ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆಗೆ ಭಾನುವಾರ ಮಂಡ್ಯಕ್ಕೆ ಆಗಮಿಸುತ್ತಿರುವ
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಸರ್ಕಾರಿ ಸಿಬ್ಬಂದಿ,ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರನ್ನು ಕರೆತರುವಂತೆ ಜಿಲ್ಲಾಡಳಿತ ಆದೇಶ ನೀಡಿದೆ.
ಸರ್ಕಾರದ ವಿವಿಧ ಕಾರ್ಯಕ್ರಮದ ಪ್ರಯುಕ್ತ ಮೋದಿಯವರು ಆಗಮಿಸುತ್ತಿರುವುದರಿಂದ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರುಗಳು, ಗ್ರಾಮ ಪಂಚಾಯತಿ ನೌಕರರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘ & ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಮಹಿಳಾ ಸದಸ್ಯರುಗಳು, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಇಲಾಖೆಯ ನೌಕರ ವರ್ಗದವರು, ಗ್ರಾಮಗಳ ಮುಖಂಡರು, ಸಾರ್ವಜನಿಕರು ಸದರಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಲಾಗಿದೆ.

ಮೋದಿಯವರ ಕಾರ್ಯಕ್ರಮಕ್ಕೆ ಹೋಗಿ ಬರಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದ್ದು,ಸಾರ್ವಜನಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
ಸಾರ್ವಜನಿಕರಿಗೆ ತೊಂದರೆ
ಕಾರ್ಯಕ್ರಮಕ್ಕೆ ಐವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಕರೆತರಲು ಬಿಜೆಪಿ ಪಕ್ಷ ನಿರ್ಧರಿಸಿದ್ದು,ಅದಕ್ಕೆಂದೇ ಮಂಡ್ಯ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಿಂದಲೂ ಜನರನ್ನು ಕರೆತರಲು ಕ್ರಮ ಕೈಗೊಂಡಿದೆ. ಅದಕ್ಕಾಗಿಯೇ ನೂರಾರು ಸಂಖ್ಯೆಯಲ್ಲಿ ಬಿಎಂಟಿಸಿ ಬಸ್ಸುಗಳನ್ನು ಪಡೆಯಲಾಗಿದೆ. ಬಸ್ಸುಗಳ ಸಂಖ್ಯೆ ಕಡಿಮೆ ಇರುವುದರಿಂದ ಸಾರ್ವಜನಿಕರು ಪರದಾಡುವಂತಾಯಿತು.

ಮಂಡ್ಯ ನಗರದಲ್ಲಿ ಇಂದು ಬೆಳಗ್ಗೆಯೇ ಬಸ್ಸು,ಕಾರುಗಳ ಸಂಚಾರ ನಿಷೇಧ ಮಾಡಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಬೇಕಾಯಿತು.
ಅದರಲ್ಲೂ ಇಂದು ಮಂಡ್ಯ ನಗರದ ಬಹುತೇಕ ಎಲ್ಲಾ ಕಲ್ಯಾಣ ಮಂಟಪಗಳಲ್ಲಿ ವಿವಾಹ ಕಾರ್ಯಕ್ರಮ ಇದ್ದರಿಂದ ವಾಹನಗಳ ಪ್ರವೇಶ ಬಂದ್ ಮಾಡಿದ್ದರಿಂದ ಜನರು ಕಲ್ಯಾಣ ಮಂಟಪಕ್ಕೆ ಕಿಲೋಮೀಟರ್ ಗಟ್ಟಲೆ ನಡೆದೇ ತೆರಳುವಂತಾಗಿತ್ತು. ಇದರಿಂದ ಸಾಕಷ್ಟು ಜನರು ನಡೆದು ಸುಸ್ತಾಗಿ ಬಸವಳಿಯುವಂತಾಯಿತು.
ಸರ್ಕಾರಿ ಬಸ್ ಸೇವೆ ಅಲಭ್ಯವಾದ ಹಿನ್ನಲೆಯಲ್ಲಿ ಜನರು ಬೇರೆ ಊರುಗಳಿಗೆ ತೆರಳಲು ಪರದಾಡಿದರು. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 9 ಗಂಟೆ ನಂತರ ಪ್ರವೇಶಕ್ಕೆ ನಿಷೇಧ ಮಾಡಿರುವ ಹಿನ್ನೆಲೆಯಲ್ಲಿಯೂ ತೊಂದರೆ ಉಂಟಾಯಿತು.ಬೆಂಗಳೂರು,ಮೈಸೂರು,ತುಮಕೂರು ಮೊದಲಾದ ಜಿಲ್ಲೆಗಳಿಗೆ ಹೋಗುವ,ಬರುವ ವಾಹನ ಸವಾರರಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.




