ಸಂಪುಟ ಸೇರ್ಪಡೆ ಸಲುವಾಗಿ ನಾನಾ ಕಸರತ್ತು ಮಾಡಿದ್ದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಮರಳಿ ಪಕ್ಷದ ವಿರುದ್ಧವೇ ರೆಬೆಲ್ ಆಗಿದ್ದಾರೆ.
ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದರೂ, ಸಂಪುಟ ಪುನಾರಚನೆಯಾಗದ ಬಗ್ಗೆ ಅಸಮಾಧಾನ ಹೊಂದಿರುವ ಈಶ್ವರಪ್ಪ, ಬಹಿರಂಗವಾಗಿಯೇ ತಮ್ಮ ಅಭಿಪ್ರಾಯ ಹೊರಹಾಕಿದ್ದು, ‘ಅವರು ಕೊಟ್ಟರೂ ನನಗೆ ಸಚಿವ ಸ್ಥಾನ ಬೇಡ’ ಎಂದು ಹೇಳಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಈಶ್ವರಪ್ಪ, ತಮಗೆ ಮಂತ್ರಿ ಸ್ಥಾನ ಬೇಡ ಎಂದು ಹೇಳಿ ಬಂದಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನನಗೆ ಮಂತ್ರಿ ಸ್ಥಾನ ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಹೇಳಿದ್ದೇನೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತ ಯಾರಿಗೂ ಕನಸು ಬಿದ್ದಿರಲಿಲ್ಲ/ ಅವರು ಮಲಗಿದ್ದು ಒಂದು ಕಡೆ, ಪತ್ರ ಸಿಕ್ಕಿದ್ದು ಮತ್ತೊಂದು ಕಡೆ. ಆರೋಪ ಬಂದ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಕಳಂಕ ಬಾರದಿರಲಿ ಎನ್ನುವ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೆ. ಈಗ ವಿಚಾರಣೆ ನಡೆದು ನನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಕಾರ್ಯಕರ್ತರ ಅಪೇಕ್ಷೆಯ ಮೇರೆಗೆ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದೆ. ಅಂದು ಮಂತ್ರಿ ಮಾಡುವ ಭರವಸೆಯನ್ನು ಅವರೇ ನೀಡಿದ್ದರು” ಎಂದು ಈಶ್ವರಪ್ಪ ಹೇಳಿದರು.
“ಆದರೆ, ಈಗ ಆ ವಿಚಾರದಲ್ಲೇನೂ ಬೆಳವಣಿಗೆ ಕಾಣುತ್ತಿಲ್ಲ. ಈಗ ಅವರಿಗೆ ಏನೇನು ಸಮಸ್ಯೆ ಇದೆ ಎನ್ನುವುದು ಗೊತ್ತಿಲ್ಲ. ಕಳಂಕ ರಹಿತನಾಗಿದ್ದೇನೆಂದು ತೋರಿಸಲೇ ನಾನು ಮಂತ್ರಿ ಸ್ಥಾನ ಕೇಳಿದ್ದೇನೆಯೇ ಹೊರತು ಸರ್ಕಾರದ ಕೊನೆ ಅವಧಿಯಲ್ಲೇನೋ ಸಾಧನೆ ಮಾಡಿ ತೋರಿಸುತ್ತೇನೆ ಎಂದಲ್ಲ” ಎಂದ ಈಶ್ವರಪ್ಪ, “ಇವರ ನಡೆ ಕಾದು ಸಾಕಾಗಿದೆ. ಹೀಗಾಗಿ, ಸಚಿವ ಸ್ಥಾನ ನನಗೆ ಬೇಡ ಎಂದು ಹೇಳಿ ಬಂದಿದ್ದೇನೆ” ಎಂದು ಹೇಳಿದರು.
ಮಾಜಿ ಸಚಿವ ಈಶ್ವರಪ್ಪ ನಡೆ ಈಗ ಬಿಜೆಪಿ ಪಕ್ಷದೊಳಗೆ ಮತ್ತೊಮ್ಮೆ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸುತ್ತಿದೆ. ಇದು ಪಕ್ಷದೊಳಗೆ ಮತ್ತೊಂದು ಬಂಡಾಯ ಸೂಚನೆಯ ಲಕ್ಷಣ ಎನ್ನುವುದು ರಾಜಕೀಯ ವಲಯದ ಮಾತುಕತೆ.




