Saturday, May 18, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳ ಕಲಿಕಾ ಚೇತರಿಕೆಗೆ ಕಲಿಕಾ ಹಬ್ಬ ಸಹಕಾರಿ : ನಾಗರಾಜು

ಕೋವಿಡ್-19 ಸಾಂಕ್ರಾಮಿಕವು ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರಿದ್ದು, ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ಕಲಿಕೆ ತೊಂದರೆ ನಿವಾರಣೆಗಾಗಿ ಕಲಿಕಾ ಹಬ್ಬವನ್ನು ಆಯೋಜನೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌ಪಿ ನಾಗರಾಜು ತಿಳಿಸಿದರು.

ಮಳವಳ್ಳಿ ಪಟ್ಟಣದ ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯ ಸಹಯೋಗದೊಂದಿಗೆ ನಡೆದ ಎರಡು ದಿನಗಳ ತಾಲ್ಲೂಕು ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದರು.

ಕಲಿಕಾ ಚೇತರಿಕ ಕಾರ್ಯಕ್ರಮ ಹಾಗೂ ಚಟುವಟಿಕೆ ಆಧಾರಿತ ಕಲಿಕೆ ಬಗ್ಗೆ ಪಾಲಕರು ಹಾಗೂ ಸಮುದಾಯಕ್ಕೆ ಅರಿವು ಮೂಡಿಸುವುದು, ಎಲ್ಲಾ ವಿಷಯಗಳ ಬೋಧನೆಗೆ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಕುತೂಹಲ ಮೂಡಿಸಿ, ಪ್ರಶ್ನೆ ಕೇಳುವಂತೆ ಪ್ರೋತ್ಸಾಹಿಸುವುದು, ಕಲಿಕಾ ಪ್ರಕ್ರಿಯೆನ್ನು ಹೆಚ್ಚುಸುವುದು, ವಿದ್ಯಾರ್ಥಿಗಳ ಹಿಂಜರಿಕೆ ಹೋಗಲಾಡಿಸಿ, ಆತ್ಮವಿಶ್ವಾಸ ಹೆಚ್ಚಿಸುವುದು ಕಲಿಕಾ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ವಿವರಿಸಿದರು.

ತಾಲ್ಲೂಕಿನ 22 ಕ್ಲಸ್ಟರ್ ಹಂತದ 110 ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದ್ದು, ಪ್ರತಿ ಶಿಕ್ಷಕರು 150 ಮಕ್ಕಳಿಗೆ ಹಬ್ಬದ ಮೂಲಕ ಮಕ್ಕಳಿಗೆ ಉಪಯುಕ್ತವಾಗುವ ರೀತಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ, ತರಗತಿಯೊಳಗಿನ ಕಲಿಕೆಗಿಂತ ಭಿನ್ನವಾಗಿ ಮಕ್ಕಳಲ್ಲಿ ಸೃಜನಶೀಲತೆ, ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ಕಲಿಕೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಕ ಅಧಿಕಾರಿ ರಾಮಲಿಂಗಯ್ಯ ಮಾತನಾಡಿ, ಮಕ್ಕಳು ಚಟುವಟಿಕೆ ಹಾಗೂ ಕ್ರಿಯಾಶೀಲತೆಯಿಂದ ಕಲಿಯುವ ವಾತಾವರಣವನ್ನು ರೂಪಿಸುವಲ್ಲಿ ಕಲಿಕಾ ಹಬ್ಬ ಸಹಕಾರಿಯಾಗಿದೆ ಎಂದು ತಿಳಿಸಿದರು.

ಕೋವಿಡ್ ಸಮಯದಲ್ಲಿ ಮಕ್ಕಳ ಓದಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಓದುವಿನ ಗುಣಮಟ್ಟವನ್ನು ಹೆಚ್ಚುಸುವ ಉದ್ದೇಶದಿಂದ ಮಕ್ಕಳ ಹಬ್ಬವನ್ನು ಆಯೋಜನೆ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಜಯಪ್ರಕಾಶ್, ನಿವೃತ್ತ ಪ್ರೋ.ನಾಗರಾಜೇಗೌಡ, ವಿದ್ಯಾವಿಕಾಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದೊಡ್ಡಯ್ಯ ಹಾಗೂ ಸಂಪನ್ಮೂಲ ವ್ಯಕ್ತಿಗಳು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!