✍️ ಸಂತೋಷ್ ಜಿ
ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವವರು ಅಪರೂಪ. ಹೀಗಿರುವಾಗ ಜೀವಿಸಿರುವಾಗಲೆ ಸಮಾಜಕ್ಕೆ ಕೈಲಾದಷ್ಟು ಅಳಿಲು ಸೇವೆ ಮಾಡಬೇಕೆಂದು ಚಿಂತಿಸುವಾಗ ಹುಟ್ಟಿಕೊಂಡಿದ್ದೆ ಮಂಡ್ಯದ ಪುಷ್ಪಾಂಜಲಿ ಟ್ರಸ್ಟ್. ಈ ಟ್ರಸ್ಟ್ ನ ಹೆಸರಿನಲ್ಲಿ ಸಂದೀಪ್ ಜೈನ್ ಎಲೆಮರೆಯ ಕಾಯಿಯಂತೆ ಮಂಡ್ಯ ಜನರ ಸೇವೆಯಲ್ಲಿ ತೊಡಗಿದ್ದಾರೆ. ಅವರ ಸಾರ್ಥಕ ಕೆಲಸ ಕಾರ್ಯಕ್ರಮಗಳನ್ನು ಕುರಿತು ನುಡಿಕರ್ನಾಟಕ.ಕಾಮ್ ಈ ವಿಶೇಷ ಲೇಖನವನ್ನು ಪ್ರಕಟಿಸಿದೆ.
ಟ್ರಸ್ಟ್ ಉದಯವಾಗಿದ್ದು ಏಕೆ ?
ಸಂದೀಪ್ ಜೈನ್ ಅವರ ತಾಯಿ ಪುಷ್ಪದೇವಿ ಅವರು ಸೆ.7, 2000 ರಲ್ಲಿ ನಿಧನರಾಗುತ್ತಾರೆ. ಆಗ ತಮ್ಮ ತಾಯಿಯ ಹೆಸರಲ್ಲಿ ಸಮಾಜಕ್ಕೆ ಏನಾದರೂ ಒಂದಷ್ಟು ಸಮಾಜಸೇವೆ ಮಾಡಬೇಕೆಂದು ನಿರ್ಣಯಿಸಿ, ಸಂದೀಪ್ ಜೈನ್ ಅವರು ತನ್ನ ಸ್ನೇಹಿತರೊಡಗೂಡಿ ಸಮಾನ ಮನಸ್ಕರನ್ನೆಲ್ಲ ಸೇರಿಸಿ ಅಕ್ಟೋಬರ್ 2, 2022 ರಂದು ಪ್ರಾರಂಭ ಮಾಡಿದ್ದೆ ಪುಪ್ಪಾಂಜಲಿ ಟ್ರಸ್ಟ್.
ಈ ಟ್ರಸ್ಟ್ ಮುಖ್ಯ ಕಾರ್ಯಗಳನ್ನೆಲ್ಲಾ ಸಂಚಾಲಕರಾಗಿ ನೋಡಿಕೊಳ್ಳುವುದು ಇದೆ ಸಂದೀಪ್ ಜೈನ್. ವರ್ಷಕ್ಕೆ ಕನಿಷ್ಠ ಆರು ಕಾರ್ಯಕ್ರಮಗಳನ್ನು ರೂಪಿಸಿ, ಸಮಾಜಮುಖಿ ಸೇವೆ ಸಲ್ಲಿಸುವುದು ಇವರ ಮಹದಾಸೆಯಾಗಿದೆ.
ಸಂದೀಪ್ ಜೈನ್ ಅವರ ಮನದ ಮಾತು
ನಾವು (ಜೈನರು) ಮಂಡ್ಯದಲ್ಲಿ ಹುಟ್ಟಿ, ಒಂದಷ್ಟು ಬದುಕು ಕಟ್ಟಿಕೊಂಡಿದ್ದೇವೆ. ಮಂಡ್ಯದ ಜನತೆ, ಸಮಾಜಕ್ಕೆ ಎಲ್ಲರನ್ನೊಳಗೊಂಡು, ಕೈಲಾದ ಮಟ್ಟಿಗೆ ಸಣ್ಣ ಸಹಾಯವನ್ನಾದರೂ ಮಾಡಬೇಕು. ನಮ್ಮ ಮುತ್ತಜ್ಜನ ಹೆಸರು ನೆನಪಿಗೆ ಬರುವುದಿಲ್ಲ ಅಥವಾ ಹಿಂದಿನ ತಲೆಮಾರು ನಮಗೆ ನೆನಪಿಗೆ ಬರುವುದಿಲ್ಲ. ಆದರೆ ಮಹಾತ್ಮ ಗಾಂಧಿಯವರ ಹೆಸರನ್ನು ಏಕೆ ನೆನಸಿಕೊಳ್ಳುತ್ತೇವೆ ಹೇಳಿ ? ಗಾಂಧಿಯವರು ಈ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದಲ್ಲಿ ಋಣಾತ್ಮಾಕ ಸಂಗತಿಗಳೇ ಹೆಚ್ಚಾಗಿ ಕೇಳುತ್ತಿದ್ದೇವೆ. ಈ ನನ್ನ ಸಮಾಜ ಸೇವೆ ಒಂದೈದು ಮಂದಿಗಾದರೂ ಪ್ರೇರಣೆ ನೀಡಲಿ, ಸಮಾಜಕ್ಕೆ ಧನಾತ್ಮಕ ಚಿಂತನೆಗಳು ಮತ್ತು ಆದರ್ಶಗಳನ್ನು ಮುಂದಿಟ್ಟು ಸಮಾಜದ ಬದಲಾವಣೆಯಲ್ಲಿ ಪ್ರತಿಯೊಬ್ಬ ನಾಗರೀಕರು ಪಾತ್ರ ವಹಿಸಿದರೆ ಉತ್ತಮವಲ್ಲವೇ ಎಂದರು.
ಸಾರ್, ಆ ಭಗವಂತ ಇನ್ನು ಐದು ವರ್ಷ ನನ್ನನ್ನು ಬದುಕಿಸಿ ಬಿಡಲಿ, ಎಷ್ಟು ಸಾಧ್ಯವೋ ಅಷ್ಟು ನನ್ನ ಕೈಲಾದ ಸಮಾಜಸೇವೆಯನ್ನು ಮಾಡುತ್ತೇನೆ. ನೀವು ಭಗವಂತನನ್ನು ನೋಡಬೇಕೆಂದರೆ ಬನ್ನಿ, ಎಲ್ಲಿಯಾದರೂ ಹೋಗಿ ಹಸಿದವರಿಗೆ ಒಂದಷ್ಟು ಊಟ ನೀಡೋಣ.. ಆ ಕಣ್ಣಲ್ಲಿ, ಆ ಮುಖದಲ್ಲಿ ಬೀರುವ ನಗುವೇ ಭಗವಂತ ಸಾರ್ ಎನ್ನುತ್ತಾರೆ ಸಂದಿಪ್ ಜೈನ್.
ಮಂಡ್ಯದ ತೂಬಿನಕೆರೆ ಬಳಿ ಪುಷ್ಪಾಶ್ರಯ ಎನ್ನುವ ಆಶ್ರಮವನ್ನು ಕಟ್ಟಿದ್ದಾರೆ. ಅಲ್ಲಿ ಜೈನ ಸಂತರು ಮತ್ತು ಶಾಖಾಹಾರ ಸೇವಿಸುವ ಇತರ ಸ್ವಾಮಿಗಳಿಗೆ ವಿಶ್ರಮಿಸಿ ಹೋಗಲು ಅವಕಾಶ ಮಾಡಿಕೊಡಲಾಗಿದೆ ಎಂದು ಸಂಸ್ಥಾಪಕ ಸಂದೀಪ್ ಜೈನ್ ನುಡಿಕರ್ನಾಟಕ.ಕಾಮ್ ಜೊತೆಗೆ ಹಂಚಿಕೊಂಡರು.

ಪುಷ್ಪಾಂಜಲಿ ಟ್ರಸ್ಟ್ ನ ವತಿಯಿಂದ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ಚಳಿಯಿಂದ ನಡುಗುತ್ತಿರುವ ಬಡ ನಿರ್ಗತಿಕರಿಗೆ ನೂರಕ್ಕೂ ಹೆಚ್ಚು ಕಂಬಳಿಗಳನ್ನು ದಾನವಾಗಿ ನೀಡಿದ್ದಾರೆ. ಮಂಡ್ಯದ ಸಂಜನ ಎನ್ನುವ ಕ್ರೀಡಾಪಟುವಿಗೆ ತಮ್ಮ ಕೈಲಾದ ಸಹಾಯ ಮಾಡಿದೆ ಈ ಟ್ರಸ್ಟ್.

ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ, ‘ವಾಟರ್ ಫಾರ್ ವಾಯ್ಸ್ ಲೆಸ್’ ಎನ್ನುವ ಹೆಸರಿನಡಿ ಮೂಕ ಪ್ರಾಣಿಗಳಿಗೆ ನೀರುಣಿಸಲು ಬೊಗುಣಿಗಳನ್ನು ಮಂಡ್ಯ ನಗರದಾದ್ಯಂತ ನೀಡಿದ್ದಾರೆ.
View this post on Instagram
“>
ಈ ಟ್ರಸ್ಟ್ ನ ಮುಂದಿನ ಕಾರ್ಯಕ್ರಮದ ಭಾಗವಾಗಿ ಮಂಡ್ಯದ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಶಿಬಿರವನ್ನು ಏರ್ಪಡಿಸಿದ್ದಾರೆ.
ಪುಷ್ಪಾಂಜಲಿ ಟ್ರಸ್ಟಿನಿಂದ ನಡೆದ ಕಾರ್ಯಕ್ರಮಗಳು
ಉಜ್ವಲ್ ಭಾರತ್
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ, ಹಿಂದುಳಿದ 125 ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು ಮಂಡ್ಯದ ಗುರುಭವನದಲ್ಲಿ ಏರ್ಪಡಿಸಲಾಗಿತ್ತು. ಭಾಗವಹಿಸಿದ ತಂಡಗಳನ್ನು ವಯಸ್ಸಿನ ಆಧಾರದ ಮೇಲೆ ಎರಡು ತಂಡಗಳನ್ನಾಗಿ ಮಾಡಿ, ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಲಾಗಿತ್ತು.

ಎರಡು ತಂಡಗಳಲ್ಲಿ ವಿಜೇತರಾದ 6 ವಿದ್ಯಾರ್ಥಿಗಳಿಗೆ 4,500 ರೂ. ಬೆಲೆ ಬಾಳುವ ಡಿನ್ನರ್ ಸೆಟ್ ಗಳನ್ನು ನೀಡಲಾಗಿತ್ತು. ಈ ಕಾರ್ಯಕ್ರಮದಿಂದ ಪ್ರೇರಿತನಾದ ಓರ್ವ ವಿದ್ಯಾರ್ಥಿ, ಪುಷ್ಪಾಂಜಲಿಯವರ ಭಾವಚಿತ್ರ ಬರೆದು ಅಚ್ಚರಿ ಮೂಡಿಸಿದ್ದ.
ಮೂಕ ಪ್ರಾಣಿಗಳಿಗೆ ನೀರು (Water for voiceless)

NGO ಸಹಯೋಗದೊಂದಿಗೆ ಮೂಕಪ್ರಾಣಿಗಳಿಗೆ ನೀರುಣಿಸಲು 1001 ನೀರುಣಿಸುವ ಬೊಗುಣಿಗಳನ್ನು ಆಸಕ್ತ ಪಕ್ಷಿ ಹಾಗೂ ಪ್ರಾಣಿ ಪ್ರೇಮಿಗಳಿಗೆ ನೀಡಲು ನೊಂದಾವಣೆ ಮಾಡಿಕೊಳ್ಳಲಾಗಿತ್ತು.

ಆದರೆ 750 ಪ್ರಾಣಿ ಪ್ರೇಮಿಗಳು ಪಾಲ್ಗೊಂಡಿದ್ದರಿಂದ ಮೇಲುಕೋಟೆ ರಸ್ತೆಯಲ್ಲಿರುವ ಎ & ಎ ಕನ್ವ್ನೆಷನ್ ಹಾಲ್ ನಲ್ಲಿ ಎಲ್ಲರಿಗೂ ನೀರುಣಿಸುವ ಬೊಗುಣಿಗಳನ್ನು ವಿತರಣೆಯನ್ನು ಟ್ರಸ್ಟ್ ನ ವತಿಯಿಂದ ವಿತರಿಸಲಾಗಿತ್ತು.

ನಾಳೆ ನಡೆಯಲಿದೆ ವ್ಯಕ್ತಿತ್ವ ವಿಕಸನ ಶಿಬಿರ (Go All Out)
ಇದೇ ಫೆ.5 ರ ಭಾನುವಾರ 10 ನೇ ತರಗತಿ ಮತ್ತು ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಓದುತ್ತಿರುವ ಮಕ್ಕಳಿಗೆ ಮುಂದಿನ ಅವಕಾಶಗಳು, ಗುರಿಗಳನ್ನು ಮುಟ್ಟುವ ಸಲುವಾಗಿ, ಅವರ ಮನಸ್ಥಿತಿಯನ್ನು ಗಟ್ಟಿಮಾಡಿ , ಆತ್ಮಸ್ಥೈರ್ಯ ತುಂಬಲು ವಿದ್ಯಾರ್ಥಿಗಳನ್ನು ಪ್ರೇರೆಪಿಸಲು ವ್ಯಕ್ತಿತ್ವ ವಿಕಸನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಮತ್ತು ಮನೋವಿಜ್ಙಾನದ ಮುಖ್ಯಸ್ಥರಾದ ಡಾ. ಜಿ. ವೆಂಕಟೇಶ್ ಕುಮಾರ್ ಆಗಮಿಸುತ್ತಿದ್ದಾರೆ.
ಬೆಂಗಳೂರಿನ ಕೆ.ಎಂ.ಸಲ್ಯೂಷನ್ ನ HR ಟ್ರೈನಿಂಗ್ ನಲ್ಲಿ ಮ್ಯಾನೇಜರ್ ಆಗಿರುವ ಮತ್ತು ಪ್ರೇರಕ ಭಾಷಣಕಾರರೆಂದು ಹೆಸರುವಾಸಿ ಆಗಿರುವ ಡಾ.ಯೋಗಿತ ಅವರು ವಿದ್ಯಾರ್ಥಿಗಳೊಡನೆ ಸಂವಹಿಸಲು ಆಗಮಿಸುತ್ತಿದ್ದಾರೆ.

ಈ ವ್ಯಕ್ತಿತ್ವ ವಿಕಸನ ಕಾರ್ಯಕ್ರಮಕ್ಕೆ ಸುಮಾರು 500 ವಿದ್ಯಾರ್ಥಿಗಳು ನೊಂದಾವಣೆಯಾಗಿದ್ದು, ಮಂಡ್ಯ ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಇದೇ ಫೆ. 5 ರ ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕಾರ್ಯಕ್ರಮ ನಡೆಯಲಿದೆ. ಪುಷ್ಪಾಂಜಲಿ ಟ್ರಸ್ಟ್ ನ ವತಿಯಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀರಿನ ಬಾಟಲ್, ಬರೆದುಕೊಳ್ಳುವ ನೋಟ್ ಬುಕ್, ಲಘು ಉಪಹಾರ ಮತ್ತು ಲಘು ಪೇಯದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂದೀಪ್ ಜೈನ್ ತಿಳಿಸಿದರು.
ಪುಷ್ಪಾಂಜಲಿ ಟ್ರಸ್ಟಿನ ಮೂಲಕ ಮಂಡ್ಯ ಜನರ ಸೇವೆಗೆ ಮುಂದಾಗಿರುವ ಸಂದೀಪ್ ಜೈನ್ ಅವರ ಕೆಲಸ ಇನ್ನಷ್ಟು ಬಡವರಿಗೆ, ನೊಂದವರಿಗೆ ಹಾಗೂ ನಿರ್ಗತಿಕರಿಗೆ ಆಸರೆಯಾಗಲಿ ಎಂಬುದು ನಮ್ಮ ಆಶಯವಾಗಿದೆ.




