✍️ ಬಚ್ಚಾ ಲಾಲ್ ಉನ್ಮೇಶ್, ಹಿಂದಿ ಮೂಲ (ಕೌನ್ ಜಾತ್ ಹೋ ಭಾಯಿ)
ಕನ್ನಡಕ್ಕೆ: Nisar Ahmed
ಪ್ರಶ್ನೋತ್ತರದಂತಿರುವ ಈ ಪದ್ಯ ಹಿಂದಿಯ ಯುವಕವಿ ಬಚ್ಚ ಲಾಲ್ ಉನ್ಮೇಶ್ ಎಂಬುವರದ್ದು. ಪ್ರಶ್ನೆಗಳು ಉದಾಸೀನತೆಯನ್ನು ತೋರುತ್ತವೆಯಾದರೆ ಉತ್ತರಗಳು ಗಂಭೀರವಾಗಿವೆ.
ತಮ್ಮ, ನಿಂದು ಯಾವ ಜಾತಿ?
ತಮ್ಮ, ನಿಂದು ಯಾವ ಜಾತಿ?
ನಾನು ದಲಿತ ಸ್ವಾಮಿ
ಅಲ್ಲಪ್ಪ ‘ನೀನು ಯಾವ ಜಾತೀಲಿದೀಯ? ಅಂತ
ಇದೀನಲ್ಲ ಸ್ವಾಮಿ, ನಿಮ್ಮ ಹೇಳುವ ಬೈಗುಳದಲ್ಲಿ
ಗೊಬ್ಬು ನಾರುವ ಮೋರಿಗಳಲ್ಲಿ
ನಮಗಾಗಿಯೇ ಬೇರೆ ಇಟ್ಟಿರುವ ಪ್ಲೇಟುಗಳಲ್ಲಿ
‘ನನಗನ್ನಿಸ್ತು ನೀನು ಹಿಂದುಗಳಲ್ಲಿ ಬರ್ತೀಯ ಅಂತ’
‘ಬರ್ತೀನಲ್ಲ ಸ್ವಾಮಿ, ನಿಮ್ಮ ಎಲೆಕ್ಷನ್ ಟೈಮಲ್ಲಿ’
ತಮ್ಮ, ನೀನು ಏನು ತಿನ್ತೀಯ?
‘ಎಲ್ಲಾ ದಲಿತ್ರು ತಿನ್ನೋದೇ ನಾನೂ ತಿನ್ತೀನಿ ಸ್ವಾಮಿ’
ಅದಲ್ಲ, ನೀನು ಊಟ ಏನು ಮಾಡ್ತೀಯ? ಅಂತ
ನೀವು ಹೊಡಿಯೋ ಏಟು ತಿನ್ತೀನಿ
ಸಾಲದ ಭಾರ ತಿನ್ತೀನಿ
ಮನೇಲಿ ತಿನ್ನೋಕೆ ಏನೂ ಇಲ್ದೇ ಇದ್ರೆ ಉಪ್ಪು, ಉಪ್ಪಿನಕಾಯಿ ತಿನ್ತೀನಿ
ನಾನಂದ್ಕೊಂಡೆ ನೀನು ಕೋಳಿ ತೀನ್ತಿಯೇನೋ ಅಂತ
ತಿನ್ತೀನಿ ಸ್ವಾಮಿ! ನಿಮ್ಮ ಎಲೆಕ್ಷನ್ ಬಂದಾಗ
ತಮ್ಮ ನೀನೇನು ಕುಡಿತೀಯ?
ಒಬ್ಬ ದಲಿತ ಕುಡಿಯೋದೆನ್ನೆಲ್ಲ ಕುಡೀತೀನಿ ಸ್ವಾಮಿ
ಅಲ್ಲಪ್ಪ, ನೀನು ಏನೇನು ಕುಡಿತೀಯ? ಅಂತ.
ಮುಟ್ಟಿಸಿಕೊಳ್ಳದಿರುವವರ ಪಾಡು
ದಮ್ಮುಕಟ್ಟಿ ಸತ್ತ ಕನಸುಗಳ ನೋವು
ಬೆಂದಕಣ್ಣುಗಳಲ್ಲಿ ನೀರಾದ ಭ್ರಮೆ ಕುಡಿತೀನಿ ಸ್ವಾಮಿ
ನಾನಂದ್ಕೊಂಡೆ ನೀನು ಸಾರಾಯಿ ಕುಡೀತೀಯ ಅಂತ
ಕುಡೀತೀನಲ್ಲ ಸ್ವಾಮಿ, ನಿಮ್ಮ ಎಲೆಕ್ಷನ್ ಟೈಮಲ್ಲಿ
ತಮ್ಮ ನಿನಗೆ ಏನಾದ್ರೂ ಅನುಕೂಲ ಆಗೈತಾ?
ದಲಿತರಿಗೆ ಏನೆಲ್ಲ ಅನುಕೂಲ ಆಗೈತೋ ಅದೆಲ್ಲ ಆಗಿದೆ ಸ್ವಾಮಿ
ಅಲ್ಲಪ್ಪ, ನಿನಗೆ ಏನೆಲ್ಲ ಸೌಲಭ್ಯ ಸಿಕ್ಕೈತೆ? ಅಂತ
ಬರೀ ಅವಮಾನ,
ನೀವು ಬಿಟ್ಟಿರೋ ಕೊಳಕು
ನಿಮ್ಮಂತ ಪರೋಪಜೀವಿಗಳ ದರ್ಪ
ನಾನಂದ್ಕೊಂಡೆ ನಿನಗೆ ತುಂಬ ಭರವಸೆಗಳು ಸಿಕ್ಕಿರಬಹುದು ಅಂತ
ಸಿಗ್ತವಲ್ಲ ಸ್ವಾಮಿ, ನಿಮ್ ಎಲೆಕ್ಷನ್ ಟೈಮಲ್ಲಿ
ತಮ್ಮ, ಏನು ಮಾಡ್ಕೊಂಡಿದೀಯ?
ಒಬ್ಬ ದಲಿತ ಏನೇನು ಮಾಡ್ತಾನೋ ಅದೆಲ್ಲ ಮಾಡ್ತೀನಿ ಸ್ವಾಮಿ
ನಾನು ಕೇಳಿದ್ದು ನೀನೂ ಏನೇನು ಕೆಲಸ ಮಾಡ್ತೀಯ? ಅಂತ
ನೂರು ದಿನ ಕೆರೆ ಕೆಲಸ ಮಾಡಿದೀನಿ
ಬೆಳಿಗ್ಗೆಯಿಂದ ಸಂಜೆವರೆಗೆ ಬೆವರು ಸುರಿಸಿದೀನಿ
ಹೋಗಿ ಬರೋ ಸಾಹುಕಾರರಿಗೆ ಕೈ ಮುಗಿದಿದ್ದೀನಿ
ನಾನಂದ್ಕೊಂಡೆ ಏನಾದ್ರೂ ದೊಡ್ಡ ಕೆಲಸಾನೇ ಮಾಡಿರ್ಬೇಕು ಅಂತ
ಮಾಡಿದೀನಲ್ಲ ಸ್ವಾಮಿ, ನಿಮ್ಮ ಎಲೆಕ್ಷನ್ ಪ್ರಚಾರ




