ಸುಮಾರು 35 ವರ್ಷಗಳಿಗಿಂತ ಹೆಚ್ಚು ವರ್ಷಗಳ ಕಾಲ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಕೊಂಡಿದ್ದರೂ, ಜೆಡಿಎಸ್ ವರಿಷ್ಠರು ನಿಷ್ಠಾವಂತ ಕಾರ್ಯಕರ್ತನಿಗೆ ಬೆಲೆ ಕೊಡಲಿಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ ಎಂದು ಜೆಡಿಎಸ್ ಪಕ್ಷದ ಟಿಕೆಟ್ ವಂಚಿತ ಬಿ.ಎಲ್.ದೇವರಾಜು ಬೇಸರ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಟಿಎಪಿಸಿಎಂಎಸ್ ಸಮುದಾಯ ಭವನದ ಆವರಣದಲ್ಲಿ ಬಿ.ಎಲ್. ದೇವರಾಜು ಅಭಿಮಾನಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಕೃಷ್ಣರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಹೆಚ್. ಟಿ. ಮಂಜು ಅವರನ್ನು ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಅವರು ತಾಲ್ಲೂಕಿನಲ್ಲಿ ನಡೆದ ಪಂಚರತ್ನ ಯಾತ್ರೆಯ ದಿನದಂದು ಘೋಷಿಸಿದ್ದರು.ಅದರ ವಿಚಾರವಾಗಿ ಕಳೆದ ಜನವರಿ 18ನೇ ತಾರೀಖು ಇದೇ ಆವರಣದಲ್ಲಿ ನಮ್ಮ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನು ಬದಲಿಸಿ ಪುನರ್ ಪರಿಶೀಲಿಸವಂತೆ ಬೃಹತ್ ಕಾರ್ಯಕ್ರಮವನ್ನು ನನ್ನ ಬೆಂಬಲಿಗರು ಏರ್ಪಡಿಸಿದ್ದರು. ಆದರೆ ಜೆಡಿಎಸ್ ವರಿಷ್ಠರಾಗಲಿ,ಜಿಲ್ಲಾ,ತಾಲ್ಲೂಕು ಅಧ್ಯಕ್ಷರಾಗಲಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೌಜನ್ಯಕ್ಕಾದರೂ ನನ್ನನ್ನು ಕರೆದು ಮಾತನಾಡಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬೇರೆ ಪಕ್ಷದ ಕುಮ್ಮಕ್ಕಿನಿಂದ ಕಾರ್ಯಕ್ರಮ ಆಯೋಜಿಸಿದ್ದಾರೆ. ಆದರೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಅವರುಗಳನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕಾಗುತ್ತದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಾರೆ. ಜೆಡಿಎಸ್ ಪಕ್ಷದಲ್ಲಿ ನಿಷ್ಠಾವಂತರಿಗೆ ಬೆಲೆ ಇಲ್ಲ. ಆದ್ದರಿಂದ ನಾನು ರಾಜಕೀಯದಲ್ಲಿ ಇರಲಿ, ಇಲ್ಲದಿರಲಿ ರೈತಪರ ಕೆಲಸವನ್ನು ಮಾಡಲು ತಯಾರಿದ್ದೇನೆ.ನನ್ನ ಕೆಲವು ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಅಂತ ಸಲಹೆ ನೀಡುತ್ತಿದ್ದಾರೆ. ಕೆಲವರು ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ ಅನ್ನುತ್ತಿದ್ದಾರೆ.
ಮಾಜಿ ಸ್ಪೀಕರ್ ಕೃಷ್ಣ ಹಾಗೂ ಮಾಜಿ ಶಾಸಕ ಬಿ. ಪ್ರಕಾಶ್, ಸಚಿವ ನಾರಾಯಣಗೌಡ ಪಕ್ಷವನ್ನು ಬಿಡುವಾಗ ಯಾರಿಗೂ ಹೇಳದಂತೆ ಪಕ್ಷವನ್ನು ತ್ಯಜಿಸಿದರು.ನಾನು ಅಂತಹ ಕೆಲಸ ಮಾಡುವುದಿಲ್ಲ. ನನ್ನ ಬೆಂಬಲಿಗರು, ಹಿತೈಷಿಗಳು ಹಾಗೂ ಸ್ನೇಹಿತರ ಸಭೆಯನ್ನು ಇಂದು ಕರೆದಿದ್ದೇನೆ. ಮುಂದಿನ ತೀರ್ಮಾನವನ್ನು ಶೀಘ್ರದಲ್ಲೇ ತೆಗೆದುಕೊಳ್ಳುತ್ತೇನೆ.ಅದಕ್ಕೆ ನಿಮ್ಮೆಲ್ಲರ ಸಹಕಾರ ನನ್ನ ಮೇಲೆ ಹೀಗೆ ಇರಲಿ. ನಾನು ನಿಮಗೋಸ್ಕರ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುವ ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆಂದು ಭರವಸೆ ನೀಡಿದರು.

ಜೆಡಿಎಸ್ ಹಿರಿಯ ಮುಖಂಡ ಬಸ್ ಕೃಷ್ಣೇಗೌಡ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಮೊದಲಿನಂತೆ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ.ಸ್ಥಳೀಯ ಮುಖಂಡರನ್ನು ಕಡೆಗಣಿಸಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದಾರೆ.ಮಾಜಿ ಮುಖ್ಯಮಂತ್ರಿ ಕುಮಾರಣ್ಣ ಅವರು ಒಳ್ಳೆಯ ವ್ಯಕ್ತಿ.ಆದರೆ ಅವರ ಸುತ್ತಮುತ್ತಲಿರುವ ಜನರು ಚಾಡಿ ಹೇಳವುದನ್ನೇ ಕಾಯಕ ಮಾಡಿಕೊಂಡಿದ್ದಾರೆ. ಅದನ್ನು ಕುಮಾರಸ್ವಾಮಿ ಅವರು ನಂಬಿ ನಮ್ಮನ್ನು ಕಡೆಗಣಿಸಿದ್ದಾರೆ.ಈಗಲೂ ಕಾಲ ಮಿಂಚಿಲ್ಲ ಕುಮಾರಣ್ಣ ಯೋಚನೆ ಮಾಡಬೇಕು.
ನಮ್ಮ ನಾಯಕರಾದ ಬಿ.ಎಲ್ ದೇವರಾಜು ಅವರು ಎರಡು ಬಾರಿ ಉಪ ಚುನಾವಣೆಯಲ್ಲಿ ಸೋತಿದ್ದಾರೆ. ಈ ಬಾರಿ ಅನುಕಂಪದ ಕಾರಣದಿಂದ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದ್ದೆ.ದೇವರಾಜು ಬೇಡ ಎಂದರೆ ನನಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೆ.ಆದರೆ ಅದನ್ನು ವರಿಷ್ಠರು ಪರಿಗಣನೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ದೇವರಾಜು ಅವರು ಮುಂದೆ ಪಕ್ಷದಲ್ಲಿ ಇದ್ದರೆ ನಾವು ಅವರ ಜೊತೆ ಇರುತ್ತೇವೆ ಅಥವಾ ಬೇರೆ ಪಕ್ಷಕ್ಕೆ ಹೋದರೆ ನಾವು ಹಿಂಬಾಲಿಸುತ್ತೇವೆ.ದೇವರಾಜು ಅವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ರಾಮದಾಸ್, ಜೆಡಿಎಸ್ ಹಿರಿಯ ಮುಖಂಡ ಬಸ್ ಕೃಷ್ಣೇಗೌಡ,ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ಪಿ ಲೋಕೇಶ್, ಟಿಎಪಿಸಿಎಂಎಸ್ ನಿರ್ದೇಶಕ ಶಶಿಧರ್ ಸಂಗಾಪುರ,ವಿಠಲಾಪುರ ಸುಬ್ಬೇಗೌಡ,ಡಾ.ಶ್ರೀನಿವಾಸ್ ಶೆಟ್ಟಿ,ತಾ.ಪಂ.ಮಾಜಿ ಸದಸ್ಯ ಧನಂಜಯ,ವಕೀಲರಾದ ರವಿಶಂಕರ್, ಬಳ್ಳೇಕೆರೆ ಯೋಗೇಶ್,ಗಣೇಶ್, ಪುರಸಭಾ ಮಾಜಿ ಸದಸ್ಯ ಕಿರಣ್,ತಾ.ಪಂ.ಮಾಜಿ ಸದಸ್ಯ ಸಂಜೀವಪ್ಪ,ವಿಶ್ವನಾಥ್, ಯಶೋಧರ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.




