Friday, November 20, 2026

ಪ್ರಾಯೋಗಿಕ ಆವೃತ್ತಿ

ಫ್ರೀಡಂ ಪಾರ್ಕ್ ಎಂಬ ‘ಗೋಳಿನ ಮೇಳ’….!

✍️  ಮಲ್ಲಿಗೆ ಸಿರಿಮನೆ 

ಇತ್ತೀಚೆಗೆ ಫ್ರೀಡಂ ಪಾರ್ಕ್ ಕಡೆಗೆ ಹೋಗಿದ್ದೀರಾ? ಹೋಗಿದ್ದರೆ ಅದನ್ನು ‘ಗೋಳಿನ ಮೇಳ’ ಎಂದು ಕರೆಯುತ್ತಿರುವುದೇಕೆ ಎಂಬುದನ್ನು ನಾನು ವಿವರಿಸುವುದೇ ಬೇಕಾಗಿಲ್ಲ….

ಈ ಸರ್ಕಾರಕ್ಕೆ ‘ಮೇಳ’ಗಳನ್ನು ಆಯೋಜಿಸುವ ಖಯಾಲಿ…. ರಾಜ್ಯದಲ್ಲಿ ‘ಹೂಡಿಕೆದಾರರ ಮೇಳ’, ‘ಉದ್ಯೋಗ ಮೇಳ’, ‘ತಂತ್ರಜ್ಞಾನ ಮೇಳ’ ಇಂಥವು ಇನ್ನೂ ಅವೆಷ್ಟೋ….(ಅಷ್ಟೆಲ್ಲ ಮೇಳಗಳಿಂದ ನಿಜಕ್ಕೂ ಎಷ್ಟು ಉದ್ಯೋಗ ಸೃಷ್ಟಿಯಾದವು ಎಂಬ ಪ್ರಶ್ನೆ ಕೇಳುವಂತಿಲ್ಲ, ಅದಕ್ಕೆಲ್ಲ ಸರ್ಕಾರದಲ್ಲಿ ಉತ್ತರವಿಲ್ಲ), ಇನ್ನು ಕೇಂದ್ರದಲ್ಲಿರುವವರಿಗೆ ‘ಕುಂಭ ಮೇಳ’ ಮಾಡಿಸುವುದರಲ್ಲಿ ಭಾರೀ ಆಸಕ್ತಿ…

ಹೀಗೆ ಮೇಳಗಳನ್ನು ಮಾಡಿಸುತ್ತಾ ಈಗ ಜನಸಾಮಾನ್ಯರ ‘ಗೋಳಿನ ಮೇಳ’ಕ್ಕೆ ವೇದಿಕೆ ಸೃಷ್ಟಿಸಿದ್ದಾರೆ… ನೀವು ಫ್ರೀಡಂ ಪಾರ್ಕಿಗೆ ಮೈಸೂರು ಬ್ಯಾಂಕ್ ಕಡೆಯಿಂದ ಬಂದರೆ ಮೊದಲು ಆರೋಗ್ಯ ಇಲಾಖೆ NHM ಒಳಗುತ್ತಿಗೆ ನೌಕರರು ಖಾಯಂ ಮಾಡಲು ಒತ್ತಾಯಿಸಿ ಪ್ರತಿಭಟನೆಗೆ ಕೂತಿದ್ದಾರೆ.

ಅದರ ಪಕ್ಕದಲ್ಲೇ ಮಸಣ ಕಾರ್ಮಿಕರು….. ಅದಾಗುತ್ತಿದ್ದಂತೆ ಅರಣ್ಯ ಇಲಾಖೆ ದಿನಗೂಲಿ ನೌಕರರು….. ಕಂದಾಯ ಇಲಾಖೆ ಗ್ರಾಮ ಸಹಾಯಕರು, ಅದರ ಹಿಂಭಾಗದಲ್ಲೇ ಬಿಸಿಯೂಟದ ಸಹೋದರಿಯರು, ಪಕ್ಕದಲ್ಲೇ ಸಾಮಾಜಿಕ ನ್ಯಾಯಕ್ಕಾಗಿ ಒತ್ತಾಯಿಸಿ ಒಳಮೀಸಲಾತಿ ಹೋರಾಟಗಾರರು ತಿಂಗಳುಗಟ್ಟಲೆ ಹೋರಾಡುತ್ತಲೇ ಇದ್ದಾರೆ…ಒಂದಾದ ಮೇಲೊಂದು ಟೆಂಟುಗಳು, ಒಂದಕ್ಕಿಂತ ಒಂದು ನೋವು, ಸಂಕಷ್ಟ, ಗೋಳಿನ ಕಥನಗಳು!!! ಅಷ್ಟರ ನಡುವೆ ಯಾರ ಕಣ್ಣಿಗೂ ಕಾಣದಂತೆ ಆ ಮೂಲೆಯಲ್ಲಿ ಅರಣ್ಯ ಇಲಾಖೆ ವಾಚರ್ ಗಳು ತಾವೇ ತಂದುಕೊಂಡ ಟರ್ಪಾಲ್ ಕಟ್ಟಿ ತಯಾರಿಸಿದ ಟೆಂಟಿನಲ್ಲಿ…. ಅವರದ್ದಂತೂ ಅಕ್ಷರಃ ಅರಣ್ಯರೋದನ…

ಕೆಲವು ದಿನಗಳ ಹಿಂದಷ್ಟೇ ಅಂಗನವಾಡಿ ತಾಯಂದಿರೂ ಹೀಗೇ ಬೀದಿಯಲ್ಲಿದ್ದರು….ನಿನ್ನೆಯಷ್ಟೇ ಇವುಗಳಲ್ಲೇ ಒಂದರಲ್ಲಿ ಅನ್ನಭಾಗ್ಯ ಮೂಟೆ ಕಾರ್ಮಿಕರ ಹೋರಾಟ ನಡೆಯಿತು.

ಇವರೆಲ್ಲ ಹೀಗೆ ಬಾಳುಗೆಟ್ಟು ಬೀದಿಗಿಳಿಯುವತನಕ ತಡೆಯುವುದಕ್ಕೆ ಆಗದಿದ್ದರೆ ಹೋಗಲಿ, ಬಂದು ಕೂತವರ ಸಮಸ್ಯೆಯೇನೆಂದು ವಿಚಾರಿಸಿ ದಿನಗಟ್ಟಲೆ ಆದರೂ ಬಗೆಹರಿಸುವವರು ಯಾರಿಲ್ಲದಂತಾಗಿದೆ… ಅದಕ್ಷತೆ, ಅಸಾಮರ್ಥ್ಯ, ಸಂವೇದನಾಶೂನ್ಯತೆಗೆ ಇದಕ್ಕಿಂತ ಉದಾಹರಣೆ ಬೇಕಾ??!?

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ