Friday, October 25, 2024

ಪ್ರಾಯೋಗಿಕ ಆವೃತ್ತಿ

“ಮನುಷ್ಯ ಒಳ್ಳೆಯವನಾಗದೆ ಯಾವುದೇ ಸಿದ್ದಾಂತಗಳು ಉಪಯೋಗವಾಗುವುದಿಲ್ಲ”

✍️ ವಿವೇಕಾನಂದ ಎಚ್. ಕೆ.

ಊಟ ಕೊಡುತ್ತೇವೆ ಎಂದು ಸ್ವಾತಂತ್ರ್ಯ ಕಿತ್ತು ಕೊಳ್ಳುವ ಎಡಪಂಥೀಯರು….

ಸ್ವಾತಂತ್ರ್ಯ ಕೊಡುತ್ತೇವೆ ಎಂದು ಊಟ ಕಿತ್ತು ಕೊಳ್ಳುವ ಬಲಪಂಥೀಯರು…..

ಸ್ವಲ್ಪ ಊಟ, ಸ್ವಲ್ಪ ಸ್ವಾತಂತ್ರ್ಯ, ಸ್ವಲ್ಪ ಸಮಾನತೆ ಕೊಡುತ್ತೇವೆ ಎಂದು ಭರವಸೆ ನೀಡಿ ಏನನ್ನೂ ಕೊಡದೆ ತಾವು ಮಾತ್ರ ಅಧಿಕಾರ ಪ್ರಶಸ್ತಿ ಹಣ ಆಸ್ತಿ ಮಾಡಿಕೊಳ್ಳುವ ಸ್ವಾರ್ಥ ಅವಕಾಶವಾದಿಗಳು……

ತಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಅನ್ಯಾಯ ಅನ್ಯಾಯ ಎಂದು ಅರಚಾಡುವ ಸಾಮಾನ್ಯ ಜನರು……

ರಾಜ್ಯದ ಹೆಮ್ಮೆಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುತ್ತಿರುವ ಸಂದರ್ಭದಲ್ಲಿ ಹೇಳಬೇಕೆನಿಸಿದ ವಿಷಾದ ತುಂಬಿದ ಮಾತುಗಳು…….

ಭ್ರಷ್ಟ – ಸೋಮಾರಿ – ನಿರ್ಲಜ್ಜ – ಸೇವೆ ಮರೆತ ಸರ್ಕಾರಿ ಆಡಳಿತ ವ್ಯವಸ್ಥೆ,…..

ದುಷ್ಟ – ಅಮಾನವೀಯ – ಹಣ ಕೇಂದ್ರಿತ – ಬಿಳಿ ಹಣದ ಭ್ರಷ್ಟ ವ್ಯಾಪಾರ ಮಾಡುವ ಖಾಸಗೀಕರಣ….

ಈ ಎರಡರ ಮಧ್ಯೆ ಸಾಮಾನ್ಯ ಜನರ ಆಯ್ಕೆ ಜಾತಿ ಧರ್ಮ ಹಣ ಸುಳ್ಳು ಭರವಸೆಗಳು…….

ಹೆಚ್ಎಂಟಿ, ಐಟಿಐ, ಎಚ್ಎಎಲ್, ವಿಐಎಸ್, ಬಿಇಎಲ್, ಬಿಎಚ್ಇಎಲ್, ಇಂಡಿಯನ್ ರೈಲ್ವೆ, ಏರ್ ಇಂಡಿಯಾ, ಬಿಎಸ್‌ಎನ್ಎಲ್ ಹೀಗೆ ಸಾಲು ಸಾಲು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ಮಕ್ಕಳನ್ನು ಓದಿಸಿ ವಿದ್ಯಾವಂತರಾಗಿ ಮಾಡಿದ ಒಂದು ತ್ಯಾಗಮಯಿ ಪೀಳಿಗೆ ಅಸ್ತಂಗತವಾಗುತ್ತಿರುವ ಸಮಯದಲ್ಲಿ ಹೊಸ ಪೀಳಿಗೆ ಆ ಇತಿಹಾಸದ ನೆನಪುಗಳನ್ನು ಮರೆತು ಅದೇ ಇತಿಹಾಸವನ್ನು ಶಪಿಸುತ್ತಾ ಹಣ ಕೇಂದ್ರಿತ ಖಾಸಗೀಕರಣದ ವ್ಯಾಪಾರವನ್ನು ಬೆಂಬಲಿಸುತ್ತ, ರಾಜಕೀಯ ಎಂದರೆ ಮೋಸದ ಅಧಿಕಾರ, ಸೇವೆ ಎಂದರೆ ವ್ಯಾಪಾರ, ಸಂಬಂಧಗಳೆಂದರೆ ಅನುಕೂಲಕರ ಒಪ್ಪಂದಗಳು ಎನ್ನುವ ಮನೋಭಾವ ಬೆಳೆಸಿಕೊಂಡಿರುವಾಗ ವೈರಸ್ ಗಳು, ಭೂಕಂಪಗಳು, ಯುದ್ಧಗಳು ಮತ್ತೆ ಮುನ್ನಲೆಗೆ ಬರುತ್ತಿರುವುದು ಸ್ವಾಭಾವಿಕವೇ ಇರಬೇಕು….

ಈಗ ತಮ್ಮ ಬೇಡಿಕೆಗಳು ಮತ್ತು ಸಮಸ್ಯೆಗಳಿಗೆ ಹೋರಾಡುತ್ತಿರುವವರು ಆಡಳಿತದ ನಿರ್ಣಾಯಕ ಸಮಯವಾದ ಚುನಾವಣಾ ಸಂದರ್ಭದಲ್ಲಿ ಮೌನವಾಗಿ ತಮ್ಮ ಪಾಡಿಗೆ ತಾವು ಯಾರಿಗೋ ಮತ ನೀಡಿ ಈಗ ತಮಗಾದ ಅನ್ಯಾಯದ ವಿರುದ್ಧ ಪ್ರತಿಭಟಿಸಿದರೆ ಫಲವೇನು….

ಈ ಎಡ ಬಲದವರಿಗೆ ಸಮಸ್ಯೆಗಳ ಪರಿಹಾರ ಬೇಕಿಲ್ಲ. ಅವು ಸದಾ ಜೀವಂತವಾಗಿರಬೇಕು. ಆ ಮೂಲಕ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಬೇಕು. ಮನಸ್ಸು ಮಾಡಿದರೆ ಒಂದು ನಿರ್ಧಿಷ್ಟ ಬಿಂದುವಿನಲ್ಲಿ ಅನೇಕ ಸಮಸ್ಯೆಗಳನ್ನು ಸುಲಭವಾಗಿ ಮತ್ತು ಸರಳವಾಗಿ ಪರಿಹರಿಸಬಹುದು. ಆ ಬಿಂದುವನ್ನು ತಲುಪಲು ಮೊದಲು ಒಂದು ಸೌಹಾರ್ದ ಸೇತುವೆಯ ಅವಶ್ಯಕತೆ ಇದೆ. ಆ ವೇದಿಕೆಯೇ ಸಿದ್ಧವಾಗದೆ ದ್ವೇಷ ಅಸೂಯೆಗಳಲ್ಲೇ ಬರಹಗಳಲ್ಲಿ ಭಾಷಣಗಳಲ್ಲಿ ಅಂತರ ಹೆಚ್ಚು ಮಾಡಿಕೊಳ್ಳತ್ತಾ ಇದ್ದರೆ ಸಮಸ್ಯೆ ಬಗೆಹರಿಯುವುದು ಯಾವಾಗ…..

ಭದ್ರಾವತಿಯ ಕಾರ್ಖಾನೆಯ ಬಳಿ ಹೆಂಗಸರು ಮಕ್ಕಳು ಸೇರಿದಂತೆ ಅನೇಕ ಕುಟುಂಬಗಳು ಕಾರ್ಖಾನೆ ಮುಚ್ಚದಂತೆ ಪ್ರತಿಭಟನೆ ಮಾಡುವ ದೃಶ್ಯಗಳನ್ನು ನೋಡಿದಾಗ ಮರುಕ ಉಂಟಾಗುತ್ತದೆ….

ರೈಲು ಹೊರಟು ಹೋದ ಮೇಲೆ ಟಿಕೆಟ್ ಪಡೆದರೆ ಪ್ರಯೋಜನವೇನು.
ರಾಜಕೀಯ ಎಂದರೆ ಮೂಗು ಮುರಿಯುವ ಜನ ಅನ್ಯಾಯದ ವಿರುದ್ಧ ಧ್ವನಿ ಎತ್ತದೆ ಕೇವಲ ತಮಗೆ ಸಮಸ್ಯೆಗಳು ಬಂದಾಗ ಪ್ರತಿಭಟನೆ ಮಾಡಿದರೆ ಸಮಸ್ಯೆಗಳು ಪರಿಹಾರ ಆಗುವುದಿಲ್ಲ. ಸದಾ ಸಾಮಾಜಿಕ ಮತ್ತು ರಾಜಕೀಯ ಜಾಗೃತಿಯ ಪ್ರಜ್ಞೆ ಎಚ್ಚರವಾಗಿರಬೇಕು, ಕ್ರಿಯಾಶೀಲವಾಗಿರಬೇಕು ಮತ್ತು ಸ್ಪಂದನೀಯವಾಗಿರಬೇಕು….

ಆಗ ಸಾರ್ವಜನಿಕ ಅಭಿಪ್ರಾಯಗಳು ಒಂದು ಒಳ್ಳೆಯ ನಿಟ್ಟಿನಲ್ಲಿ ಸಾರ್ವಜನಿಕ ಸಂಪರ್ಕ ಮಾಧ್ಯಮಗಳ ಮೂಲಕ ಹರಿದು ಉತ್ತಮ ಜನ ಪ್ರತಿನಿಧಿಗಳು ಆಯ್ಕೆಯಾಗಲು ಸಾಧ್ಯ……

ಸಾಮಾನ್ಯ ಸಮಯದಲ್ಲಿ ಸಿನಿಮಾ ಧಾರವಾಹಿಗಳನ್ನು ಮಾತ್ರ ವೀಕ್ಷಿಸುತ್ತಾ,ಮೌಡ್ಯ ಅಜ್ಞಾನಗಳನ್ನು ಬಿತ್ತುವ ಕಪಟ ಜ್ಯೋತಿಷಿಗಳನ್ನು ನಂಬಿ ಅವರ ಮಾತಿನಂತೆ ಬದುಕುತ್ತಾ, ಜಾತಿ ಧರ್ಮ ಹಣದ ರಾಜಕಾರಣಕ್ಕೆ ಜೈಕಾರ ಹಾಕುತ್ತಾ, ಚುನಾವಣಾ ಸಮಯದಲ್ಲಿ ಹಣಕ್ಕೆ ಮತವನ್ನು ಮಾರಿಕೊಳ್ಳುತ್ತಾ ಇದ್ದರೆ ಈ ನಾಯಕರುಗಳು ನಮ್ಮನ್ನು ಕುರಿಗಳೆಂದು ಭಾವಿಸಿ ಜನರ ಸಮೇತ ಎಲ್ಲವನ್ನೂ ಮಾರಿ ಬಹುತೇಕ ನಮ್ಮನ್ನು ಹೊಟ್ಟೆ ಪಾಡಿಗಾಗಿ ದುಡಿಯುವ ಜೀತದಾಳುಗಳಂತೆ ಮಾಡುತ್ತಾರೆ. ಆ ಪ್ರಕ್ರಿಯೆ ಪ್ರಗತಿಯಲ್ಲಿದೆ…..

ನಾವೂ ಜಾಗೃತರಾಗಬೇಕು, ನಮ್ಮ ಸುತ್ತಮುತ್ತಲಿನವರನ್ನು ಜಾಗೃತಗೊಳಿಸಬೇಕು, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಅಂತರವನ್ನು ಗುರುತಿಸಿ ಸಮಗ್ರ ಚಿಂತನೆಯ ಮೂಲಕ ದೂರದೃಷ್ಟಿಯಿಂದ ಒಳ್ಳೆಯದನ್ನು ಮುನ್ನುಗ್ಗಿ ಆಯ್ಕೆ ಮಾಡಿಕೊಳ್ಳಬೇಕು.

ಇಲ್ಲದಿದ್ದರೆ ಈ ಎಡ – ಬಲ ಪಂಥಗಳ ರಾಜಕೀಯ ಹೋರಾಟ ನಮ್ಮನ್ನು ಸಂಪೂರ್ಣ ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತದೆ.

ಎರಡನ್ನೂ ತಿರಸ್ಕರಿಸಿ ಅಥವಾ ಅವುಗಳಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಸ್ವೀಕರಿಸಿ ಆಧುನಿಕ ಸಮಾಜದ ನಾಗರಿಕ ಅಂಶಗಳನ್ನು ಜೀವಪರ ನಿಲುವುಗಳನ್ನು ಅಳವಡಿಸಿಕೊಂಡ ಮಾನವೀಯ ಬದುಕಿನ ಹಾದಿಯಲ್ಲಿ ಸಾಗಬೇಕಿದೆ. ಅದಕ್ಕಾಗಿ ಸದಾ ಪ್ರಜ್ಞಾಪೂರ್ವಕವಾಗಿ ಬದುಕಬೇಕು. ಯಾವುದೇ ಪಂಥಗಳಿಗೆ ಅಥವಾ ನಾಯಕರುಗಳಿಗೆ ದಾಸರಾಗದೆ ಸ್ವತಂತ್ರ ಚಿಂತನೆಯ ಮನೋಭಾವ ಬೆಳೆಸಿಕೊಳ್ಳಬೇಕು…….

ಇದು ಸ್ವಲ್ಪ ಕಷ್ಟ. ಈ ಶಕ್ತಿಗಳು ಅದನ್ನು ಅಷ್ಟು ಸುಲಭವಾಗಿ ಬೆಳೆಯಲು ಬಿಡುವುದಿಲ್ಲ. ವಿವಿಧ ವಿಚಾರಗಳ ಮೂಲಕ ನಮ್ಮನ್ನು ನಿಂದಿಸುತ್ತಾ ನಮ್ಮನ್ನು ನೈತಿಕವಾಗಿ ಕುಗ್ಗಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರ ಸೈದ್ದಾಂತಿಕ ನಿಲುವು ಕುಸಿದರೆ ಅವರ ಅಸ್ತಿತ್ವವೂ ಕುಸಿಯುತ್ತದೆ. ಅದಕ್ಕೆ ಶುದ್ದ ಮತ್ತು ವಿಶಾಲ ಮನಸ್ಥಿತಿ ಉತ್ತರವಾಗಬಹುದು. ಆ ಸಾಮಾಜಿಕ ಮತ್ತು ಮಾನಸಿಕ ವಾತಾವರಣ ನಿರ್ಮಾಣವಾಗುವ ನಿರೀಕ್ಷೆಯಲ್ಲಿ ನಿಮ್ಮೊಂದಿಗೆ……..

“ಮನುಷ್ಯ ಒಳ್ಳೆಯವನಾಗದೆ ಯಾವುದೇ ಸಿದ್ದಾಂತಗಳು ಉಪಯೋಗವಾಗುವುದಿಲ್ಲ”

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!