Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಶಾಲಾ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ

ವರದಿ : ನಾಗಮ್ಮ

ಮಕ್ಕಳಲ್ಲಿ ನಾಯಕತ್ವ ಗುಣ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಿಕೊಡುವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಶಾಂತಿನಿಕೇತನ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಚ್.ಸಿ.ಉಮೇಶ್ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರ ಶಾಂತಿನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಹೇಗೆ ರಚನೆ ಮಾಡಲಾಗುತ್ತದೆ ಎಂಬುವುದನ್ನು ತಿಳಿಸಲು ಚುನಾವಣೆ ನಡೆಸಲಾಗುತ್ತಿದೆ. ಇದರಲ್ಲಿ ಜನಪ್ರತಿನಿಧಿಗಳನ್ನು ಹೇಗೆ ಆಯ್ಕೆ ಮಾಡಬೇಕೆಂಬುವುದನ್ನು ತಿಳಿಸಿಕೊಡುತ್ತದೆ. ಹಾಗಾಗಿ ಅಚ್ಚುಕಟ್ಟಾಗಿ ಚುನಾವಣೆ ಯಾವ ರೀತಿ ನಡೆಯುವುದೋ ಅದೇ ರೀತಿ ವ್ಯವಸ್ಥಿತವಾಗಿ ಮಕ್ಕಳಿಂದ ಮತದಾನ ಮಾಡಿಸಲಾಗುತ್ತಿದೆ ಎಂದರು.

ಪರಿಸರ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ಅಣ್ಣೂರು ಸತೀಶ್ ಮಾತನಾಡಿ, ಚುನಾವಣೆಗಳಲ್ಲಿ ಆಮಿಷಗಳನ್ನೊಡ್ಡಿ ಮತಗಳನ್ನು ಕಸಿಯಲು ಪ್ರಯತ್ನಿಸುತ್ತಾರೆ. ಯೋಗ್ಯರಿಗೆ ಮತನೀಡಿ ಆಯ್ಕೆಮಾಡಬೇಕು. ಪ್ರಸ್ತುತ ದಿನದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇದನ್ನು ಶುದ್ದಿಕರೀಸಲು ಇಂದಿನ ಯುವ ಪೀಳಿಗೆ ಮುಂದಾಗಬೇಕೆಂದು ಕರೆ ನೀಡಿದರು.

ಶಾಲೆಯ ವಿದ್ಯಾರ್ಥಿಗಳು ಆಧಾರ್ ಕಾರ್ಡ್ ಹಿಡಿದು ಸರದಿ ಸಾಲಿನಲ್ಲಿ ನಿಂತು ಹರ್ಷದಿಂದ ಮತದಾನ ಮಾಡಿದರು. ಶಾಲೆಯ 2 ಕೊಠಡಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಿತು.

ಶಾಲೆಯ ಮುಖ್ಯ ಚುನಾವಣಾ ಆಯುಕ್ತರಾಗಿ ಮುಖ್ಯಶಿಕ್ಷಕ ದೇವೇಗೌಡ ಕಾರ್ಯ ನಿರ್ವಹಿಸಿದರು. ಚುನಾವಣಾ ಆಯುಕ್ತರಾಗಿ ಶಿಕ್ಷಕರಾದ ವೆಂಕಟೇಶ್, ರಘು ಭಾಗವಹಿಸಿದ್ದರು.

ಮತಕಟ್ಟೆ ಅಧಿಕಾರಿಗಳಾಗಿ ಶಾಲೆಯ ನಿರ್ದೇಶಕಿ ಆಶಾರಾಣಿ ವಿಶ್ವನಾಥ್, ರಂಜಿತ, ಪಲ್ಲವಿ, ಕುಸುಮ, ಐ.ಆರ್.ಶೋಭಾ, ಸುಷ್ಮಿತ, ಸಾನಿಕ ಭಾಗವಹಿಸಿದ್ದರು. ಶಾಲೆಯ ಸ್ನೇಹಬಂಧು ಎಜುಕೇಷನ್ ಟ್ರಸ್ಟ್ ಸದಸ್ಯರು ಮಕ್ಕಳ ಚುನಾವಣಾ ಕಾರ್ಯಕ್ರಮಕ್ಕೆ ಶುಭಕೋರಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ