀಡಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಹುಲಿಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಘನ ತ್ಯಾಜ್ಯ ನಿರ್ವಹಣಾ ಘಟಕವನ್ನು ಪರಿಶೀಲಿಸಿದರು.
ತ್ಯಾಜ್ಯ ನಿರ್ವಹಣೆಯನ್ನು ವೈಜ್ಞಾನಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಉದ್ದೇಶದಿಂದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳೊಡನೆ ಸಭೆಯಲ್ಲಿ ಸಂವಾದ ನಡೆಸಿದರು.

ಸ್ವಚ್ಛ ಭಾರತ್ ಮಿಷನ್ (ಗ್ರಾ) ಹಂತ-2 ರ ಘಟಕಾಂಶಗಳಾದ ಘನ ತ್ಯಾಜ್ಯ ನಿರ್ವಹಣೆ, ಬೂದು ನೀರಿನ ನಿರ್ವಹಣೆ, ಮಲ ತ್ಯಾಜ್ಯ ನಿರ್ವಹಣೆ, ಅವಳಿಗುಂಡಿ ಶೌಚಾಲಯ ನಿರ್ಮಾಣ, ಗೋಬರ್ ಧನ್ ಘಟಕಗಳ ಅನುಷ್ಠಾನ ಮಾಡುವ ಕುರಿತು ಮಾಹಿತಿ ನೀಡಿ, ಪ್ರಗತಿಯನ್ನು ಪರಿಶೀಲಿಸಿದರು.
ನಂತರ ಈ ಯೋಜನೆಯಡಿ ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯಿತಿಯಿಂದ ತ್ಯಾಜ್ಯ ನಿರ್ವಹಣೆಗಾಗಿ ಆಯ್ಕೆಯಾಗಿರುವ ಸ್ವ-ಸಹಾಯ ಸಂಘದ ಮಹಿಳೆಯರ ವಾಹನ ಚಾಲನಾ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಕಾರಣದಿಂದ ಸ್ವಾವಲಂಬಿ, ಸ್ವಾಭಿಮಾನ ಹಾಗೂ ಆರ್ಥಿಕವಾಗಿ ಸಬಲೀಕರಣ ಹೊಂದಿ ಉನ್ನತ ಮಟ್ಟದ ಜೀವನ ನಿರ್ವಹಿಸಲು ಸಾಧ್ಯವಾಗುತ್ತಿದೆ ಎಂದರು.




