ಒಣಗಿ ನಿಂತಿದ್ದ ಮರ ಉರುಳಿ ಪೌರಕಾರ್ಮಿಕನೊರ್ವ ಮೃತಪಟ್ಟಿರುವ ದುರ್ಘಟನೆ ಫೆ.9ರ ಗುರುವಾರದಂದು ಮಂಡ್ಯ ನಗರದಲ್ಲಿ ಜರುಗಿತ್ತು. ಪೌರಕಾರ್ಮಿಕ ಉದಯಕುಮಾರ್ (31) ಮೃತಪಟ್ಟಿದ್ದರು.
ಇದೇ ಫೆ 10 ಶುಕ್ರವಾರದಂದು ಪೌರ ಕಾರ್ಮಿಕನ ಕುಟುಂಬಕ್ಕೆ ಕನಿಷ್ಟ 20ಲಕ್ಷ ಪರಿಹಾರ ನೀಡುವಂತೆ ಹಾಗೂ ಮೃತ ಕುಟುಂಬಕ್ಕೆ ಅನುಕಂಪದ ನೌಕರಿ ನೀಡುವಂತೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಬಿ.ನಾಗಣ್ಣಗೌಡ, ರಾಜ್ಯ ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಡಿ.ಆರ್. ರಾಜು ಆಗ್ರಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಮಂಜು, ಆಯುಕ್ತ ಮಂಜುನಾಥ್, ನಗರಸಭಾ ಸದಸ್ಯ ಶ್ರೀಧರ್ ಈ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.
ಮಂಡ್ಯ ನಗರಸಭೆಯ ನೇರಪಾವತಿ ಪೌರಕಾರ್ಮಿಕ ಉದಯಕುಮಾರ್ ಸಾವಿನ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಪೌರಕಾರ್ಮಿಕ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನಗರಸಭೆ ವತಿಯಿಂದ ಒಟ್ಟು ಎಂಟು ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ.
ಈ ಕುರಿತು ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಎಚ್ ಎಸ್ ಮಂಜು, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ತುಷಾರಮಣಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ನಗರಸಭಾ ಸದಸ್ಯ ಶ್ರೀಧರ್ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಂ.ಬಿ.ನಾಗಣ್ಣಗೌಡ, ರಾಜ್ಯ ಪೌರಾಕಾರ್ಮಿಕರ ಸಂಘದ ಡಿ. ಆರ್. ರಾಜು, ದಿನೇಶ್, ಕರ್ನಾಟಕ ಜನಶಕ್ತಿ ಸಂಘಟನೆಯ ಸಿದ್ದರಾಜು, ಪೌರಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್, ರಾಜ್ಯ ಪೌರ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಮುಟ್ಟನಹಳ್ಳಿ ಮಹೇಶ್, ಕಾರ್ಯದರ್ಶಿ ಅರ್ಜುನ್, ವಿನೋದ್, ಖಾಯಂ ಪೌರಕಾರ್ಮಿಕರ ಸಂಘದ ಮುತ್ತಾಲಯ್ಯ ಕರುನಾಡ ಸೇವಕರ ಸಂಘದ ನಗರಾಧ್ಯಕ್ಷ ಎಂ.ಎನ್ ಚಂದ್ರು ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
ಇದಲ್ಲದೆ ಮೃತ ಕುಟುಂಬಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಖಾಯಂ ಹುದ್ದೆ ಕೊಡಿಸುವ ಭರವಸೆ ನೀಡಲಾಗಿದೆ.




