ಮದ್ದೂರಿನ ತಮಿಳು ಕಾಲೋನಿಗೆ ಜನರಿಗೆ ಕನಿಷ್ಟ ಮೂಲಸೌಲಭ್ಯಗಳನ್ನು ಕಲ್ಪಿಸಲು ವಿಫಲವಾಗಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಧೋರಣಿಯನ್ನು ಖಂಡಿಸಿ ‘ಈ ಬಾರಿ ಮದ್ದೂರು ವಿಧಾನಸಭಾ ಚುನಾವಣೆಗೆ ನಮ್ಮ ವೋಟು ಇಲ್ಲ’ ಎನ್ನುವ ಘೋಷಣೆಯೊಂದಿಗೆ ಹೋರಾಟ ನಡೆಸುವುದರ ಜೊತೆಗೆ ಮತದಾನ ಬಹಿಷ್ಕಾರ ಮಾಡಲಾವುದು ಎಂದು ಕರ್ನಾಟಕ ಜನಶಕ್ತಿಯ ಮುಖಂಡ ವೈದುನ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ದೂರಿನ ತಮಿಳ್ ಕಾಲೋನಿಯ ನಿವಾಸಿಗಳನ್ನು ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ವಂಚಿಸುತ್ತಾ ಬಂದಿದ್ದಾರೆ. ಪ್ರತಿ ಬಾರಿ ಚುನಾವಣೆ ಸಂದರ್ಭದಲ್ಲಿ ‘ನಿಮಗೆ ಹಕ್ಕುಪತ್ರಗಳು, ಮೂಲಭೂತ ಸೌಲಭ್ಯ ನೀಡಿ, ಮನೆ ನಿರ್ಮಾಣ ಮಾಡಿ ಕೊಡುತ್ತೇವೆ ಎಂದು ಭರವಸೆ ನೀಡುವ ರಾಜಕಾರಣಿಗಳು 4 ದಶಕಗಳಿಂದ ವಂಚಿಸುತ್ತಿದ್ದಾರೆಂದು ದೂರಿದರು.
ಮದ್ದೂರಿನ ಕೆಇಬಿ ಮುಂಭಾಗ ಇರುವ ತಮಿಳ್ ಕಾಲೋನಿಯಲ್ಲಿ 114 ಕುಟುಂಬಕ್ಕೂ ಹೆಚ್ಚು ಅಂದರೆ 700 ಕ್ಕೂ ಹೆಚ್ಚು ಮತದಾರರು ವಾಸಿಸುತ್ತಿದ್ದಾರೆ. ಆದರೆ ಇಲ್ಲಿಯ ತನಕ ಇಲ್ಲಿನ ಶ್ರಮಿಕರಿಗೆ ನೆಮ್ಮದಿಯ ಬದುಕು ನೀಡಲು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಜಿಲ್ಲಾಡಳಿತ ಹಾಗೂ ಮದ್ದೂರು ತಾಲೂಕು ಕಚೇರಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಮತ್ತು ಸ್ಥಳೀಯ ಜನ ಪ್ರತಿನಿಧಿಗಳು, ರಾಜಕಾರಣಿಗಳು ಎಲ್ಲರೂ ಸಹ ನಮ್ಮನ್ನು ಮತ ಬ್ಯಾಂಕುಗಳಾಗಿ ಬಳಸಿಕೊಂಡರೆ ವಿನಃ ನಮ್ಮ ಬದುಕನ್ನು ಸರಿದೂಗಿಸಲು ಯಾರು ಸಹ ಮುಂದೆ ಬರಲಿಲ್ಲ ಎಂದು ಅಳಲು ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ಮತ್ತು ಮಹಿಳಾ ಮುನ್ನಡೆ ಮುಖಂಡರಾದ ಚಂದ್ರು, ಗಂಗಾ, ಶಾಂತಿ, ಲತಾ, ರೂಪ, ಮುನಿಯಮ್ಮ, ಶಾರದ, ಉಮಾ ಮುಂತಾದವರಿದ್ದರು.




