Monday, November 23, 2026

ಪ್ರಾಯೋಗಿಕ ಆವೃತ್ತಿ

ಮೋಜಿಗಾಗಿ ರಾಜಕಾರಣ ಬೇಡ, ಸಿ.ಎಸ್‌.ಪುಟ್ಟರಾಜು ರೀತಿ ಜನರಿಗಾಗಿ ರಾಜಕಾರಣ ಮಾಡಬೇಕು : ಜೆ.ಸಿ.ಮಾಧುಸ್ವಾಮಿ

ಮೋಜಿಗಾಗಿ ರಾಜಕಾರಣ ಮಾಡುವುದರ ಬದಲು, ಸಿ.ಎಸ್‌.ಪುಟ್ಟರಾಜು ರೀತಿ ಜನರಿಗಾಗಿ ರಾಜಕಾರಣ ಮಾಡಬೇಕು. ರಾಜಕಾರಣ ಮಾಡಲು ಬರುವವರು, ಜನರಿಗೆ ನಾನೇನು ಕೊಡಬಲ್ಲೇ ಎಂಬುದರ ಬಗ್ಗೆ ಚಿಂತನೆ ಮಾಡಿದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯಲು ಸಾಧ್ಯ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಂಡ್ಯ ತಾಲೂಕಿನ ದುದ್ದ ಹೋಬಳಿಯ ಹುಲಿಕೆರೆ ಗ್ರಾಮದ ಮಹದೇಶ್ವರ ಸ್ವಾಮಿ ದೇವಸ್ಥಾನದ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆ ಆಯೋಜಿಸಿದ್ದ ಏತ ನೀರಾವರಿ ಯೋಜನೆ ಮೂಲಕ 54 ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೋಜಿಗಾಗಿ ರಾಜಕಾರಣ ಮಾಡುವ ಬದಲು,ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ನಾನೇನು ಕೊಡಬಲ್ಲೆ ಎಂದು ನಿರ್ಧಾರ ಮಾಡಿದ ಪುಟ್ಟರಾಜು ಅವರು ಅನೇಕ ನೀರಾವರಿ ಯೋಜನೆಗಳನ್ನು ಕ್ಷೇತ್ರದಲ್ಲಿ ಮಾಡಿಸಿದ್ದಾರೆ.ಇದರಿಂದಾಗಿ ಈ ಭಾಗದ ನೀರಿನ ಕೊರತೆ ಕಡಿಮೆಯಾಗಲಿದೆ ಎಂದರು.

ಮಂತ್ರಿಯಾಗುವುದು ಹೆಚ್ಚಲ್ಲ. ಅಧಿಕಾರ ಸಿಕ್ಕಾಗ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಕಾರ್ಯ ಶ್ಲಾಘನೀಯವಾಗಿದೆ. ಮಂಡ್ಯ ಜಿಲ್ಲೆ ಸಂಪೂರ್ಣ ನೀರಾವರಿ ಜಿಲ್ಲೆ ಎಂದುಕೊಂಡಿದ್ದೆ. ನಾನು ಸಣ್ಣ ನೀರಾವರಿ ಸಚಿವನಾಗಿದ್ದಾಗಲೇ ಇನ್ನೂ ಇಲ್ಲಿಯೂ ನೀರಾವರಿ ವಂಚಿತ ಅನೇಕ ಗ್ರಾಮ, ತಾಲೂಕು ಇದೆ ಎಂಬುದು ಗೊತ್ತಾಯಿತು ಎಂದರು.

ಪುಟ್ಟರಾಜು ಅವರು ಸಣ್ಣ ನೀರಾವರಿ ಸಚಿವರಾಗಿದ್ದಾಗ ನೀರಾವರಿ ವಂಚಿತ ಪ್ರದೇಶಗಳನ್ನು ಗುರುತಿಸಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಅರ್ಧ ಅನುದಾನ ಮೇಲುಕೋಟೆ ಕ್ಷೇತ್ರಕ್ಕೆ ತಂದಿದ್ದಾರೆ. ಮಂತ್ರಿಯಾಗುವುದಕ್ಕಿ‌ಂತ ಮುಂಚೆ ಇಲಾಖೆಯನ್ನು ಪ್ರಶ್ನಿಸಿದ್ದೆ. ಒಂದೇ ತಾಲೂಕಿಗೆ ಸಣ್ಣ ನೀರಾವರಿ ಇಲಾಖೆ ಕೆಲಸ ಮಾಡುತ್ತಿದೆ ಎಂದು, ನಂತರ ನಾನೇ ಸಚಿವನಾಗಿ ಬಂದು ನೋಡಿದಾಗ ಪುಟ್ಟರಾಜು ಅವರ ಕಾರ್ಯ ಕಣ್ಣ ಮುಂದಿತ್ತು ಎಂದು ಶ್ಲಾಘಿಸಿದರು.

ಸರ್ಕಾರಗಳು ನಿರಂತರವಾಗಿರುತ್ತವೆ. ಗೆಲ್ಲುವವರೆಗೂ ಬೇರೆ ಬೇರೆ ಪಕ್ಷಗಳು. ಗೆದ್ದು ಬಂದ ಮೇಲೆ ನಮ್ಮೆಲ್ಲರ ಉದ್ದೇಶಗಳು ರಾಜ್ಯದ ಅಭಿವೃದ್ಧಿ ಕಡೆಗೆ ಇರುತ್ತದೆ. ನಾಡಿನ ಪ್ರತಿಯೊಬ್ಬರಿಗೂ ಶಕ್ತಿ ನೀಡುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಸ್ವಾಭಿಮಾನವನ್ನು ಬಿಟ್ಟುಕೊಡಬಾರದು. ಆ ನಿಟ್ಟಿನಲ್ಲಿ ಪುಟ್ಟರಾಜು ಮಾಡಿದ್ದಾರೆ ಎಂದರು.

ಪುಟ್ಟರಾಜು ಅವರು ಈ ಯೋಜನೆಯನ್ನು ಜಾರಿಗೆ ತಂದು ಕೆಲಸ ಮಾಡಿಸಿದ್ದಾರೆ. ಆದರೆ ಕೆಲವರು ಎಲ್ಲಿಯೋ ಮಾಹಿತಿ ಪಡೆದುಕೊಂಡು ನಾನು ಮಾಡಿದೆ ಎಂದು ಹೇಳಿಕೊಂಡು ತಿರುಗುವುದರಲ್ಲಿ ಅರ್ಥ ಇಲ್ಲ. ಪುಟ್ಟರಾಜು ಮಂತ್ರಿಯಾಗಿದ್ದಾಗ ಈ ಕೆಲಸ ಡಿಪಿಆರ್ ಆಗಿದ್ದು, ಯೋಜನೆ ಜಾರಿ ಮಾಡಲಾಗಿತ್ತು. ನಮ್ಮ ಸರ್ಕಾರ ಬಂದಾಗ ನೆರೆ ಹಾವಳಿ, ಕೊರೊನಾ ಬಂದಿದ್ದರಿಂದ ಸುಮಾರು ಕೆಲಸಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ನನ್ನ ಇಲಾಖೆಯಲ್ಲಿನ ಕೆಲಸಗಳನ್ನು ನಿಲ್ಲಿಸಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಅದರಂತೆ ಪುಟ್ಟರಾಜು ಅವರು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಸಣ್ಣ ನೀರಾವರಿ ಇಲಾಖೆಯ 740 ಕೋಟಿ ರೂ. ಮಂಡ್ಯ ಜಿಲ್ಲೆಗೆ ಖರ್ಚು ಮಾಡಲಾಗಿದೆ. ಸಂಸದರಾಗಿದ್ದಾಗಲೂ ಕೆಲಸ ಮಾಡಿದ್ದರು. ಇಂಥ ಯೋಜನೆಗಳನ್ನು ಜಾರಿಗೊಳಿಸಲು ರೈತರು ಸಹಕಾರ ನೀಡಬೇಕು ಎಂದರು‌.
ಮೇಲುಕೋಟೆ, ಕೆ.ಆರ್.ಪೇಟೆ ತಾಲೂಕುಗಳಲ್ಲೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಒಳ್ಳೆಯ ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಸಿಗುವುದು ಕಷ್ಟ. ನಿಮಗೆ ಒಳ್ಳೆಯ ಜನಪ್ರತಿನಿಧಿ ಸಿಕ್ಕಿದ್ದಾರೆ. ಮೇಲುಕೋಟೆ ಕ್ಷೇತ್ರಕ್ಕೆ ಇನ್ನಷ್ಟು ಯೋಜನೆಗಳನ್ನು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ