ನಾವು ಕಣ್ಣೀರು ಹಾಕಲ್ಲ, ಕಥೆಯನ್ನೂ ಹೇಳಲ್ಲ. ಕೆಲಸ ಮಾಡಿ ತೋರಿಸುತ್ತೇವೆ. ಕಳೆದ ಬಾರಿ ಜಾ.ದಳಕ್ಕೆ ಕೊಟ್ಟಂತೆ ನಮಗೂ ಒಂದು ಅವಕಾಶ ಕೊಟ್ಟು ನೋಡಿ. ಆಮೇಲೆ ಕೆಲಸ ಮಾಡದಿದ್ದರೆ ನನ್ನ ಹೆಸರನ್ನು ಬದಲಿಸಿಕೊಳ್ಳುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ ನಾರಾಯಣ್ ಹೇಳಿದರು.
ಮಂಡ್ಯ ತಾಲ್ಲೂಕಿನ ಸಾತನೂರು ಕಂಬದ ನರಸಿಂಹಸ್ವಾಮಿ ದೇವಾಲಯ ಆವರಣದಲ್ಲಿ ಬಿಜೆಪಿ ವತಿಯಿಂದ ನಡೆದ ಕಸಬಾ ಮಹಾಶಕ್ತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಲ್ಲಿ ಉತ್ತಮ ಆಡಳಿತ ನೀಡಿ ಅಭಿವೃದ್ಧಿ ಕೆಲಸ ಮಾಡಿದ್ದರು. ಅವರ ಕೊಡುಗೆಗಳು ವಿಶ್ವವೇ ಎದುರು ನೋಡುವಂತಹ ಆಡಳಿತ ಕೊಟ್ಟಿದ್ದರು. ಅಂತಹ ಸಾಧನೆಯನ್ನು ಯಾರೂ ಮಾಡಲಿಲ್ಲ ಎಂದು ಪರೋಕ್ಷವಾಗಿ ಜಾ.ದಳ ವಿರುದ್ಧ ಹರಿಹಾಯ್ದರು.

50 ವರ್ಷಗಳಲ್ಲಿ ಮಾಡದ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಐದೇ ವರ್ಷಗಳಲ್ಲಿ ಮಾಡದಿದ್ದರೆ ನನ್ನ ಹೆಸರನ್ನೇ ಬದಲಾಯಿಸಿಕೊಳ್ಳುತ್ತೇನೆ. ಕಳೆದ ಮುರ್ನಾಲ್ಕು ವರ್ಷಗಳಲ್ಲಿ ರಾಮನಗರ ಹೇಗೆ ಅಭಿವೃದ್ಧಿ ಹೊಂದಿದೆ, ಕೈಗಾರಿಕೆ, ಕೃಷಿ, ಕೌಶಲ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ನಾನು ಮಂತ್ರಿಯಾಗಿ ಕೇವಲ ಮೂರೇ ವರ್ಷದ ಅನುಭವವಿದೆ. ನಿಮಗಿರುವಂತೆ ಹಲವಾರು ವರ್ಷಗಳ ರಾಜಕೀಯ ಅನುಭವ ನನಗಿಲ್ಲದಿದ್ದರೂ, ಯಾವ ರೀತಿ ಅಭಿವೃದ್ಧಿ ಪಥದತ್ತ ದಾಪುಗಾಲು ಇಡುತ್ತಿದೆ ಎಂಬುದನ್ನು ನೋಡಬಹುದಾಗಿದೆ. ಇಂತಹ ಅಭಿವೃದ್ಧಿ ಮಂಡ್ಯದಲ್ಲೂ ಆಗಬೇಕಿದೆ ಎಂದರು.
ನಮ್ಮನೆ ಹುಡುಗ ಎಂದು ಜಿಲ್ಲೆಯ ಜನತೆ ಆಶೀರ್ವಾದ ಮಾಡಿದರು. ಆದರೆ, ಅವರಿಗೇನು ಕೊಟ್ಟಿರಿ, ನಮ್ಮ ಮನೆಯ ಸೊಸೆ, ಮೊಮ್ಮಗ, ಮಗ ಎಂದು ಕುಟುಂಬದವರೇ ರಾಜಕೀಯವಾಗಿ ಬರಬೇಕೇ, ನಮ್ಮಲ್ಲಿ ಸೋನಿಯಾಗಾಂಧಿ ಕುಟುಂಬವೂ ಇಲ್ಲ, ದೇವೇಗೌಡರ ಕುಟುಂಬವೂ ಇಲ್ಲ ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರನ್ನು ಟೀಕಿಸಿದರು.
ಬಿಜೆಪಿ ನಾಯಕ ಅಶೋಕ್ ಜಯರಾಂ ಮಾತನಾಡಿ, ಇಂದು ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೋದಿ ಅವರು ದೇಶ ಕಟ್ಟಿ ಬೆಳೆಸಿದ್ದನ್ನು ಕಂಡು ಬಿಜೆಪಿ ಪಕ್ಷ ಸೇರಿದ್ದೇನೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಪ್ರತಿ ಹಳ್ಳಿಯಲ್ಲಿಯೂ ಬಿಜೆಪಿ ಸಂಘಟನೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಸಂಪೂರ್ಣವಾಗಿ ಕಟ್ಟಿ ಬೆಳೆಸುವ ಸಂಕಲ್ಪವನ್ನು ಕಂಬದ ನರಸಿಂಹ ಸ್ವಾಮಿ ಸನ್ನಿದಾನದಲ್ಲಿ ಮಾಡುತ್ತಿದ್ದೇವೆ ಎಂದರು.
ಸಮಾರಂಭದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಮುಖಂಡರಾದ ಅಶೋಕ್ ಜಯರಾಂ, ಡಾ.ಸಿದ್ದರಾಮಯ್ಯ, ವಿದ್ಯಾ ನಾಗೇಂದ್ರ, ಡಾ.ಇಂದ್ರೇಶ್, ಎಸ್.ಪಿ.ಸ್ವಾಮಿ, ಭೀಮೇಶ್, ಸುಜಾತ ರಮೇಶ್ ಇತರರು ಭಾಗವಹಿಸಿದ್ದರು.




