Monday, November 23, 2026

ಪ್ರಾಯೋಗಿಕ ಆವೃತ್ತಿ

ಕ್ಯಾನ್ಸರ್ ಆಸ್ಪತ್ರೆಗೆ ಗ್ರಹಣ : ಕ್ಯಾನ್ಸರ್ ರೋಗಿಗಳು ಹೈರಾಣ

✍️ ನಾಗೇಶ್ ಎನ್

ಇಂದು ಫೆ.4, ವಿಶ್ವ ಕ್ಯಾನ್ಸರ್ ದಿನ. ಆದರೆ ಮಂಡ್ಯ ಜಿಲ್ಲೆಯಲ್ಲಿರುವ ಸಹಸ್ರಾರು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೆ ಗ್ರಹಣ ಬಡಿದಿದ್ದು, ರೋಗಿಗಳು ಹೈರಾಣಾಗುವಂತೆ ಮಾಡಿದೆ‌.

ಮಂಡ್ಯ ಜನಪ್ರತಿನಿಧಿಗಳ ದುರಾಡಳಿತ, ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಲಕ್ಷಾಂತರ ರೋಗಿಗಳಿಗೆ ಆಶ್ರಯವಾಗಬೇಕಿದ್ದ ಮಂಡ್ಯ ಪೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆ ಕೋಮಾ ಸ್ಥಿತಿ ತಲುಪಿದೆ.

ಮಂಡ್ಯ ಜಿಲ್ಲೆಯ ಕ್ಯಾನ್ಸರ್ ರೋಗಿಗಳು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಅಲೆದಾಡುವುದನ್ನು ತಪ್ಪಿಸಲು ಹಲವು ದಿಗ್ಗಜರ ಪ್ರಯತ್ನದಿಂದ ಜಿಲ್ಲಾ ಕ್ಯಾನ್ಸರ್ ನಿಯಂತ್ರಣ ಯೋಜನೆಯಡಿ 1994 ಫೆ.5ರಂದು ಮಂಡ್ಯದಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರ ಆರಂಭವಾಯಿತು.

ಹಲವು ವರ್ಷಗಳ ಕಾಲ ಕ್ಯಾನ್ಸರ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಉತ್ತಮ ಸೇವೆಯೂ ಸಿಗುತ್ತಿತ್ತು.ಮಂಡ್ಯ ಜಿಲ್ಲೆ ಮಾತ್ರವಲ್ಲದೆ ರಾಮನಗರ, ಚನ್ನಪಟ್ಟಣ, ಮಾಗಡಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಟಿ.ನರಸೀಪುರ ಸೇರಿದಂತೆ ಹಲವು ಜಿಲ್ಲೆಗಳಿಂದ ರೋಗಿಗಳು ಬಂದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕಳೆದ ಎರಡು ವರ್ಷದಿಂದ ಆಸ್ಪತ್ರೆಗೆ ಕಾಯಕಲ್ಪ ಸಿಗದೆ ದುಸ್ಥಿತಿಯತ್ತ ಸಾಗಿರುವುದು ರೋಗಿಗಳ ಸಂಕಟವನ್ನು ಹೆಚ್ಚು ಮಾಡಿದೆ.

ರಮ್ಯಾ ಅವರು ಸಂಸದೆಯಾಗಿದ್ದ ವೇಳೆ ಫೆರಿಫೆರಲ್ ಕ್ಯಾನ್ಸರ್ ಆಸ್ಪತ್ರೆಗೆ ಸುಸಜ್ಜಿತ ಕಟ್ಟಡ ಸೇರಿದಂತೆ ಅಗತ್ಯ ಯಂತ್ರೋಪಕರಣದೊಂದಿಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಲಾಯಿತು. ಬೆಂಗಳೂರು ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಭಾಗವಾಗಿದ್ದ ಮಂಡ್ಯ ಕ್ಯಾನ್ಸರ್ ಆಸ್ಪತ್ರೆಗೆ 45 ಕೋಟಿ ರೂ ನೀಡಲು ನಿರ್ಧರಿಸಲಾಯಿತು. ಕಟ್ಟಡ ನಿರ್ಮಾಣಕ್ಕೆ ಕೇಂದ್ರದಿಂದ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ಅನುದಾನ ನೀಡಬೇಕಿತ್ತು. ಈ ಹಿನ್ನೆಲೆಯಲ್ಲಿ 12 ಕೋಟಿ ರೂ ಬಿಡುಗಡೆಯಾಯಿತು. ಆದರೆ ಈ ಹಣದಿಂದ ಕಟ್ಟಡ ನಿರ್ಮಾಣ ಮಾಡದೇ ಸಿವಿಲ್ ಕಾಮಗಾರಿ ಮಾಡಿದ ಪರಿಣಾಮ 5.65 ಕೋಟಿ ರೂ. ಹೆಚ್ಚುವರಿಯಾಯಿತು. ಈ ವೇಳೆ ಸಮರ್ಪಕ ದಾಖಲೆ ನೀಡದ ಕಾರಣಕ್ಕೆ ಅನುದಾನಕ್ಕೆ ಸರ್ಕಾರ ತಡೆ ನೀಡಿತು. ಅಂದಿನಿಂದಲೇ ಆಸ್ಪತ್ರೆಗೆ ಗ್ರಹಣ ಬಡಿಯಿತು.

ರಮ್ಯಾ ಅವರು ಸಂಸದೆಯಾಗಿದ್ದ ಒಂಭತ್ತು ತಿಂಗಳಲ್ಲಿ 45 ಕೋಟಿ ಹಣ ಮಂಜೂರು ಮಾಡಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಅವರು ಸಂಸದೆಯಾಗಿ ನಾಲ್ಕು ವರ್ಷಗಳಾಗುತ್ತಾ ಬಂದರೂ ಹೆಚ್ಚುವರಿ ಹಣ 5 ಕೋಟಿ ತರಲು ಆಗದಿರುವುದು ವಿಪರ್ಯಾಸದ ಸಂಗತಿ. ಈ ಬಗ್ಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಸುಧಾಕರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ರೋಗಿಗಳು ಹೈರಾಣ

ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಗಳು ಬಂದರೆ ಅವರನ್ನು ಬೆಂಗಳೂರು ಮತ್ತು ಮೈಸೂರಿಗೆ ರವಾನಿಸುವ ಕೆಟ್ಟ ಚಾಳಿ ನಡೆಯುತ್ತಿದೆ. ಆದರೆ ಇದರಿಂದ ರೋಗಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕನಿಷ್ಟ ಮಟ್ಟದಲ್ಲಿಯೂ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸ್ಪಂದನೆ ಸಿಗದಿರುವುದು ದುರಂತ. ಪ್ರತಿ ವಾರವೂ ರೋಗಕ್ಕೆ ಚಿಕಿತ್ಸೆ ಪಡೆಯಲು ಬೆಂಗಳೂರು, ಮೈಸೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಭಾಗದ ಜನರು ಚಿಕಿತ್ಸೆಗೆ ಹಣ ಕೊಡುವುದಲ್ಲದೆ ದೂರದ ಪ್ರಯಾಣವನ್ನೂ ಮಾಡಬೇಕಿದೆ. ಇನ್ನು ಆರ್ಥಿಕವಾಗಿ ಹಿಂದುಳಿದವರ ಪಾಡು ಹೇಳತೀರದು. ಇಂದಿಗೂ ಪ್ರತಿದಿನ 25 ರಿಂದ 30 ಜನ ರೋಗಿಗಳು ಚಿಕಿತ್ಸೆಗೆಂದು ಬಂದು ಚಿಕಿತ್ಸೆ ಸಿಗದೆ ಹೋಗುವಂತಾಗಿದೆ.

ಜನಪ್ರತಿನಿಧಿಗಳ ಅಸಡ್ಡೆ

ಮಂಡ್ಯ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಗೋಪಾಲಯ್ಯ ಇದ್ದರು. ಈಗ ಆರ್.ಅಶೋಕ್ ಬಂದಿದ್ದಾರೆ. ಮತ್ತೊಬ್ಬ ಸಚಿವ ನಾರಾಯಣಗೌಡ ಇದ್ದಾರೆ. ಆರು ಮಂದಿ ಜೆಡಿಎಸ್ ಶಾಸಕರು ಇದ್ದಾರೆ. ಇವರೆಲ್ಲ ಮನಸ್ಸು ಮಾಡಿದರೆ ಬಗೆಹರಿಸುವುದು ದೊಡ್ಡ ವಿಷಯವಲ್ಲ. ಆದರೆ ಅವರಿಗೆ ಇದು ಬೇಕಿಲ್ಲದ ವಿಷಯವಾಗಿರುವುದು ವಿಪರ್ಯಾಸ.

nudikarnataka.com
ಡಾ.ಬಿ.ಜೆ.ಮಹೇಂದ್ರ

ಈ ಬಗ್ಗೆ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ.ಮಹೇಂದ್ರ ಅವರು ನುಡಿ ಕರ್ನಾಟಕ.ಕಾಮ್ ನೊಂದಿಗೆ ಮಾತನಾಡಿ, ಇಂದು ಬೆಂಗಳೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಬೇಕಾಗಿರುವ ಹೆಚ್ಚುವರಿ 5 ಕೋಟಿ ಹಣದ ಬಗ್ಗೆ ವೈದ್ಯಕೀಯ ಇಲಾಖೆ ಕಾರ್ಯದರ್ಶಿಯ ಜೊತೆ ಮಾತುಕತೆ ನಡೆದಿದ್ದು, ಸೋಮವಾರ ತಿಳಿಯಲಿದೆ ಎಂದರು.

ಸದ್ಯಕ್ಕೆ ಬೆಂಗಳೂರು, ಮೈಸೂರು ಅಲೆದಾಡುತ್ತಿರುವ ಜಿಲ್ಲೆಯ ರೋಗಿಗಳಿಗೆ ಚಿಕಿತ್ಸೆ ಕೊಡಿಸಲು ರೇಡಿಯೇಷನ್ ಸೇಪ್ಟಿ ಆಫೀಸರ್ ನಮ್ಮಲ್ಲಿಲ್ಲ. ಅವರನ್ನು ಬೆಂಗಳೂರಿನ ಮೆಡಿಕಲ್ ಕಾಲೇಜಿನಿಂದ ನಿಯೋಜನೆ ಮಾಡಿ ಕೊಂಡಿದ್ದೇವೆ. ಇನ್ನು ಲೀನಿಯರ್ ಆಕ್ಸಿಲರೇಟರ್ ಎಂಬ ಯಂತ್ರಕ್ಕೆ 4 ಬಾರಿ ಟೆಂಡರ್ ಕರೆದಿದ್ದರೂ, ಟೆಂಡರ್ ನಿಂತಿಲ್ಲ.ಸುಮಾರು 12 ಕೋಟಿ ಹಣ ಈ ಯಂತ್ರ ಅಳವಡಿಸಲು ನಾವು ನಿಗದಿ ಮಾಡಿದ್ದು, ಆದರೆ ಇದಕ್ಕಿಂತ ಹೆಚ್ಚು ಹಣಕ್ಕೆ ಟೆಂಡರ್ ಹಾಕಿದ್ದರಿಂದ ಈಗ ವೈದ್ಯಕೀಯ ಶಿಕ್ಷಣ ಇಲಾಖೆಯೇ ಮುಂದೆ ನಿಂತು ಟೆಂಡರ್ ಪ್ರಕ್ರಿಯೆ ನಡೆಸಲಿದೆ ಎಂದು ತಿಳಿಸಿದರು.

ಹಾಳಾಗುತ್ತಿವೆ ಯಂತ್ರೋಪಕರಣ

ಪೆರಿಫೆರಲ್ ಕ್ಯಾನ್ಸರ್ ಕೇಂದ್ರದಲ್ಲಿನ ಕೋಟ್ಯಂತರ ರೂ. ಬೆಲೆಬಾಳುವ ಯಂತ್ರೋಪಕರಣ ಹಾಳಾಗುತ್ತಿವೆ. ಮಾತ್ರವಲ್ಲದೆ ಇಡೀ ಕೇಂದ್ರವೇ ಅವಸಾನದತ್ತ ಸಾಗುತ್ತಿದೆ. ಮಿಮ್ಸ್ ಬಹುತೇಕ ವಿಭಾಗ ರೋಗಿಗಳಿಂದ ತುಂಬಿ ತುಳುಕುತ್ತಿರುತ್ತದೆ. ಆದರೆ ಕ್ಯಾನ್ಸರ್ ಕೇಂದ್ರದಲ್ಲಿ ನೀರವ ಮೌನವೇ ಕಾಣಿಸುತ್ತಿದೆ. ವಿಭಾಗಕ್ಕೆ ಪ್ರವೇಶ ಪಡೆಯುವ ಸ್ಥಳದಿಂದ ಹಿಡಿದು ಕಚೇರಿ ಒಳಗಿನವರಿಗೂ ಬೆರಳೆಣಿಕೆಯಷ್ಟು ಸಿಬ್ಬಂದಿ ಮಾತ್ರ ಕಾಣಸಿಗುತ್ತಾರೆ.

ಪ್ರತಿ ರೋಗಿಗೆ ಸರ್ಕಾರದಿಂದ ಚಿಕಿತ್ಸೆಗೆಂದು ಹಣ ಕೊಡಲಾಗುತ್ತಿದೆ. ಆದರೆ ತಜ್ಞರ ಕೊರತೆಯ ಕಾರಣಕೊಟ್ಟು ಮೈಸೂರು, ಬೆಂಗಳೂರಿಗೆ ಕ್ಯಾನ್ಸರ್ ರೋಗಿಗಳನ್ನು ಕಳುಹಿಸಲಾಗುತ್ತಿದೆ. ಇದರಿಂದಾಗಿ ಬಳಕೆ ಮಾಡದ ಪರಿಣಾಮ ಯಂತ್ರಗಳು ಹಾಳಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರೆದರೆ ಮತ್ತೆ ಯಂತ್ರಗಳಿಗೆ ಬಂಡವಾಳ ಹಾಕಬೇಕಾದ ಸ್ಥಿತಿ ಬಂದರೂ ಅಚ್ಚರಿಯಿಲ್ಲ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ