Thursday, May 16, 2024

ಪ್ರಾಯೋಗಿಕ ಆವೃತ್ತಿ

ಅಧ್ಯಕ್ಷತೆ ಕಾಂಗ್ರೆಸ್ ಮುಖಂಡರದ್ದು, ರಾಜಕಾರಣ ಹಿಂದುತ್ವವಾದಿಗಳದ್ದು !

✍️ ನವೀನ್ ಸೂರಿಂಜೆ

ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಲೈಂಗಿಕ ದೌರ್ಜನ್ಯದ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಗೆ ಕಂಬಳದ ಆಹ್ವಾನ ನೀಡುವಲ್ಲೂ RSS ವ್ಯವಸ್ಥಿತವಾಗಿ ಕೆಲಸ ಮಾಡಿದೆ. ಹೇಗೆ ಅಂತೀರಾ ? ಈ ಬಗೆಗೊಂದು ನಡೆಸಿದ ಪುಟ್ಟ ಮತ್ತು ಸರಳ ತನಿಖಾ ವರದಿ ಇಲ್ಲಿದೆ, ಓದಿ…

ಇದು ಕೇವಲ ಬೆಂಗಳೂರು ಕಂಬಳದ ಕತೆಯಲ್ಲ ! ಕರಾವಳಿಯಲ್ಲಿ ನಡೆಯುವ ಅಷ್ಟೂ ಬ್ರಹ್ಮಕಲಶ, ನಾಗಮಂಡಲ, ಧರ್ಮನೇಮಗಳಲ್ಲಿ ಸಮಿತಿಯ ಅಧ್ಯಕ್ಷತೆ ಕಾಂಗ್ರೆಸ್ ಮುಖಂಡರದ್ದು, ರಾಜಕಾರಣ ಹಿಂದುತ್ವವಾದಿಗಳದ್ದು !

ಬಿಜೆಪಿಯನ್ನು ಸೋಲಿಸುವುದಷ್ಟೇ ಕೋಮುವಾದದ ವಿರುದ್ಧದ ಸಮರ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಆ ಕಾರಣಕ್ಕಾಗಿಯೇ ನಡೆಸುವ ಸಾಂಸ್ಕೃತಿಕ ರಾಜಕಾರಣವನ್ನು ಗ್ರಹಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಗ್ರಹಿಸಲಾಗದಿದ್ದರೆ ಅದು ಕಾಂಗ್ರೆಸ್ ದುರಂತ. ಆದರೆ ವಿಪರ್ಯಾಸ ಎನ್ನುವಂತೆ ಕಂಬಳವೂ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆರ್‌ಎಸ್‌ಎಸ್ ಹೆಣೆದ ಬಲೆಗೆ ಕಾಂಗ್ರೆಸ್ ಸಲೀಸಾಗಿ ಬೀಳುತ್ತದೆ !

ಬೆಂಗಳೂರು ಕಂಬಳ ಆರ್‌ಎಸ್‌ಎಸ್ ನ ‘ಹಿಡನ್ ಕಲ್ಚರಲ್ ಪೊಲಿಟಿಕ್ಸ್‘ ಜೀವಂತ ಉದಾಹರಣೆ. ಕಾಂಗ್ರೆಸ್ ಸರ್ಕಾರದ ಅನುದಾನ, ಕಾಂಗ್ರೆಸ್ ಕಾರ್ಯಕರ್ತರ ಶ್ರಮ, ಕಾಂಗ್ರೆಸ್ ನಾಯಕರ ಪ್ರಭಾವದಲ್ಲಿ ನಡೆಯುವ ಕಂಬಳದ ಆಮಂತ್ರಣ ಪತ್ರಿಕೆಗೆ ಒಮ್ಮೆ ಕಣ್ಣಾಡಿಸಿದರೆ ಆರ್ ಎಸ್ ಎಸ್ ಸಾಂಸ್ಕೃತಿಕ ರಾಜಕಾರಣದ ಬುದ್ಧಿವಂತಿಕೆ, ತಂತ್ರಗಾರಿಕೆ ಎಂತಹ ಮೂರ್ಖರಿಗೂ ಅರ್ಥವಾಗುತ್ತದೆ.

ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ, ಲೈಂಗಿಕ ದೌರ್ಜನ್ಯದ ಆರೋಪಿ ಬ್ರಿಜ್ ಭೂಷಣ್ ಸಿಂಗ್‌ಗೆ ಕಂಬಳದ ಆಹ್ವಾನ ನೀಡುವಲ್ಲೂ ಆರ್‌ಎಸ್‌ಎಸ್ ವ್ಯವಸ್ಥಿತವಾಗಿ ಕೆಲಸ ಮಾಡಿದೆ. ಹೇಗೆ ಅಂತೀರಾ ? ಈ ಬಗೆಗೊಂದು ನಡೆಸಿದ ಪುಟ್ಟ ಮತ್ತು ಸರಳ ತನಿಖಾ ವರದಿ ಇಲ್ಲಿದೆ, ಓದಿ…

ಸಿದ್ದಿ ಸಮುದಾಯದ ಆಗ್ರಹದಂತೆ ಬ್ರಿಜ್ ಭೂಷನ್ ಸಿಂಗ್ ರನ್ನು ಕರೆಸಲಾಯ್ತು ಎಂದು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಇದು ಅರ್ಧಸತ್ಯ…! ಈ ಸಿದ್ದಿ ಸಮುದಾಯ ಮತ್ತು ಬ್ರಿಜ್ ಭೂಷನ್ ಮಧ್ಯೆ ಆರ್‌ಎಸ್‌ಎಸ್ ಬ್ರಿಡ್ಜ್ ನಂತೆ ಕೆಲಸ ಮಾಡಿದೆ !

ಬುಡಕಟ್ಟು ಸಮುದಾಯಕ್ಕೆ ಸೇರಿರುವ ಸಿದ್ದಿ ಜನಾಂಗವು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ, ಅಂಕೋಲ, ಸಿರಸಿ ತಾಲೂಕುಗಳ ಹಳ್ಳಿ ಅಥವಾ ಕಾಡಂಚಿನಲ್ಲಿ ವಾಸವಾಗಿದ್ದಾರೆ. ಈ ಮುಗ್ದ, ಅಸಹಾಯಕ ಸಮುದಾಯದ ಮಧ್ಯೆ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ವೈದಿಕ ಆಚರಣೆಗಳಿಂದ ದೂರ ಇರುವ ಈ ಸಮುದಾಯವನ್ನು ವೈದಿಕರ ಹೋಮ ಹವನ, ಪೂಜೆಗಳಿಗೆ ಒಗ್ಗಿಸಿಕೊಂಡಿದೆ. ಸಿದ್ದಿ ಮಾತ್ರವಲ್ಲ, ಮಲೆಕುಡಿಯ ಸೇರಿದಂತೆ ಎಲ್ಲಾ ಕಾಡಿನ ನಿವಾಸಿಗಳ ಮಧ್ಯೆಯೂ ಆರ್‌ಎಸ್‌ಎಸ್ ಬೇರೆ ಬೇರೆ ಹೆಸರುಗಳಲ್ಲಿ ಕೆಲಸ ಮಾಡುತ್ತಿದೆ. ಕ್ರಿಶ್ಚಿಯನ್ನರಿಂದ ಆದಿವಾಸಿಗಳಿಗೆ ಸಿಗಬಹುದಾದ ಇಂಗ್ಲೀಷ್ ಶಿಕ್ಷಣ, ಕಮ್ಯೂನಿಷ್ಟರಿಂದ ಸಿಗಬಹುದಾದ ಹಕ್ಕುಗಳಿಗಾಗಿನ ಹೋರಾಟದ ಮನೋಭಾವವನ್ನು ತಗ್ಗಿಸಿ, ಹಿಂದುತ್ವದ ಗುಲಾಮರನ್ನಾಗಿಸುವುದು ಆರ್‌ಎಸ್‌ಎಸ್ ನ ಹಿಡನ್ ಅಜೆಂಡಾಗಳಲ್ಲಿ ಒಂದು. ಅದಕ್ಕಾಗಿಯೇ ಆರ್‌ಎಸ್‌ಎಸ್ ವನವಾಸಿ ಕಲ್ಯಾಣ ಎಂಬ ಘಟಕವನ್ನು ಹೊಂದಿದೆ. ವನವಾಸಿ ಕಲ್ಯಾಣವಲ್ಲದೇ, ಸಂಘದ ಹಿತೈಷಿಗಳು ನಡೆಸುವ ಹತ್ತಾರು ಸ್ವಯಂಸೇವಾ ಸಂಘಟನೆಗಳ ಮೂಲಕವೂ ಆರ್‌ಎಸ್‌ಎಸ್ ಆದಿವಾಸಿಗಳ ಸಂಪರ್ಕದಲ್ಲಿದೆ.

ಬುಡಕಟ್ಟುಗಳ ಮಧ್ಯೆ ಕೆಲಸ ಮಾಡುವ ಆರ್‌ಎಸ್‌ಎಸ್ ಆ ಸಮಾಜದಲ್ಲಿ ಆಗು ಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುತ್ತೆ. ಬುಡಕಟ್ಟು ಸಮುದಾಯಗಳ ಮಧ್ಯೆ ಹುಟ್ಟಿಕೊಳ್ಳುವ ಪ್ರತಿಭಾವಂತರನ್ನು ಗುರುತಿಸಿ ತರಬೇತಿ ನೀಡುತ್ತೆ. ಸಿದ್ದಿ ಸಮುದಾಯದೊಳಗಿನ ಕ್ರೀಡಾಳುಗಳನ್ನು ಗುರುತಿಸಿ ಬ್ರಿಜ್ ಭೂಷಣ್ ಸಿಂಗ್ ಸಹಾಯ ಪಡೆದು ಅವರಿಗೆ ಗೋವಾದಲ್ಲಿ ತರಬೇತಿ ನೀಡಲಾಗಿತ್ತು. ಇವೆಲ್ಲವನ್ನೂ ನಿರ್ವಹಿಸಲು ಆರ್‌ಎಸ್‌ಎಸ್ ಒರ್ವ ಪೂರ್ಣಾವಧಿ ಪ್ರಚಾರಕನನ್ನು ಸಂಯೋಜಕನನ್ನಾಗಿ ನೇಮಿಸಿತ್ತು.

ಬೆಂಗಳೂರು ಕಂಬಳ ಯೋಜಿಸಿದ ಬಳಿಕ ಕ್ರೀಡಾಳುಗಳನ್ನು ಸನ್ಮಾನಿಸಬೇಕು ಎಂದು ಸಮಿತಿ ತೀರ್ಮಾನಿಸಿತ್ತು. ಯಾರನ್ನು ಸನ್ಮಾನಿಸುವುದು ಎಂದು ಚರ್ಚೆ ಬಂದಾಗ 37ನೇ ನ್ಯಾಷನಲ್ ಗೇಮ್ಸ್ ಕಂಚಿನ ಪದಕ ವಿಜೇತ ನಾಗರಾಜ ಬಸುದೋಣಿ, ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿ ಪುರಸ್ಕೃತ ಕಾರ್ತಿಕ್ ಕುಟೆ, ರಾಷ್ಟ್ರೀಯ ಚಾಂಪಿಯನ್ ಬೆಳ್ಳಿ ಪದಕ ವಿಜೇತೆ ಕು. ಲಕ್ಷ್ಮಿಪಾಟೀಲ್, ನ್ಯಾಶನಲ್ ಗೇಮ್ಸ್ ನಲ್ಲಿ ಭಾಗವಹಿಸಿರುವ ಕು. ಶಾಲಿನಿ ಸಿದ್ದಿ, ರಾಷ್ಟ್ರೀಯ ಚಾಂಪಿಯನ್ ಶಿಪ್ ಚಿನ್ನದ ಪದಕ ವಿಜೇತೆ ಕು. ಕುಪ್ಪಿ ದ್ವನವರ ಸಿದ್ದಿ, ರಾಷ್ಟ್ರೀಯ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತೆ ಕು. ಪ್ರೀನಸಿಟ್ ಸಿದ್ದಿಯವರನ್ನು ಆಯ್ಕೆ ಮಾಡಲಾಗಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಲಾಯ್ತು.

ಸಿದ್ದಿಗಳ ಮೂಲಕ ಆರ್‌ಎಸ್‌ಎಸ್ ಬುಡಕಟ್ಟು ಸಂಯೋಜಕನಿಗೆ ವಿಷಯ ತಲುಪಿದೆ. ಆರ್‌ಎಸ್‌ಎಸ್ ಸಂಯೋಜಕನು ಕಂಬಳ ಸಮಿತಿಯೊಳಗಿನ ಹಿಂದುತ್ವವಾದಿಗಳ ಮೂಲಕ ಬ್ರಿಜ್ ಭೂಷಣ್ ರನ್ನು ಕರೆಸಿದೆ. ಸಿದ್ದಿಗಳಿಗೆ ಕ್ರೀಡಾ ತರಬೇತಿ ನೀಡಿದವರು ಎಂಬುದು ಬ್ರಿಜ್ ಭೂಷಣ್ ರನ್ನು ಕರೆಯಲು ಮಾನದಂಡ ಎಂದು ಆರ್‌ಎಸ್‌ಎಸ್ ನಂಬಿಸಿದೆ.

ಇದು ಕೇವಲ ಬೆಂಗಳೂರು ಕಂಬಳದ ಕತೆಯಲ್ಲ, ಕರಾವಳಿಯ ಕೋಲ, ನೇಮ, ಧರ್ಮನೇಮ, ಬ್ರಹ್ಮಕಲಶೋತ್ಸವ, ನಾಗಮಂಡಲಗಳ ಆಮಂತ್ರಣ ಪತ್ರಿಕೆ ನೋಡಿದರೆ ಇಂತಹುದು ಧಂಡಿಯಾಗಿ ಸಿಗುತ್ತದೆ. ಕಾರ್ಯಕ್ರಮಗಳ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾಗಿ ಕಾಂಗ್ರೆಸ್ ನ ಮುಖಂಡರೇ ಇರುತ್ತಾರೆ. ಕಾಂಗ್ರೆಸ್ ಮುಖಂಡರು, ಶಾಸಕರ ಹಣ ಪ್ರಭಾವ ಬಳಸಿ ನಡೆಯುವ ಕಾರ್ಯಕ್ರಮವನ್ನು ಹಿಂದುತ್ವವಾದಿಗಳು ತಮಗೆ ಬೇಕಾದಂತೆ ಬಳಸುತ್ತಾರೆ. ಇದು ಸಂಘಪರಿವಾರದ ಕಲ್ಚರಲ್ ಪೊಲಿಟಿಕ್ಸ್. ಇಂತಹ ಕಲ್ಚರಲ್ ಪೊಲಿಟಿಕ್ಸ್ ಅರ್ಥವಾಗದೇ ಕಾಂಗ್ರೆಸ್ಸಿನ ಮುಖಂಡರು ನಡೆಸುವ ಕಾರ್ಯಕ್ರಮಗಳು, ಸಂಘಪರಿವಾರ ನೇರವಾಗಿ ನಡೆಸುವ ಕಾರ್ಯಕ್ರಮಗಳಿಗಿಂತ ಅಪಾಯಕಾರಿಯಾದುದು.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!