✍️ ಚೇತನ್ ಕಾಗೇಪುರ
ಇಂದು ಮಳವಳ್ಳಿಯಿಂದ ಕಿರುಗಾವಲಿಗೆ ಹೋಗಲು ಮಳವಳ್ಳಿ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡಿನಲ್ಲಿ ನಿಂತಿದ್ದ ಬಸ್ಸೊಂದನ್ನು ಹತ್ತಿದೆ, ಅದರ ನಿರ್ವಾಹಕರು ಬಾಗಿಲಿನ ಮೆಟ್ಟಿಲ ಮೇಲೆ ನಿಂತು ಇನ್ನೇನು ಹೊರಡಲು ಸಿದ್ಧತೆ ನಡೆಸಿದ್ದರು. ಬಸ್ಸು ಹತ್ತಿದ್ದ ನಾನು ಬಾಗಿಲಿನಿಂದ 2-3 ಸೀಟುಗಳ ಮುಂದೆ ಖಾಲಿಯಿದ್ದ ಜಾಗದಲ್ಲಿ ಕುಳಿತು ಕೈಯಲ್ಲಿದ್ದ ಮ್ಯಾಗಜಿನ್ ಓದಲು ಆರಂಭಿಸಿದೆ.
ಬಸ್ಸಿನೊಳಗೆ ಕುಳಿತಿದ್ದ ಕೆಲವರು ಮೊಬೈಲ್ನಲ್ಲಿ ಹಾಡುಗಳನ್ನು ಹಾಕಿದ್ದರು, ಯಾವ ಹಾಡೂ ಸ್ಪಷ್ಟವಾಗಿ ಕೇಳಿಸುತ್ತಿರಲಿಲ್ಲ, ಮನಸ್ಸಿಗೆ ಕಿರಿಕಿರಿ ಆಗತೊಡಗಿತು. ಅಷ್ಟರಲ್ಲಿ ಬಸ್ಸಿನ ಚಾಲಕ ತನ್ನ ಸೀಟಿನಲ್ಲಿ ಬಂದು ಕುಳಿತೊಡನೆ ನನ್ನ ಹಿಂಬದಿಯಿಂದ ಬಸ್ಸಿನ ನಿರ್ವಾಹಕ ಜೋರೋ ಧನಿಯಲ್ಲಿ ಎಲ್ಲರೂ ಒಮ್ಮೆ ಇಲ್ಲಿ ಕೇಳಿ, ಯಾರೂ ಮೊಬೈಲ್ ಹಾಡುಗಳು, ವಿಡಿಯೋಗಳನ್ನು ಜೋರು ದನಿಯಲ್ಲಿ ಹಾಕಬಾರದು, ನಿಮಗೆ ಅಗತ್ಯವಿದ್ದರೆ ಇಯರ್ ಫೋನ್ ಬಳಸಿ, ಇದು ಸಾರ್ವಜನಿಕ ಸಾರಿಗೆ ಯಾರೂ ಯಾರಿಗೂ ಕಿರಿಕಿರಿ ಮಾಡಿ ತೊಂದರೆ ಕೊಡಬೇಡಿ, ಜಪಾನ್ ದೇಶದ ಸಿಸ್ಟಮ್ ಹಾಗಿದೆ ಸ್ವೀಟ್ಝರ್ಲ್ಯಾನ್ಡ್ ದೇಶದ ಸಿಸ್ಟಮ್ ಹೀಗಿದೆ ಎನ್ನುತ್ತಾ ಕಾಲ ಕಳೆವ ನಾವು ನಮ್ಮಲ್ಲೂ ಅಂಥ ಸಿಸ್ಟಮ್ ಬರಲು ಮೊದಲು ನಾವು ಬದಲಾಗೋಣ. ಇನ್ನು ಹೊರಡೋಣ ಎನ್ನುತ್ತಾ ರೈಟ್ ಹೇಳಿದರು.
ಹೌದು ಒಮ್ಮೆ ಯೋಚಿಸುತ್ತಿದ್ದಾಗ ಪ್ರಯಾಣದಲ್ಲಿ ಹಾದಿಯಲ್ಲಿ ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುವ ನಾಗರೀಕರ ಚಿತ್ತ ಹಲವು ಚಿಂತನೆಗಳಿಂದ ತುಂಬಿರುತ್ತದೆ. ಪ್ರತಿಯೊಬ್ಬರ ಮನಸ್ಥಿತಿ ಹೇಗಿರುತ್ತದೆಂದು ಊಹಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಒಬ್ಬರಿಗೆ ಅಸ್ಪತ್ರೆಯದು ಚಿಂತೆ, ಇನ್ನೊಬ್ಬರಿಗೆ ತಮ್ಮ ಸ್ಥಳಗಳಿಗೆ ತಲುಪಿ ತಮ್ಮ ಕೆಲಸ ಬೇಗ ಮಾಡಿ ಮುಗಿಸುವ ಒತ್ತಡದ ಚಿಂತೆ, ಮತ್ತೊಬ್ಬರ ಮನೆಯಲ್ಲಿ ಸಾವು ಕೂಡ ಆಗಿರಬಹುದು, ಇನ್ನೊಬ್ಬರ ಮನೆಯಲ್ಲಿ ಸಂಭ್ರಮದ ವಾತಾವರಣವಿರಬಹುದು, ಮಗದೊಬ್ಬರ ಮನೆಯಲ್ಲಿ ಕಲಹಗಳಿರಬಹುದು… ಈ ರೀತಿಯ ಹಲವು ಚಿಂತೆಗಳು ಪ್ರಯಾಣಿಕರ ಮುಖ ಮಂಡಲದಲ್ಲಿ ಮನೆ ಮಾಡಿರುತ್ತದೆ.
ಇಂತಹ ಸಂದರ್ಭದಲ್ಲಿ ಬಸ್ ನಲ್ಲಿ ಪ್ರಯಾಣಿಸುವ ಕೆಲ ಪ್ರಯಾಣಿಕರು ತಮಗೆ ಇಷ್ಟ ಬಂದ ಸಂಗೀತ, ಸಿನಿಮಾ, ರೀಲ್ಸ್ ಇನ್ಯಾವುದೋ ನಮೂನೆಯ ಸೌಂಡ್ ಗಳನ್ನು ಹಾಕಿದಾಗ ಹಲವು ಚಿಂತೆಗಳಿರುವ ಪ್ರಯಾಣಿಕರು ಇದನ್ನು ಯಾವ ರೀತಿ ಆಸ್ವಾಧಿಸಲು ಸಾಧ್ಯ ಹೇಳಿ…ಕಂಡಕ್ಟರ್ ಮೊದಲು ನಾವು ಬದಲಾಗೋಣ… ರೈಟ್ ಅಂದಿದ್ದು ದಿಟವೆನಿಸಿತು. ಇದನ್ನು ಕೇಳಿಸಿಕೊಂಡ ನಾನು ಹಿಂತಿರುಗಿ ನಿರ್ವಾಹಕರನ್ನು ನೋಡಿ ನಕ್ಕು ನನ್ನ ಕೈಯೆತ್ತಿ ವಿಶ್ ಮಾಡಿದೆ, ಅವರೂ ನಕ್ಕರು.
ಕೊನೆಗೆ ನಾನು ಇಳಿಯುವ ನಿಲ್ದಾಣ ಬಂದಾಗ ಇಳಿಯಲು ಬಾಗಿಲ ಬಳಿ ಬಂದು ಅವರ ಪರಿಚಯಿಸಿಕೊಂಡು ನಿಮ್ಮಂತವರು ಸಮಾಜಕ್ಕೆ ಅಗತ್ಯವಿದೆ ಎಂದು ಹೇಳಿ ಅವರ ಒಂದು ಫೋಟೋ ತೆಗೆದುಕೊಳ್ಳಲು ಹೋದಾಗ ಸಂಕೋಚದಿಂದ ಮುಖವನ್ನು ಅವರ ಕೈಯಲ್ಲಿದ್ದ ಟಿಕೆಟ್ ಕೊಡುವ ಸಾದನದತ್ತ ತಿರುಗಿಸಿದರು.
ನಿಜಕ್ಕೂ ಹೀಗೆ ಅಲ್ಲವೇ ಒಬ್ಬೊಬ್ಬರೂ ಬದಲಾದಾಗಲೇ ಉತ್ತಮ ಬದಲಾವಣೆ ಸಾಧ್ಯವಲ್ಲವೇ…..?




