ವರದಿ: ಪ್ರಭು ವಿ.ಎಸ್
ಮದ್ದೂರು ಪಟ್ಟಣದಲ್ಲಿ ಫೆ.28ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ವಿದ್ಯಾವಂತ ನಿರುದ್ಯೋಗಿ ಯುವಕ, ಯುವತಿಯರು ಪಾಲ್ಗೊಂಡು ಸದ್ಬಳಕೆ ಮಾಡಿಕೊಳ್ಳುವಂತೆ ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್ ಅಧ್ಯಕ್ಷ, ಮನ್‌ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ ಮನವಿ ಮಾಡಿದರು.
ಮದ್ದೂರು ಪಟ್ಟಣದ ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು, ಫೆ.28ರ ಬೆಳಿಗ್ಗೆ 9 ರಿಂದ ಸಂಜೆ 4.30ರ ವರೆಗೆ ಆಯೋಜಿಸಿರುವ ಉದ್ಯೋಗ ಮೇಳದಲ್ಲಿ ಟಾಟಾ, ಐಸಿಐಸಿಐ ಬ್ಯಾಂಕ್, ಟೊಯೋಟಾ ಕಿರ್ಲೋಸ್ಕರ್, ಭಾರತಿ ಏರ್ಟೆಲ್, ಆದಿತ್ಯ ಬಿರ್ಲಾ, ಯಶಸ್ವಿ ಕನ್ಸಲ್ಟೆನ್ಸಿ. ಫ್ಲಿಪ್‌ಕಾರ್ಟ್ ಸೇರಿದಂತೆ ಸುಮಾರು 60ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಲಿವೆ ಎಂದು ತಿಳಿಸಿದರು.
ಮದ್ದೂರು ಪಟ್ಟಣದ ಕೊಲ್ಲಿ ವೃತ್ತದ ಬಳಿಯ ಹೊಳೆ ಆಂಜನೇಯಸ್ವಾಮಿ ದೇವಾಲಯದ ರಸ್ತೆ ಬಳಿಯ ನಂಜಪ್ಪ ಲೇಔಟ್‌ನ ಗ್ಲೋಬಲ್ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಆಯೋಜಿಸಿರುವ ಉದ್ಯೋಗ ಮೇಳವನ್ನು ಉನ್ನತ ಶಿಕ್ಷಣ, ಜೈವಿಕ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಅಶ್ವಥ್‌ನಾರಾಯಣ್ ಉದ್ಘಾಟಿಸಲಿದ್ದಾರೆ.
ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ಅಧ್ಯಕ್ಷತೆಯಲ್ಲಿ ಬಿಜೆಪಿ ಮುಖಂಡ, ಮನ್‌ಮುಲ್ ನಿರ್ದೇಶಕ ಎಸ್.ಪಿ. ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ. ಉಮೇಶ್, ಸರ್ವಶಿವ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಶಿವನಂಜಯ್ಯ, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸತೀಶ್, ಗ್ರಾ.ಪಂ. ಅಧ್ಯಕ್ಷರಾದ ನಂದೀಶ್‌ಗೌಡ, ಶಂಕರೇಗೌಡ, ನವೀನ್, ಮಮತ ನಿಂಗರಾಜು, ಡಿ.ಎಂ. ನಾಗಮಣಿ ಇತರರು ಪಾಲ್ಗೊಳ್ಳಲಿರುವುದಾಗಿ ತಿಳಿಸಿದರು.
ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ಶೈಕ್ಷಣಿಕ ದಾಖಲಾತಿಗಳ ನಕಲು ಪ್ರತಿ, ಪಾಸ್ ಪೋರ್ಟ್ ಅಳತೆಯ ಪೋಟೋ, ಆಧಾರ್‌ಕಾರ್ಡ್ ಮತ್ತಿತರ ವಿವರಗಳೊಂದಿಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9743629139, 7019792869 ಸಂಖ್ಯೆಗಳನ್ನು ಸಂಪರ್ಕಿಸಲು ಮನವಿ ಮಾಡಿದರು.
ಗೋಷ್ಠಿ ವೇಳೆ ಗ್ರೀನ್‌ವುಡ್ ವಿದ್ಯಾಸಂಸ್ಥೆ ಅಧ್ಯಕ್ಷ ಅಕ್ಷರಂ ವೆಂಕಟೇಶ್, ಗ್ರಾ.ಪಂ. ಸದಸ್ಯ ನಾಗೇಶ್, ಮುಖಂಡ ಅಣ್ಣೂರು ಮಹೇಂದ್ರ, ಉಪ್ಪಿನಕೆರೆ ಶಿವರಾಮು, ಅಭಿಲಾಷ್, ಮಧುಕುಮಾರ್, ಪ್ರಭು, ಲಿಂಗರಾಜು, ವೆಂಕಟೇಶ ಇತರರಿದ್ದರು.




