✍️ ಶಿವಸುಂದರ್
-
ಜನರಿಂದ ಬಚ್ಚಿಟ್ಟ ಅಸಲಿ ಮತ್ತು ಜನದ್ರೋಹಿ ಬಜೆಟ್ಟು!
- ರೈತರ ಸಬ್ಸಿಡಿ ಸಂಪೂರ್ಣ ಸ್ಥಗಿತ, ಉದ್ಯೋಗ ಕಡಿತ, ವಿದ್ಯುತ್ ದರ ದುಪ್ಪಟ್ಟು… ಇತ್ಯಾದಿ !
ಆಯಾ ವರ್ಷದಲ್ಲಿ ಮಂಡಿಸಲಾಗುವ ಬಜೆಟ್ಟು ಎಂದರೆ ಒಂದು ಅಂದಾಜು ಅಷ್ಟೆ (Budget Estimate). ಈ ವರ್ಷದ ಆಯವ್ಯಯದ ಅಸಲೀ ಲೆಕ್ಕ ಮುಂದಿನ ವರ್ಷದ ಪುನರ್ವಿಮರ್ಶಿತ (Revised Estimate) ನಲ್ಲಿ ಒಂದಷ್ಟು ಸಿಕ್ಕರೆ, ಕರಾರುವಕ್ಕಾದ ಲೆಕ್ಕ (Actulas) ಗೊತ್ತಾಗುವುದು ಎರಡು ವರ್ಷಗಳ ನಂತರದ ಬಜೆಟ್ ದಾಖಲೆಗಳಲ್ಲಿ.
ಈ ವರ್ಷದ Budget Estimate ಗಿಂತ ಎರಡು ವರ್ಷಗಳ ನಂತರ ಸಿಗುವ ಈ ವರ್ಷದ Actual’s ಅಂಕಿಅಂಶಗಳು ಬಜೆಟ್ ಅಂದಾಜಿಗಿಂತ ಸರಾಸರಿ ಶೇ.20 ರಷ್ತಾದರೂ ಕಡಿಮೆ ಇರುತ್ತೆ. ಆದ್ದರಿಂದ ಈ ವರ್ಷ ಬಜೆಟ್ ಭಾಷಣದಲ್ಲಿ ಬೊಮ್ಮಾಯಿ ಹೇಳಿರುವ ಲೆಕ್ಕಗಳಿಗೆಲ್ಲಾ ಶೇ.20 ರಷ್ಟು ಡಿಸ್ಕೋಂಟ್ ಕೊಡಿ.
ಇದು ಚುನಾವಣಾ ವರ್ಷವಾಗಿರುವುದರಿಂದ ಇನ್ನು ಹೆಚ್ಚಿನ ಡಿಸ್ಕೌಂಟ್ ಕೊಡಿ.. ಅದರ ಮೇಲೆ ಶೇ. 40 ಡಿಸ್ಕೌಂಟ್ ಹೇಗಿದ್ದರೂ ಅವರೇ ತೋಗೋತಾರೆ ..
ಇದಲ್ಲದೆ 2022 ರಿಂದ ಎಲ್ಲಾ ಸರ್ಕಾರಗಳು ಜನರಿಂದ ಮುಚಿಟ್ಟಿರುವ ಮಹಾಸತ್ಯವೊಂದಿದೆ. 2003 ರಲ್ಲಿ ಜಾರಿಯಾದ Fiscal Responsibility and Budget Management Act (FRBM) ಪ್ರಕಾರ ಎಲ್ಲಾ ಸರ್ಕಾರಗಳು ಬಜೆಟ್ ಮಂಡನೆಯ ಜೊತೆಗೆ Medium Term Fiscal Plam (MTFP) ಅನ್ನು ಮಂಡಿಸಬೇಕು.
ವಾಸ್ತವದಲ್ಲಿ ಅಸಲೀ ಬಜೆಟ್ಟು ಬೊಮ್ಮಾಯಿಯವರು ವಿಧಾನ ಮಂಡಲದಲ್ಲಿ ಮಾಡಿದ ಭಾಷಣವಲ್ಲ.
ಈ MTFP ಯೇ ಅಸಲೀ ಬಜೆಟ್ಟು.
ಇದನ್ನು ಅವರು ಸರ್ಕಾರಕ್ಕೆ ಸಾಲ ಕೊಡುವ ಸಂಸ್ಥೆಗಳಿಗೆ , ಅಂತರಾಷ್ರೀಯ ಕ್ರೆಡಿಟ್ ಏಜೆನ್ಸಿಗಳಿಗೆ, ಐಎಂಎಫ಼್ ಮತ್ತು ವಿಶ್ವಬ್ಯಾಂಕುಗಳಿಗೆ ಸಲ್ಲಿಸಬೇಕು. ಹೀಗಾಗಿ MTFP ಯಲ್ಲಿ ಬೊಗಳೆಗಳು ಇರುವುದಿಲ್ಲ.
ಅಸಕ್ತರು ಈ ವರ್ಷದ MTFP ಯನ್ನು ಈ ವಿಳಾಸದಲ್ಲಿ ಓದಬಹುದು:
https://finance.karnataka.gov.in/storage/pdf-files/5_MTFP-2023-27.pdf
ಈ MTFP ಯಲ್ಲಿ ಸರ್ಕಾರಗಳು ಮುಂದಿನ ಐದುವರ್ಷಗಳಲ್ಲಿ ಹೇಗೆ ಸರ್ಕಾರದ ಆದಾಯವನ್ನು ಜಾಸ್ತಿ ಮಾಡಿಕೊಂಡು, ವೆಚ್ಚವನ್ನು ಕುಗ್ಗಿಸಿಕೊಳ್ಳುತ್ತವೆ ಎಂಬುದರ ಬ್ಲೂ ಪ್ರಿಂಟ್ ಕೊಟ್ಟಿರಬೇಕು.
ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳ ಪ್ರಕಾರ ದೇಶದ ಅಭಿವೃದ್ಧಿ ಎಂದರೆ ಆಯಾ ದೇಶದ ಉದ್ಯಮಿಗಳ ಅಭಿವೃದ್ಧಿ. ಹೀಗಾಗಿ ಸರ್ಕಾರವು ಪ್ರಧನವಾಗಿ ಉದ್ಯಮಿಗಳಿಗೆ ಬೇಕಾದ ಸೌಕರ್ಯಗಳಿಗೆ ವೆಚ್ಚ ಮಾಡಬೇಕು.
ಅದಕ್ಕಾಗಿ ಜನರಿಗೆ ಮತ್ತು ಆಡಳಿತಕ್ಕೆ ಮಾಡುತ್ತಿರುವ ವೆಚ್ಚ ಕಡಿಮೆ ಮಾಡಿಕೊಳ್ಳಬೇಕು. ಹಾಗೂ ಜನರಿಗೆ ರಿಯಾಯತಿ ಅಥವಾ ಉಚಿತ ದರದಲಿ ಕೊಡುತ್ತಿರುವ ಸೇವೆ ಮತ್ತು ಸರಕುಗಳಿಗೆ ಶುಲ್ಕ ವಿಧಿಸಬೇಕು.
ಸಬ್ಸಿಡಿಗಳನ್ನು , ಸ್ಂಬಳ ಸಾರಿಗೆಗಳನ್ನು ಕಡಿತಗೊಳಿಸಬೇಕು. ಹಾಗೂ ಇವೆಲ್ಲವನ್ನು ಮುಂದಿನ ಐದು ವರ್ಷಗಳಲಿ ಹೇಗೆ ಮಾಡಲಿದ್ದೇವೆ ಎಂಬುದನ್ನು ಬಜೆಟ್ಟಿನ ಜೊತೆಗೆ ಸದನದಲ್ಲಿ MTFP ದಾಖಲೆಯಲ್ಲಿ ಮಂಡಿಸಬೇಕು.
ಬೊಮ್ಮಾಯಿಯವರು ಬಜೆಟ್ ಭಾಷಣದಲ್ಲಿ ಹೇಳದ ಆದರೆ MTFP ಯಲ್ಲಿ ಮಂಡಿಸಿರುವ ಕೆಲವು ಬಚ್ಚಿಟ್ಟ ಗುಟ್ಟುಗಳು ಹೀಗಿವೆ :
1. FRBM ಅನುಷ್ಟಾನಕ್ಕೆ ರಚಿಸಲಾಗಿರುವ ಸಮಿತಿಯು ಪ್ರಕಾರ ತೆರಿಗೆಯೇತರ ಆದಾಯ ರಾಜ್ಯದಲ್ಲಿ ಸುಧಾರಿಸಿಲ್ಲ.
ಹೀಗಾಗಿ ಕಳೆದ ಕೆಲವಾರು ವರ್ಷಗಳಿಂದ ಯಾವ್ಯಾವ ಸರ್ಕಾರೀ ಸೇವೆಗಳಿಗೆ ಶುಲ್ಕವನ್ನು ಏರಿಸಿಲ್ಲವೋ ಅವೆಲ್ಲವನ್ನು ಏರಿಸಲು ಕ್ರಮ ತೆಗೆದುಕೊಳ್ಳಲಾಗುವುದು
(ಪ್ಯಾರಾ 27. MTFP- 2023-27)
2. ಸಂಬಳ, ಪಿಂಚಣಿ ಮತ್ತು ಬಡ್ಡಿಗಳು ಸರ್ಕಾರದ ಕಡ್ಡಾಯ ವೆಚ್ಚದ (Committed Expenditure) ಭಾಗವಾಗಿವೆ. ಇದನ್ನು ತ್ವರಿತವಾಗಿ ಕಡಿಮೆ ಮಾಡಿಕೊಳ್ಳುವ ಅಗತ್ಯವಿದೆ.
ಹೀಗಾಗಿ ಸಂಬಳ ಮತ್ತು ಪಿಂಚಣಿಗಳ ಮೇಲಿನ ವೆಚ್ಚವನ್ನು ಕಡಿಮೆ ಮಾಡಲು ತಂತ್ರಜ್ನಾನವನ್ನು ಬಳಸುವ ಮೂಲಕ ಸರ್ಕಾರಿ ಸಿಬ್ಬಂದಿಯ ಸ್ವರೂಪ ಮತ್ತು ಸಿಬ್ಬಂದಿಯ ಗಾತ್ರವನ್ನು ಕಡಿಮೆ ಮಾಡಲಾಗುವುದು ಮತ್ತು ಎಲ್ಲಾ ಸಬ್ಸೀಡಿಗಳನ್ನು ಕಡಿತಗೊಳಿಸಲಾಗುವುದು (ಪ್ಯಾರಾ 14. MTFP- 2023-27)
ಅರ್ಥಾತ್ ಸರ್ಕಾರಿ ನೇಮಕಕ್ಕೆ ಕಡಿತ ಮತ್ತು ಪಿಂಚಣಿ ರಹಿತ ನೇಮಕಾತಿ
ಆದರೆ ಬಜೆಟ್ಟಿನಲ್ಲಿ ಮಾತ್ರ ನಿರುದ್ಯೋಗಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗಲು 2000 ರೂ. ಸ್ಟೈಫ಼ೆಂಡ್ ಘೋಷಣೆ ! ಸೋಗಲಾಡಿತನಕ್ಕೆ ಮಿತಿಯೇ ಇಲ್ಲ ..
ಅದಕ್ಕೆ ತಕ್ಕಂತೆ MTFP-2023-27 ರಲ್ಲಿ ಕೊಟ್ಟಿರುವ ಅಂಕಿಅಂಶಗಳಂತೆ 2021-22 ರಲ್ಲಿ ರಾಜ್ಯದ ರೈತರಿಗೆ ಮತ್ತು ಬಡವರಿಗೆ ವಿದ್ಯುತ್, ಇಂಧನ ಇತ್ಯಾದಿಗಳಿಗೆ 36,306 ಕೋಟಿ ರೂ. ಸಬ್ಸಿಡಿಯನ್ನು ಕೊಡುತ್ತಿದ್ದರೆ 2023-24 ರ ಸಾಲಿಗೆ ಅದನ್ನು 31,367 ಕೋಟಿಗೆ ಇಳಿಸಲಾಗಿದೆ
(ಟೇಬಲ್ 12,MTFP- 2023-27 ).
ಅಷ್ಟು ಮಾತ್ರವಲ್ಲ. ಈಗ – 2023 ರಲ್ಲಿ – ಈ ಸಬ್ಸಿಡಿಗಳ ಗಾತ್ರ ರಾಜ್ಯದ ಒಟ್ಟಾರೆ ಉತ್ಪನ್ನ (GSDP) ಯ ಶೇ. 2.4 ರಷ್ಟಿದ್ದರೆ ಅದನ್ನು ವರ್ಷಾನು ವರ್ಷ ಕಡಿಮೆ ಮಾಡುತ್ತಾ ಮಾಡುತ್ತಾ 2027 ರ ವೇಳೆಗೆ GSDP ಯ ಶೇ. 1.2 ಕ್ಕೆ ಇಳಿಸುವುದಾಗಿ *ಬೊಮ್ಮಾಯಿ ಸರ್ಕಾರ MTFP ಯಲ್ಲಿ ಘೋಷಿಸಿದೆ .
ಅಂದರೆ ಇನ್ನು ಐದು ವರ್ಷಗಳಲ್ಲಿ ರೈತರಿಗೆ ಕೊಡುತ್ತಿದ್ದ ವಿದ್ಯುತ್ ಸಬ್ಸಿಡಿ, ಮನೆ ಕಟ್ಟಿಕೊಳ್ಳಲು ಕೊಡುತ್ತಿದ್ದ ಸಬ್ಸಿಡಿ, ಮೀನುಗಾಗರರಿಗೆ ಕೊಡುತ್ತಿದ್ದ ಇಂಧನ ಸಬ್ಸೀಡಿಗಳೆಲ್ಲಾ ಅರ್ಧಕ್ಕರ್ಧಷ್ಟು ಕಡಿಮೆಯಾಗಲಿವೆ (ಟೇಬಲ್ 15,MTFP- 2023-27)
3. ಬೊಮ್ಮಾಯಿ ಸರ್ಕಾರದ ಪ್ರಕಾರ ಸರ್ಕಾರ ಈ ಸಾಲಿನಲ್ಲಿ 31,367 ಕೋಟಿ ರೂ. ಗಳನ್ನು ಸಬ್ಸಿಡಿಗಳಿಗಾಗಿ ವೆಚ್ಚ ಮಾಡುತ್ತಿದೆ. ಅದರಲ್ಲಿ 13,163 ಕೋಟಿ ರೂ. ಗಳು ರೈತರ ಪಂಪ್ ಸೆಟ್ ಗೆ ಉಚಿತ ವಿದ್ಯುತ್ ಸರಬರಾಜಿಗೆ ಕೊಡುತ್ತಿರುವ ಸಬ್ಸಿಡಿಯಾಗಿದೆ.
ಇದನ್ನು ಕಡಿತಗೊಳಿಸದೆ ಸರ್ಕಾರದ ಆದಾಯಗಳು ಸುಧಾರಣೆಯಾಗುವುದಿಲ್ಲ ಎಂದೂ, ಹಲವಾರು ವಿದ್ಯುತ್ ಕ್ಷೇತ್ರ ಸುಧಾರಣೆಗಳನ್ನು ತರುವುದಾಗಿ ಬೊಮ್ಮಾಯಿ ಸರ್ಕಾರ MTFP ಯಲ್ಲಿ ಘೋಷಿಸಿದೆ. ಅರ್ಥಾತ್ ಹೇಗೆ ಉಚಿತ ವಿದ್ಯುತ್ತನು ಹಿಂತೆಗೆಯಲಾಗುವುದು ಎಂಬ ಯೋಜನೆ ಜಾರಿಯಾಗಲಿದೆ.
4. ಇದಕ್ಕೆ ಸಂಬಂಧಿದಂತೆ ರಾಜ್ಯದ ವಿದ್ಯುತ್ ಸರಬರಾಜು ನಿಗಮಗಳು (ESCOM) ಮತ್ತು KPCL ಎದುರಿಸುತ್ತಿರುವ ನಷ್ಟವನ್ನು ಹಾಗೂ ಅದಕ್ಕೆ ಪರಿಹಾರ ಮಾರ್ಗವನ್ನು ಬೊಮ್ಮಾಯಿ ಸರ್ಕಾರ MTFP ಯಲ್ಲಿ ಪ್ರಸ್ತಾಪಿಸಿರುವುದನ್ನು ಬಜೆಟ್ ಭಾಷಣದಲ್ಲಿ ಬಚ್ಚಿಟ್ಟಿದೆ.
ನಾಡಿನ ರೈತಾಪಿ ಇದನ್ನು ವಿಶೇಷವಾಗಿ ಗಮನಿಸಬೇಕಿದೆ..
ಸರ್ಕಾರದ ಪ್ರಕಾರ ರಾಜ್ಯದ ESCOM ಗಳು ಮತ್ತು KPCL ಗಳ್ ಮಾಡಿರುವ ಸಾಲ ಮತ್ತು ಬಾಕಿ ಎಲ್ಲಾ ಸೇರಿ 31, 258 ಕೋಟಿ ರೂ.ಗಳಾಗಿದೆಯಂತೆ.
ಈ ಅಗಾಧ ಹೊರೆಗೆ ಕಾರಣ ಬಳಕೆದಾರರಿಂದ ವಿದ್ಯುತ್ ಪರಿಕರಗಳ Fixed ವೆಚ್ಚವನ್ನು ವಸೂಲಿ ಮಾಡದಿರುವುದು, ಉಚಿತವಾಗಿ ಮತ್ತು ರಿಯಾಯತಿ ದರದಲ್ಲಿ ಬಡವರಿಗೆ ವಿದ್ಯುತ್ ಕೊಡಲು ಉಳ್ಳವರಿಗೆ ಹಾಕುತ್ತಿರುವ ಹೆಚ್ಚಿನ ದರ (ಕ್ರಾಸ್ ಸಬ್ಸಿಡಿ ) ಇತ್ಯಾದಿಗಳು. ಇವನು ಹೇಗೆ ಕಡಿಮೆ ಮಾಡಬಹುದು ಎಂಬ ಬಗ್ಗೆ ಶಿಫ಼ಾರಸ್ಸು ಮಡಲು ಏಕವ್ಯಕ್ತಿ ಸಮಿತಿಯನ್ನು ನೇಮಕ ಮಾಡಿದ್ದು.
ಅದು ಕೊಟ್ಟ ವರದಿಯನ್ನು ಮುಂದಿನ ವರ್ಷದಿಂದ ಜಾರಿ ಮಾಡಲಾಗುವುದು ಎಂದು ಬೊಮ್ಮಾಯಿ ಸರ್ಕಾರ MTFP ಯಲ್ಲಿ ಘೋಷಿಸಿದೆ. ಆದರೆ ಬಜೆಟ್ಟಿನಲ್ಲಿ ಹೇಳಿಲ್ಲ! (ಪ್ಯಾರಾ 19 , ಪು. 23, MTFP- 2023-27)
ಈ ಏಕವ್ಯಕ್ತಿ ಸಮಿತಿಯ ಹೆಸರು ಗುರುಚರಣ್ ಸಮಿತಿ
ಇವರು ನಿವೃತ್ತ ಸರ್ಕಾರಿ ಅಧಿಕಾರಿ.
ಅವರು 2022 ರ ಜೂನ್ ನಲ್ಲಿ ತಮ್ಮ ವರದಿಯನ್ನು ಕೊಟ್ಟಿದ್ದಾರೆ. ಅದರ ಪತ್ರಿಕಾ ವರದಿಯನ್ನು ಆಸಕ್ತರು ಈ ವಿಳಾಸದಲ್ಲಿ ಗಮನಿಸಬಹುದು :
https://www.thehindu.com/news/national/karnataka/renegotiate-high-cost-power-purchase-agreements-says-power-reforms-committee/article65573241.ece
ಈ ಗುರುಚರಣ್ ಸಮಿತಿಯು :
ಬಡವರಿಗೆ ಮತ್ತು ರೈತರಿಗೆ ಉಚಿತವಾಗಿ ಅಥವಾ ರಿಯಯತಿ ದರದಲ್ಲಿ ವಿದ್ಯುತ್ ಕೊಡಲು ಉಳ್ಳವರಿಗೆ ವಿಧಿಸುತ್ತಿರುವ ಹೆಚ್ಚುವರಿ ದರವನ್ನು ಕಡಿತಗೊಳಿಸಲು ಅರ್ಥತ್ ಕ್ರಾಸ್ ಸಬ್ಸೀಡಿಯನ್ನು ಕಡಿತಗೊಳಿಸಲು ಸಲಹೆ ಮಾಡಿದೆ.
ಹಾಗೂ
ವಿದ್ಯುತ್ ದರವನ್ನು ವೆಚ್ಚಕ್ಕೆ ತಕ್ಕಂತೆ ಹೆಚ್ಚಿಸಬೇಕೆಂದೂ, ಎಲ್ಲಾ ಬಳಕೆದಾರರಿಂದ ಕಡ್ಡಾಯವಾಗಿ ವಿದ್ಯುತ್ ಪರಿಕರಗಳ ಸ್ಥಿರ ದರವನ್ನು ಸಂಪೂರ್ಣವಾಗಿ ಪಾವತಿ ಪಡೆದುಕೊಳ್ಳಲು ಸಲಹೆ ಮಾಡಿದೆ .
ಈ ಶಿಫ಼ಾರಸ್ಸುಗಳನ್ನು ಜಾರಿ ಮಾಡಲು ಸರ್ಕಾರಕ್ಕೆ ಸಹಕರಿಸಲು ಗುರುಚರಣ್ ಸಮಿತಿಯ ಅವಧಿಯನ್ನು ಬೊಮ್ಮಾಯಿ ಸರ್ಕಾರ ಹೆಚ್ಚಿಸಿದೆ.
ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಬೊಮ್ಮಾಯಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ಕಡಿತವಾಗುವುದು ಮಾತ್ರವಲ್ಲದೆ, ಎಲ್ಲಾ ಬಗೆಯ ಬಡ-ಮಧ್ಯಮ ವರ್ಗದವರ ವಿದ್ಯುತ್ ಬಿಲ್ಲು ಎರಡು ಪಟ್ಟು ಹೆಚ್ಚಾಗಲಿದೆ.
ಅಂದಹಾಗೆ ಇದೇ MTFP- 2023-27 ರಲ್ಲಿ ಬೊಮ್ಮಾಯಿ ಸರ್ಕಾರ ಟೋಯೋಟಾ ಇನ್ನಿತರ ಬೃಹತ್ ಬಹುರಾಷ್ಟ್ರೀಯ ಮತ್ತು ಕರ್ನಾಟಕದ ದೊಡ್ದ ದೊಡ್ದ ಉದ್ಯಮಿಗಳಿಗೆ 2022 ರಲ್ಲಿ 1600 ಕೋಟಿ ಮತ್ತು 2023 ರಲ್ಲಿ 800 ಕೋಟಿ ತೆರಿಗೆ ರಿಯಾಯತಿ ಮತ್ತು ಬಡ್ಡಿ ರಿಯಾಯತಿಯನ್ನು ಕೊಟ್ಟಿದ್ದಾರೆ
ಎಂಬ ವಿವರಗಳೂ ಇವೆ.. !
ಇವು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅಸಲಿ ಬಜೆಟ್ಟು. ಜನದ್ರೋಹಿ, ರೈತ ದ್ರೋಹಿ, ಬಡವರ ವಿರೋಧಿ ಬಜೆಟ್ಟು.




