ಪ್ರಧಾನಿಗೆ ಹಕ್ಕೊತ್ತಾಯ ನೀಡಲು ಹೋಗುತ್ತಿದ್ದ ಮಹಿಳೆಯರನ್ನು ಬಂಧಿಸಿದ್ದನ್ನು ಖಂಡಿಸಿದ ಮಂಡ್ಯ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಖಂಡಿಸಿದೆ.
ಭಾನುವಾರ ಪ್ರಧಾನಿಯವರು ಮಂಡ್ಯಕ್ಕೆ ಆಗಮಿಸುತ್ತಾರೆಂದು ತಿಳಿದಿದ್ದ, ಮಂಡ್ಯ ಜಿಲ್ಲಾ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಸಂಘಟನೆಗಳು ಪೂರ್ವಭಾವಿಯಾಗಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿ, ತಾವು ಅಂದು ಪ್ರಧಾನಿ ಅವರನ್ನು ಭೇಟಿಯಾಗಿ ದೇಶದಲ್ಲಿ ಹೆಚ್ಚಾಗುತ್ತಿರುವ ಮಹಿಳಾ ದೌರ್ಜನ್ಯ ಅತ್ಯಾಚಾರ, ಕಾರ್ಮಿಕರ ಕೆಲಸದ ಅವಧಿಯ ವಿಸ್ತರಣೆ ಮತ್ತು ಜಿಲ್ಲೆಯ ಇತರ ಸಮಸ್ಯೆಗಳ ಕುರಿತು ಅವರ ಗಮನ ಸೆಳೆದು ಹಕ್ಕೊತ್ತಾಯ ಸಲ್ಲಿಸಲು ಹೋಗುವುದಾಗಿ ತಿಳಿಸಿದ್ದರು.
ಆಗಿದ್ದರೂ ಹಕ್ಕೊತ್ತಾಯ ಸಲ್ಲಿಸಲು ಒಟ್ಟುಗೂಡಿ ಸಾಗಲು ಮಂಡ್ಯದ 100 ಅಡಿ ರಸ್ತೆಯಲ್ಲಿ ಸೇರುತ್ತಿದ್ದ ಕಾರ್ಯಕರ್ತರನ್ನು, ಆ ಪೈಕಿ ಬಹುತೇಕ ಮಹಿಳೆಯರನ್ನು ಬಲವಂತವಾಗಿ ಬಂಧಿಸಿ ಅಕ್ರಮವಾಗಿ ಹಿಡಿದಿಟ್ಟಿದ್ದನ್ನು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲೆಯ ಅಧ್ಯಕ್ಷ ಬಿ.ಟಿ.ವಿಶ್ವನಾಥ್ ಖಂಡಿಸಿದರಲ್ಲದೆ ಬಂಧಿತರ ಪರವಾಗಿ ಠಾಣೆಗೆ ಹಾಜರಾಗಿ ಅವರ ಬಿಡುಗಡೆಗೆ ಕ್ರಮ ಕೈಗೊಂಡರು. ಅವರ ಅಕ್ರಮ ಬಂಧನ ಖಂಡಿಸಿ ನೂರಾರು ಜನ ಸಾರ್ವಜನಿಕರು ಠಾಣೆಗೆ ಮುತ್ತಿಗೆ ಹಾಕಿ ಪರಿಸ್ಥಿತಿ ವಿಕೋಪಕ್ಕೆ ಹೋಗುವುದರಲ್ಲಿತ್ತು.
ಬಿಜೆಪಿ ಬಹುಪರಾಕು ಹಾಕುವ ಜನರನ್ನು ಮಾತ್ರ ಹಳ್ಳಿಹಳ್ಳಿಗಳಿಂದ ಆಡಳಿತ ಯಂತ್ರ ಮತ್ತು ಪಕ್ಷದ ಆರ್ಥಿಕ ಬಲ ಬಳಸಿ, ಕರೆತಂದು ಪ್ರತಿಭಟನೆಗಳನ್ನು ಮಾತ್ರ ಹತ್ತಿಕ್ಕಿ ಅಕ್ರಮವಾಗಿ ಕಾರ್ಯಕರ್ತರನ್ನು ಬಂಧಿಸಿದ್ದು ಜಿಲ್ಲೆಯ ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ತಿಳಿಸಿದೆ.
ಸಂಸದೆ ಸುಮಲತಾ ಅವರು ಬಿಜೆಪಿಗೆ ಕಾಲಿಡುತ್ತಿದ್ದಂತೆಯೇ ಬದಲಾಗಿದ್ದನ್ನು ಮಹಿಳಾ ಕಾರ್ಯಕರ್ತರ ಬಂಧನವನ್ನು ವಿರೋಧಿಸದಿರುವುದು ದುರದೃಷ್ಟಕರ ಘಟನೆ ಎಂದು ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ತಿಳಿಸಿದೆ.




