ವಿಶ್ವ ಪಾರಂಪರಿಕ (ಯುನೆಸ್ಕೋ) ತಾಣವಾದ ಹಂಪಿಯ ಹೇಮಕೂಟ ಪರ್ವತದ ಸಂರಕ್ಷಿತ ಸ್ಮಾರಕದ ಮೇಲೇರಿ ನೃತ್ಯ ಮಾಡಿ, ರೀಲ್ಸ್ ವಿಡಿಯೋ ಮಾಡಿದ್ದ ಮಂಡ್ಯ ಯುವಕನನ್ನು ವಿಜಯನಗರ ಜಿಲ್ಲೆಯ ಹಂಪಿ ಪ್ರವಾಸಿ ಠಾಣೆಯ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಈತ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ದೀಪಕ್ ಗೌಡ ಎಂದು ಗುರುತಿಸಲಾಗಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಫೆ.28ರಂದು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ಹಂಪಿ ಪ್ರದೇಶದಲ್ಲಿರುವ ಸ್ಮಾರಕಗಳು, ಸಂರಕ್ಷಿತ ಸ್ಮಾರಕಗಳಾಗಿವೆ. ಆದರೆ, ದೀಪಕ್ ಗೌಡ ಹಂಪಿಗೆ ಪ್ರವಾಸಕ್ಕೆ ಬಂದಾಗ ಹಂಪಿಯ ಹೇಮಕೂಟದಲ್ಲಿರುವ ಜೈನ ದೇವಾಲಯದ ಸ್ಮಾರಕದ ಮೇಲೆ ಹತ್ತಿ ನೃತ್ಯ ಮಾಡಿದ್ದ. ಅಲ್ಲದೇ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನ ತನ್ನ ಖಾತೆಯಲ್ಲಿ ಅಪಲೋಡ್ ಮಾಡಿ ದುರುಪಯೋಗ ಮಾಡಿಕೊಂಡಿದ್ದ. ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಹಂಪಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಹಂಪಿ ವಿಶ್ವಪರಂಪರೆಯ ತಾಣವಾಗಿದ್ದು ಭಾರತೀಯ ಪುರತತ್ವ ಇಲಾಖೆಯು ಇದರ ರಕ್ಷಣೆ ಮಾಡುತ್ತಿದೆ. ಇಲ್ಲಿನ ಸ್ಮಾರಕಗಳು ಸಂರಕ್ಷಿತ ಸ್ಮಾರಕಗಳೆಂದು ಭಾರತ ಸರಕಾರ ಈಗಾಗಲೇ ರಾಜ್ಯ ಪತ್ರದಲ್ಲಿ ಘೋಷಣೆ ಮಾಡಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವವರಿಗೆ ಕೇವಲ ವೀಕ್ಷಣೆಗೆ ಮಾಡುವುದಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಸ್ಮಾರಕಗಳ ಮೇಲೆ ನೃತ್ಯ ಮಾಡಿದ ಆರೋಪದ ಮೇಲೆ ದೀಪಕ್ ಗೌಡನನ್ನು ಬಂಧಿಸಲಾಗಿದೆ.




