-
ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲು
- 17 ವರ್ಷದ ಯುವತಿಯ ಮೇಲೆ ಆರೋಪಿ ಸುಮಂತ್ ದಾಳಿ
- ರಾಜ್ಯದಲ್ಲಿ ಮತ್ತೊಂದು ಅಮಾನುಷ ಕೃತ್ಯ
ಪ್ರೀತಿಸಲು ನಿರಾಕರಿಸಿದ ಅಪ್ರಾಪ್ತ ಯುವತಿಯ ಮೇಲೆ ಯುವಕನೊಬ್ಬ ಆಸಿಡ್ ಎರಚಿದ ಪರಿಣಾಮ 17 ವರ್ಷದ ಬಾಲಕಿಯ ಕಣ್ಣಿಗೆ ಹಾನಿಯಾಗಿರುವ ಘಟನೆ ಕನಕಪುರದಲ್ಲಿ ನಡೆದಿದೆ.
ಕುರುಪೇಟೆಯ ನಿವಾಸಿ ಸುಮಂತ್ (22) ಆರೋಪಿ ಬಂಧಿತ ಆರೋಪಿ. ಈತ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಈತನನ್ನು ಬಂಧಿಸಲಾಗಿದೆ.
ಸಂತ್ರಸ್ತೆಯ ಎಡಗಣ್ಣಿಗೆ ಗಾಯವಾಗಿದ್ದು, ಮೊದಲಿಗೆ ಕನಕಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಆಕೆಯನ್ನು ಬೆಂಗಳೂರಿನ ಮಿಂಟೋ ಕಣ್ಣಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೇರೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಹಾಗೂ ಆಸಿಡ್ ಎರಚಿದ ಆರೋಪಿಯು ಸುಮಾರು ಒಂದು ವರ್ಷದಿಂದ ಪರಿಚಿತರಾಗಿದ್ದರು. ಆದರೆ ಸುಮಂತ್ ಯುವತಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಆದರೆ ಆಕೆ ಇದನ್ನು ನಿರಾಕರಿಸಿದ್ದಳು. ಫೆಬ್ರವರಿ 17 ರಂದು ಸಂಜೆ ಮತ್ತೆ ಕನಕಪುರ ಬೈಪಾಸ್ ರಸ್ತೆಯಲ್ಲಿ ಆರೋಪಿ ಸಂತ್ರಸ್ಥೆಯನ್ನು ಪ್ರೀತಿಸುವಂತೆ ಪೀಡಿಸಿದ್ದ, ಇದಕ್ಕೆ ಆಕೆ ನಿರಾಕರಿಸಿದಾಗಿ ಕೋಪಗೊಂಡ ಸುಮಂತ್ ಗ್ಯಾರೇಜ್ನಲ್ಲಿ ಬಳಸಲಾದ ರಾಸಾಯನಿಕವನ್ನು ಆಕೆಯ ಮುಖದ ಮೇಲೆ ಎರಚಿದ್ದಾನೆ. ತಕ್ಷಣ ಆಕೆ ಮುಖ ತಿರುಗಿಸಿದ್ದರಿಂದ ಆಕೆಯ ಎಡಗಣ್ಣಿಗೆ ಮಾತ್ರ ಆಸಿಡ್ ನಂತಹ ದ್ರವ ತಾಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಆರೋಪಿಯು ತನ್ನ ಮುಖದ ಮೇಲೆ ಆಸಿಡ್ ಎರಚಿದ್ದಾನೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಆರೋಪಿಸಿದ್ದಾಳೆ. ದ್ರವದ ರಾಸಾಯನಿಕ ಸಂಯೋಜನೆಯನ್ನು ಖಚಿತಪಡಿಸಿಕೊಳ್ಳಲು ನಾವು ಮಾದರಿಯನ್ನು ಸಂಗ್ರಹಿಸಿ ಮಡಿವಾಳದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ರಾಮನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ, ಕನಕಪುರ ಪೊಲೀಸರು ಆರೋಪಿ ಯುವಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 326 ಎ ಅಡಿಯಲ್ಲಿ ಸ್ವಯಂಪ್ರೇರಣೆಯಿಂದ ಆಸಿಡ್ ಬಳಸಿ ಘೋರವಾಗಿ ಗಾಯಗೊಳಿಸಿದ್ದಕ್ಕಾಗಿ ಮತ್ತು ಸಂತ್ರಸ್ತೆ ಅಪ್ರಾಪ್ತ ವಯಸ್ಸಿನವರಾಗಿರುವ ಕಾರಣ ಪೋಕ್ಸೋ ಕಾಯ್ದೆಯಡಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.




