Friday, November 20, 2026

ಪ್ರಾಯೋಗಿಕ ಆವೃತ್ತಿ

ತಾಕತ್ತಿದ್ರೆ…ಸಿದ್ದರಾಮಯ್ಯನವರನ್ನು ಮುಟ್ಟಿ ನೋಡಿ: ಪಿ.ಎಂ.ನರೇಂದ್ರಸ್ವಾಮಿ ಸವಾಲು

ಸರ್ವ ಜನಾಂಗದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದರಲಿ, ಬಿಜೆಪಿ ನಾಯಕರಿಗೆ ತಾಕತ್ತಿದ್ರೆ,ಮೊದಲು ನನ್ನನ್ನು ಮುಟ್ಟಿ ನೋಡಿ ಎಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಸವಾಲು ಹಾಕಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಒಬ್ಬ ಜವಾಬ್ದಾರಿಯುತ ಸಚಿವನಾಗಿ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮಂಡ್ಯದ ಸಾತನೂರಿನಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಟಿಪ್ಪು ವಿನ ರೀತಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ. ಸಚಿವರ ಈ ಹೇಳಿಕೆ ಗೂಂಡಾ ಸಂಸ್ಕೃತಿಯ ಪ್ರತೀಕವಾಗಿದೆ. ಸಿದ್ದರಾಮಯ್ಯನವರನ್ನು ಹೊಡೆದು ಹಾಕುವುದಲ್ಲ,ಮೊದಲು ಅವರನ್ನು ಮುಟ್ಟಿ ನೋಡಲಿ,ಬಿಜೆಪಿ ನಾಯಕರ ಗೊಡ್ಡು ಬೆದರಿಕೆಗೆ ಕಾಂಗ್ರೆಸ್ ಪಕ್ಷ ಬಗ್ಗೋದಿಲ್ಲ.ಬಿಜೆಪಿ ನಾಯಕರಿಗೆ ತಾಕತ್ತಿದ್ರೆ ಮೊದಲು ನನ್ನನ್ನು ಮುಟ್ಟಿ ನೋಡಲಿ ಎಂದು ಸವಾಲೆಸೆದರು. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ ಹೇಳಿಕೆ ಕುರಿತು ರಾಜ್ಯದ ಜನ ಕ್ಯಾಕರಿಸಿ ಉಗಿಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಸಾಮಾನ್ಯರ ಸಿಎಂ
ಸಿದ್ದರಾಮಯ್ಯನವರು ಈ ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಕಾಲ ಸರ್ವ ಜನಾಂಗಕ್ಕೂ ಉತ್ತಮ ಆಡಳಿತ ನೀಡಿದರು. ಪ್ರತಿವರ್ಗದ ಬಡವರು ಇಂದು ಸಿದ್ದರಾಮಯ್ಯನವರನ್ನು ಕೊಂಡಾಡುತ್ತಿದ್ದಾರೆ.

ಅನ್ನಭಾಗ್ಯ ಅಕ್ಕಿ ಕೇಂದ್ರ ಸರ್ಕಾರದ್ದು ಎಂದ ಬಿಜೆಪಿಯವರಿಗೆ ಸಿದ್ದರಾಮಯ್ಯನವರು ಸದನದಲ್ಲಿ ಸರಿಯಾದ ಉತ್ತರ ನೀಡಿದ್ದಾರೆ. ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾದರೆ ನಿಮ್ಮದೇ ಸರ್ಕಾರವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರದಲ್ಲಿ ಏಕೆ ಅಕ್ಕಿ ಕೊಡುತ್ತಿಲ್ಲ ಎಂಬುದನ್ನು ಪ್ರಶ್ನೆ ಮಾಡುವ ಮೂಲಕ ಸರಿಯಾದ ಉತ್ತರ ನೀಡಿದ್ದಾರೆ ಎಂದರು.

 

ದ್ವೇಷ ರಾಜಕಾರಣ
ಬಿಜೆಪಿ ನಾಯಕರು ಅಭಿವೃದ್ಧಿಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲಿ, ಅದನ್ನು ಬಿಟ್ಟು ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಧರ್ಮಗಳ ನಡುವೆ ಕಿಡಿ ಹಚ್ಚಿ ಕೋಮುಗಲಭೆ ನಡೆಸುವುದು ಮತ್ತು ಜಾತಿಗಳನ್ನು ಎತ್ತಿ ಕಟ್ಟಿ ಚುನಾವಣೆ ಗೆಲ್ಲಲು ಹೊರಟಿದೆ. ಅಭಿವೃದ್ಧಿ ಮಾಡದೆ ಕೇವಲ ಧರ್ಮದ ಆಧಾರದ ಮೇಲೆ ಅಧಿಕಾರ ಹಿಡಿಯಲು ಹೊರಟಿರುವ ನಿಮ್ಮ ಯೋಗ್ಯತೆ ರಾಜ್ಯದ ಜನರಿಗೆ ಗೊತ್ತಿದ್ದು ಅವರೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸಿದ್ದರಾಮಯ್ಯನವರು ಸಂವಿಧಾನದ ಬಗ್ಗೆ, ಭಾರತ ದೇಶದ ಎಲ್ಲಾ ಪ್ರಜೆಗಳ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಐದು ವರ್ಷ ರಾಜ್ಯದ ಆಡಳಿತ ನಡೆಸಿ,ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರ ಆಪರೇಷನ್ ಮಾಡಿ ಅಧಿಕಾರಕ್ಕೆ ಬಂದು, ಅರಾಜಕತೆಯ ಆಡಳಿತ ನಡೆಸುತ್ತಿದ್ದು, ಲೂಟಿ ಮಾಡುವುದನ್ನು ಬಿಟ್ಟರೆ ಬೇರೇನು ಮಾಡುತ್ತಿಲ್ಲ. ಅವರದೇ ಪಕ್ಷದ ಜಗದೀಶ್ ಶೆಟ್ಟರ್, ಗೂಳಿಹಟ್ಟಿ ಶೇಖರ್ ಅವರದೇ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಆರ್. ಅಶೋಕ್ ಎಲ್ಲರೂ ಟಿಪ್ಪು ಪೇಟಾ ಧರಿಸಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿದ್ದಾರೆ. ಅವರ ಬಗ್ಗೆ ಏಕೆ ಅಶ್ವಥ್ ನಾರಾಯಣ್ ಮಾತನಾಡುತ್ತಿಲ್ಲ. ಅಶ್ವಥ್ ನಾರಾಯಣ್ ಅವರು ಈ ಕೂಡಲೇ ಅವರು ಹೇಳಿಕೆ ವಾಪಸ್ ಪಡೆಯದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

ಸರ್ಕಾರವೇ ಇಲ್ಲ
ಸಿದ್ದರಾಮಯ್ಯನವರಿಗೆ ಅಶ್ವಥ್ ನಾರಾಯಣ್ ಕೊಲೆ ಬೆದರಿಕೆ ಹಾಕಿರುವುದರ ವಿರುದ್ಧ ಸರ್ಕಾರ ಕೇಸು ದಾಖಲಿಸಬೇಕಾಗಿತ್ತು. ಆದರೆ ರಾಜ್ಯದಲ್ಲಿರುವುದು ಭಂಡ ಸರ್ಕಾರ, ಹಾಗಾಗಿ ಸುಮ್ಮನಿದೆ.ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದರು.

ಲಾಯಕ್ಕಲ್ಲ
ಮಂಡ್ಯದಲ್ಲಿ ಅತಿ ಹೆಚ್ಚು ರೇಷ್ಞೆ ಬೆಳೆಗಾರರಿದ್ದಾರೆ. ಆ ರೇಷ್ಮೆ ಬೆಳೆಯನ್ನು ಈ ದೇಶಕ್ಕೆ ತಂದವ್ಯಾರು ಎನ್ನುವುದನ್ನು ಮೊದಲು ಇತಿಹಾಸ ತಿಳಿದುಕೊಂಡು ಮಾತನಾಡಲಿ ಎಂದು ತಿಳಿಸಿದ  ಪಿ.ಎಂ.ನರೇಂದ್ರಸ್ವಾಮಿ ಅವರು,  ಪರೋಕ್ಷವಾಗಿ ಟಿಪ್ಪು ಸುಲ್ತಾನ್ ಅವರೇ, ಭಾರತಕ್ಕೆ ರೇಷ್ಮೆಯನ್ನು ಪರಿಚಯಿಸಿದ್ದು ಎಂಬುದನ್ನು ಒತ್ತಿ ಹೇಳಿದರು.

ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡುವವರು ಬೇರೆ ದೇಶಕ್ಕೆ ಹೋಗಲಿ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆ ಸ್ಥಾನಕ್ಕೆ ಲಾಯಕ್ಕಲ್ಲ. ನಾವು ಕೂಡ ರಾಮನ ಭಕ್ತರು. ನಾವು ಭಾರತದಲ್ಲಿ ಇರಬಾರದೆಂದು ಹೇಳಲು ಕಟೀಲು ಯಾರು ಎಂದು ವಾಗ್ದಾಳಿ ನಡೆಸಿದರು.

 

ಗಾಳಿಗೆ ತೂರಿದೆ
ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗಾಳಿಗೆ ತೂರಿದೆ. ತನ್ನ ವಿರುದ್ಧ ಮಾತನಾಡುವ ಎಲ್ಲರ ಮೇಲೆ ಇಡಿ, ಸಿಬಿಐ, ಐಟಿ ದಾಳಿ ನಡೆಸುವ ಮೂಲಕ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಕಳೆದ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕಿ ಚುನಾವಣೆ ನಡೆಸಲು ಹೊರಟಿದೆ. ಕರ್ನಾಟಕದಲ್ಲಿ ಆ ರೀತಿಯ ಪ್ರಯೋಗ ಮಾಡಲು ಪ್ರಾರಂಭಿಸಿದ್ದು, ರಾಜ್ಯದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.

ಮಾಹಿತಿ ಗೊತ್ತಿಲ್ಲ
ಮೈಸೂರಿನಲ್ಲಿ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಮದ್ದೂರು ಕ್ಷೇತ್ರದ ಆಕಾಂಕ್ಷಿಗಳಾದ ಗುರುಚರಣ್ ಮತ್ತು ಕದಲೂರು ಉದಯ್ ಅವರೊಂದಿಗೆ ನಡೆದ ಮಾತುಕತೆಯ ಬಗ್ಗೆ ನನಗೆ ಮಾಹಿತಿ ಗೊತ್ತಿಲ್ಲ. ಮದ್ದೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕದಲೂರು ಉದಯ್ ಹಾಗೂ ಗುರುಚರಣ್ ಸ್ಪರ್ಧೆ ಮಾಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹೈಕಮಾಂಡ್ ನಾಯಕರು ತೀರ್ಮಾನಿಸುತ್ತಾರೆ ಎಂದರು.

ಶೇ.70ರಷ್ಟು ಮುಗಿದಿಲ್ಲ
ಮಳವಳ್ಳಿ ತಾಲೂಕಿನ ಬಿ.ಜಿ.ಪುರ ಹೋಬಳಿಯಲ್ಲಿ 593 ಕೋಟಿ ವೆಚ್ಚದ ಏತ ನೀರಾವರಿಯ ಯೋಜನೆಯ ಶೇ.70ರಷ್ಟು ಕಾಮಗಾರಿಯೂ ಮುಗಿದಿಲ್ಲ. ಆ ಭಾಗದ ರೈತರಿಗೆ,ಜನಸಾಮಾನ್ಯರಿಗೆ ನಿರೋದಗಿಸುವ ಈ ಯೋಜನೆ ಕುಂಟುತ್ತಾ ಸಾಗಿರುವುದರ ಬಗ್ಗೆ ಶಾಸಕರು ವಿಧಾನಸಭೆಯಲ್ಲಿ ಈಗ ಚರ್ಚೆ ಎತ್ತಿದ್ದಾರೆ. ಇಷ್ಟು ದಿನ ಏನು ಮಾಡುತ್ತಿದ್ದರು ಎಂದು ಕಿಡಿಕಾರಿದರು.

ಜಿಲ್ಲೆಯಲ್ಲಿ ಏಳು ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷ 5-6 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿರುವುದು ಖಚಿತ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್,ಮಹಿಳಾ ಘಟಕದ ಅಧ್ಯಕ್ಷೆ ಅಂಜನಾ ಶ್ರೀಕಾಂತ್, ಮುಖಂಡರಾದ ನಾಗರಾಜ್, ನಗರಸಭೆ ಸದಸ್ಯ ನಯೀಂ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ