- ಆರೋಪಗಳು :
- ಕೆಲ ಸಿಬ್ಬಂದಿಯಿಂದ ಬೆದರಿಸಿ ತಲಾ ₹30ಸಾವಿರ ಪಡೆದು ಕೆಲಸದಲ್ಲಿ ಮುಂದುವರಿಸಲಾಗಿದೆ
- ಮಿಮ್ಸ್ ನಲ್ಲಿ ಸರ್ಕಾರಿ ಸುತ್ತೋಲೆ ಇದ್ದರೂ ನಿವೃತ್ತ ನೌಕರರನ್ನು ಕೆಲಸಕ್ಕೆ ನಿಯೋಜನೆ
- ಸಮವಸ್ತ್ರ ಶುಲ್ಕವೆಂದು ತಲಾ₹7500 ವಸೂಲು
- ಭವಿಷ್ಯನಿಧಿ ಪಾವತಿಸದ ಕುರಿತು ಸಾಕಷ್ಟು ದೂರು
ಏಕಾಏಕೀ ಹೊರಗುತ್ತಿಗೆ ಭದ್ರತಾ ಸಿಬ್ಬಂದಿಯನ್ನು ಕೈಬಿಟ್ಟಿರುವ ಹಾಗೂ ಅಕ್ರಮವಾಗಿ ಟೆಂಡರ್ ಪಡೆದಿರುವ ಕೆಎಸ್ಎಫ್-9 ಏಜೆನ್ಸಿ ಹಾಗೂ ಮಿಮ್ಸ್ ನಿರ್ದೇಶಕರ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕರುನಾಡು ಸೇವಕರು ಸಂಘಟನೆಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಪತ್ರಿಕಾ ಗೋಷ್ಠಿಯಲ್ಲಿ ಒತ್ತಾಯಿಸಿದರು.
ಮಂಡ್ಯ ಮಿಮ್ಸ್ ನಲ್ಲಿ ಡಿಸೆಂಬರ್ 1ರಿಂದ ನೂತನ ಕೆಎಸ್ ಎಫ್ -9ಏಜೆನ್ಸಿಯು ಹೊರಗುತ್ತಿಗೆ ಆಧಾರದಲ್ಲಿ ಭದ್ರತಾ ಸೇವೆ ನೀಡಲು ಆರಂಭಿಸಿರುವುದು ಸರಿಯಷ್ಟೆ. ಸದರಿ ಏಜೆನ್ಸಿಯು 50ವರ್ಷ ವಯೋಮಾನ ತುಂಬಿದವರೆಂದು ಹತ್ತುಮಂದಿ ಭದ್ರತಾ ಸಿಬ್ಬಂದಿಯನ್ನು ಏಕಾಏಕೀ ಕೆಲಸದಿಂದ ಕೈಬಿಟ್ಟಿರುತ್ತಾರೆ. ಈ ಭದ್ರತಾ ಸಿಬ್ಬಂದಿಗಳು ಕಳೆದ ಏಳೆಂಟು ವರ್ಷಗಳಿಂದ ದುಡಿಯುತ್ತಿರುತ್ತಾರೆ. ಟೆಂಡರ್ ನಿಯಮದ ಪ್ರಕಾರ ಆಡಳಿತ ಮಂಡಳಿಯ ಅನುಮತಿಯಿಲ್ಲದೆ ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ಕೈಬಿಡಬಾರದು ಎಂಬುದು ನಿಯಮವಾಗಿರುತ್ತದೆ ಎಂದರು.
ಇದಲ್ಲದೆ 50 ವರ್ಷ ವಯೋಮಾನ ತುಂಬಿದ ಕೆಲ ಸಿಬ್ಬಂದಿಯಿಂದ ಬೆದರಿಸಿ ತಲಾ ₹30ಸಾವಿರ ಪಡೆದು ಕೆಲಸದಲ್ಲಿ ಮುಂದುವರಿಸಲಾಗಿದೆ. ಆದರೆ ಹಣ ಕೊಡದ ಸಿಬ್ಬಂದಿಯನ್ನು ಕೆಲಸದಿಂದ ಹೊರಹಾಕಲಾಗಿದೆ. ಮಿಮ್ಸ್ ನಲ್ಲಿ ಸರ್ಕಾರಿ ಸುತ್ತೋಲೆ ಇದ್ದರೂ ನಿವೃತ್ತ ನೌಕರರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆ, ಈ ಸಂಬಂಧ ಕೆಲಸಕ್ಕೆ ನಿಯೋಜನೆ ಮಾಡಿಕೊಂಡಿದ್ದರೆ ಅಂತಹವರನ್ನು ಕೈ ಬಿಡಬೇಕು ಎಂದು ಸುತ್ತೋಲೆಯಲ್ಲಿದ್ದರೂ ಇದನ್ನು ಕಡೆಗಣಿಸಲಾಗಿದೆ ಎಂದು ಆರೋಪಿದರು.
ಇದಲ್ಲದೆ ವೃಂದಾ ಮತ್ತು ನೇಮಕಾತಿಯ ಮಂಜೂರಾತಿ ಇಲ್ಲದ ಹುದ್ದೆಗಳಲ್ಲು ನೇಮಕಾತಿ ನಡೆಸಲಾಗಿದೆ. ಇವರಿಗೆ ಅನ್ವಯವಾಗದ ಕಾನೂನು ಬಡ ಭದ್ರತಾ ಸಿಬ್ಬಂದಿಗೆ ಅನ್ವಯಿಸಲಾಗಿದೆ. ಸದರಿ ಕೆಎಸ್ಎಫ್-9 ಏಜೆನ್ಸಿಯೂ ಪ್ರಭಾವಿ ರಾಜಕಾರಿಣಿಗೆ ಸೇರಿದ್ದಾಗಿದ್ದುಈ ಹಿಂದೆಯೂ ಈ ಏಜೆನ್ಸಿ ಚೆಸ್ಕಾಂ ನೌಕರರಿಗೆ ಕನಿಷ್ಟ ವೇತನ ಭವಿಷ್ಯನಿಧಿ ಪಾವತಿಸದ ಕುರಿತು ಸಾಕಷ್ಟು ದೂರು ನೀಡಿ, ಸದರಿ ಏಜೆನ್ಸಿ ವಿರುದ್ದ ಹೋರಾಟಗಳನ್ನು ಸಹ ಮಾಡಲಾಗಿತ್ತು ಎಂದು ತಿಳಿಸಿದರು.
ಸದರಿ ಏಜೆನ್ಸಿಯೂ ನಿಯಮಾನುಸಾರ ಭವಿಷ್ಯನಿಧಿ ಪಾವತಿಸದೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಟೆಂಡರ್ ಪಡೆಯುವುದರ ವಿರುದ್ದ ಈ ಹಿಂದಿನ ಮಿಮ್ಸ್ ಆಡಳಿತಾಧಿಕಾರಿ ವೆಂಕಟಲಕ್ಷ್ಮೀಗೆ ದೂರು ನೀಡಲಾಗಿತ್ತು. ಆ ಪ್ರಕಾರ ಈ ಏಜೆನ್ಸಿಗೆ ಟೆಂಡರ್ ನೀಡುವುದನ್ನು ತಡೆಹಿಡಿಯಲಾಗಿತ್ತು. ನಂತರದಲ್ಲಿ ನಿರ್ದೇಶಕರಾಗಿ ಬಂದ ಮಿಮ್ಸ್ ನಿರ್ದೇಶಕ ಬಿ.ಜೆ.ಮಹೇಂದ್ರ ನಿಯಮಗಳಿಗೆ ವಿರುದ್ದವಾಗಿ ಟೆಂಡರ್ ನೀಡಿ ಅಕ್ರಮಕ್ಕೆ ಕಾರಣರಾಗಿದ್ದಾರೆ. ಎಂದು ಆರೋಪಿಸಿದರು.
ಸದರಿ ಏಜೆನ್ಸಿಯೂ ಭವಿಷ್ಯನಿಧಿ (PF) ಪಾವತಿಸದ ಕುರಿತು ಭವಿಷ್ಯನಿಧಿ ಮಂಡಳಿ ಅಗತ್ಯಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಇದಲ್ಲದೆ ಸದರಿ ಏಜೆನ್ಸಿಯೂ ಟೆಂಡರ್ ನಿಯಮದ ಪ್ರಕಾರ ಕನಿಷ್ಟ ಎರಡು ವರ್ಷ ಸರ್ಕಾರಿ, ಅರೆ ಸರ್ಕಾರಿ ಇಲಾಖೆಯಲ್ಲಿ ಹೊರಗುತ್ತಿಗೆ ಸೇವೆ ನೀಡಿರಬೇಕು ಎಂಬ ನಿಯಮವಿದೆ.
ಆದರೆ ಕೆಎಸ್ ಎಫ್ -9 ಏಜೆನ್ಸಿಯೂ ಕಿಯೋನಿಕ್ಸ್ ಸಂಸ್ಥೆಗೆ ಕೆಲಸಗಾರರನ್ನು ಪೂರೈಸಿದೆ ಹೊರತು ಟೆಂಡರ್ ನಿಯಮದ ಪ್ರಕಾರ ಎರಡು ವರ್ಷ ನೇರವಾಗಿ ಯಾವುದೇ ಸರ್ಕಾರಿ ಇಲಾಖೆಗೆ ಸೇವೆ ಒದಗಿಸಿಲ್ಲ. ಭದ್ರತಾ ಸಿಬ್ಬಂದಿಗಳಿಂದ ಸಮವಸ್ರ ಶುಲ್ಕವೆಂದು ತಲಾ₹7500 ವಸೂಲು ಮಾಡಿದೆ. ಅದ್ದರಿಂದ ತಾವುಗಳು ಮಧ್ಯಪ್ರವೇಶಿಸಿ ಕೆಲಸದಿಂದ ಕೈ ಬಿಟ್ಟಿರುವ ಭದ್ರತಾ ಸಿಬ್ಬಂದಿಯನ್ನು ಮರು ನೇಮಕಾತಿ ಮಾಡಿಸಿಕೊಡುವಂತೆ ಕೋರುತ್ತೇನೆ.
ನಿಯಮಾನುಸಾರ ಕೆಎಸ್ ಎಫ್ -9 ಏಜೆನ್ಸಿಯ ಟೆಂಡರ್ ವಜಾಗೊಳಿಸಿ ಭದ್ರತಾ ಠೇವಣಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಅಕ್ರಮವಾಗಿ ಟೆಂಡರ್ ನೀಡಿ ನಿಯಮ ಉಲ್ಲಂಘಿಸಿರುವ ಮಿಮ್ಸ್ ನಿರ್ದೇಶಕ ಬಿ.ಜೆ.ಮಹೇಂದ್ರರನ್ನು ವಜಾಗೊಳಿಸಿ, ಅಕ್ರಮಕ್ಕೆ ಕಾರಣವಾಗಿರುವ ಮಿಮ್ಸ್ ನಿರ್ದೇಶಕ ಡಾ.ಬಿ.ಜೆ ಮಹೇಂದ್ರ ಮತ್ತು ಕೆಎಸ್ ಎಫ್ -9 ಏಜೆನ್ಸಿಯ ವಿರುದ್ದ ರಾಜ್ಯ ಸರಕಾರ ಈ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಂ.ಬಿ.ನಾಗಣ್ಣಗೌಡ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರುನಾಡು ಸೇವಕರು ಸಂಘಟನೆಯ ನಗರಾಧ್ಯಕ್ಷ ಚಂದ್ರು, ಕೇಶವ ಮತ್ತು ರವಿ ಉಪಸ್ಥಿತರಿದ್ದರು.




