Thursday, October 24, 2024

ಪ್ರಾಯೋಗಿಕ ಆವೃತ್ತಿ

ಯುವಜನರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು : ರವಿಕಾಂತೇಗೌಡ

ಗ್ರಾಮೀಣ ಭಾಗದ ಯುವಜನರಲ್ಲಿ ಸಾಕಷ್ಟು ಬುದ್ಧಿವಂತರಿದ್ದು, ಸರಿಯಾದ ಮಾರ್ಗದರ್ಶನ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಕೆಲಸ ಪಡೆಯಬೇಕೆಂದು ಬೆಂಗಳೂರು ಸಂಚಾರಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಕರೆ ನೀಡಿದರು.

ಬುಧವಾರ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ಹಾಗೂ ದೇಶಹಳ್ಳಿ ಗ್ರಾಮಗಳಲ್ಲಿ ತವರಿನ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಯುವಜನರು ಓದಿನಲ್ಲಿ ಸಾಕಷ್ಟು ಮುಂದೆ ಇದ್ದಾರೆ.

ಅವರಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಐಎಎಸ್, ಐಪಿಎಸ್, ಕೆಪಿಎಸ್ಸಿ, ಬ್ಯಾಂಕಿಂಗ್ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉನ್ನತ ಸರ್ಕಾರಿ ಕೆಲಸ ಪಡೆಯಬಹುದು ಎಂದು ಸಲಹೆ ನೀಡಿದರು.

ಇಂದು‌ ಬೆಂಗಳೂರಿನಲ್ಲಿ ಗ್ರಾಮೀಣ ಪ್ರದೇಶದ ಯುವಕರು ಎಂಟು-ಹತ್ತು ಸಾವಿರಕ್ಕೆ ಕೆಲಸ ಮಾಡುತ್ತಿರುವುದನ್ನು ನೋಡಿದರೆ ಸಾಕಷ್ಟು ನೋವಾಗುತ್ತದೆ. ಗ್ರಾಮೀಣ ಭಾಗದಲ್ಲಿ ನನಗಿಂತಲೂ ಹೆಚ್ಚು ಬುದ್ದಿವಂತರಿದ್ದು ಅವರಿಗೆ ಉತ್ತಮ ಮಾರ್ಗದರ್ಶನ ಕೊಡಿಸಬೇಕಿದೆ ಎಂದರು.

ನಾನು ಮತ್ತು ನನ್ನ ಸಹೋದರಿ ಬಿ.ಆರ್.ಪೂರ್ಣಿಮ ಅವರು ಗ್ರಾಮೀಣ ಪ್ರದೇಶ ದಲ್ಲಿ ಶಿಕ್ಷಣ ಪಡೆದವರಾಗಿದ್ದು, ಗ್ರಾಮೀಣ ಶಿಕ್ಷಣ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳ ಬಗ್ಗೆ ಪೂರ್ವಾಗ್ರಹ ಪೀಡಿತರಾಗದೆ ನಮ್ಮಲ್ಲಿರುವ ಕೀಳರಿಮೆ ತೊರೆದು ಶ್ರಮವಹಿಸಿ ವ್ಯಾಸಾಂಗ ಮಾಡಬೇಕೆಂದು ಕರೆ ನೀಡಿದರು.

ಉಭಯ ಗ್ರಾಮಗಳ ಗ್ರಾಮಸ್ಥರು ನೀಡಿರುವ ಗೌರವಪೂರ್ವಕ ಅಭಿನಂದನೆಗೆ ನಾನು ಋಣಿಯಾಗಿರುತ್ತೇನೆ. ನಮ್ಮೂರಿಗೆ ಕಳಂಕ ತರುವ ಕೆಲಸವನ್ನು ನಾನೆಂದಿಗೂ ಮಾಡುವುದಿಲ್ಲ ಎಂದರು.

ಬೆಸಗರಹಳ್ಳಿ ಗ್ರಾಮದಲ್ಲಿ ಸುಸಜ್ಜಿತವಾದ ಡಿಜಿಟಲ್ ಗ್ರಂಥಾಲಯ ನಿರ್ಮಿಸುವ ಕನಸು ಹೊಂದಿದ್ದೇನೆ. ಮುಂದಿನ ದಿನಗಳಲ್ಲಿ ಗ್ರಂಥಾಲಯ ನಿರ್ಮಿಸುವ ಮೂಲಕ ಬೆಸಗರಹಳ್ಳಿ ಗ್ರಾಮದ ಯುವಕರಿಗೆ ನೆರವು ಕಲ್ಪಿಸುವ ಗುರಿ ನನ್ನದು. ಬುದ್ಧ,ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಗಳನ್ನು ಮಾತನಾಡಿದರೆ ಸಾಲದು ಜೀವನದಲ್ಲಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಬೆಸಗರಹಳ್ಳಿ ಗ್ರಾಮಸ್ಥರು ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬೆಂಗಳೂರು ಸಂಚಾರ ಪೊಲೀಸ್ ಆಯುಕ್ತ ಮತ್ತು ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪುರಸ್ಕೃತರಾದ ಡಾ. ಬಿ.ಆರ್. ರವಿಕಾಂತೇಗೌಡ ಅವರಿಗೆ ಬೆಳ್ಳಿ ಕಿರೀಟ ಧಾರಣೆ ಮಾಡಿ ಅಭಿನಂದಿಸಿದರು.

ಇವರ ಸಹೋದರಿ ಮೈಸೂರು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ ಅವರಿಗೂ ಅಭಿನಂದಿಸಲಾಯಿತು.

ಅಭಿನಂದನೆ‌ಸ್ವೀಕರಿಸಿದ ಪೂರ್ಣಿಮಾ ಅವರು ಮಾತನಾಡಿ, ಬಾಲ್ಯದಲ್ಲಿ ಹಿರಿಯರ ಹಾರೈಕೆಯಂತೆ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಿದ್ದೇವೆ. ಜನಸಾಮಾನ್ಯರಿಗೆ ನೆರವಾಗುವ ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ತವರು ಜಿಲ್ಲೆ ಮಂಡ್ಯ ಹಾಗೂ ಪತಿಯ ತವರೂರು ಮೈಸೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸುಯೋಗ ನನ್ನದಾಗಿರುವುದು ಪುಣ್ಯ ಎಂದು ಸ್ಮರಿಸಿದರು.

ವೇದಿಕೆಯಲ್ಲಿ ನಿವೃತ್ತ ಶಿಕ್ಷಕ ಸಿ.ತಿಮ್ಮಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ, ನಿವೃತ್ತ ಪ್ರಾಂಶುಪಾಲರಾದ ಯಧುಶೈಲ ಸಂಪತ್, ಜಿ.ಪಂ. ಮಾಜಿ ಸದಸ್ಯ ಎಂ ಮರಿಹೆಗ್ಗಡೆ, ದೇಶಹಳ್ಳಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ರಾಮಣ್ಣ, ರೈತ ಮಿತ್ರ ಬಳಗದ ಅಧ್ಯಕ್ಷ ಗೋವಿಂದ್, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ಮುಖಂಡರಾದ ಚೌಡಪ್ಪ, ರವಿ, ನಾಗರಾಜಮೂರ್ತಿ, ದಯಾನಂದ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!