ಇತ್ತೀಚೆಗೆ ನಡೆದ ಕಾಂಗ್ರೆಸ್ ಸಭೆಯಲ್ಲಿ ಮನ್ ಮುಲ್ ಮಾಜಿ ಅಧ್ಯಕ್ಷ ಜವರೇಗೌಡ ಅವರು ಶಾಸಕ ಸುರೇಶ್ ಗೌಡರ ಬಗ್ಗೆ ಕೆಟ್ಟದಾಗಿ ಪದಬಳಕೆ ಮಾಡಿರುವುದು ಖಂಡನೀಯ. ಮಾಜಿ ಸಚಿವ ಚಲುವರಾಯಸ್ವಾಮಿಯವರು ಇಂತಹ ಪುಂಡು-ಪೋಕರಿಗಳನ್ನು ದೂರವಿಟ್ಟು, ಜನರ ಪ್ರೀತಿ, ವಿಶ್ವಾಸ ಗಳಿಸಬೇಕೆಂದು ತಾಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ತಿಳಿಸಿದರು.
ನಾಗಮಂಗಲ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕ ಸುರೇಶ್ ಗೌಡರ ಬಗ್ಗೆ ಜವರೇಗೌಡರು ಕೆಟ್ಟದಾಗಿ ಪದ ಪ್ರಯೋಗ ಮಾಡಿರುವುದನ್ನು ಸಹಿಸುವುದಿಲ್ಲ. ಜವರೇಗೌಡ ಎಂತಹ ಮನುಷ್ಯ ಎಂಬುದನ್ನು ಈಗಾಗಲೇ ತಾಲ್ಲೂಕಿನ ಜನರಿಗೆ ಗೊತ್ತಾಗಿದೆ. ಇವರು ಸಮಯ ಸಾಧಕರಾಗಿ ಎಲ್ಲಾ ಪಕ್ಷದ ಮುಖಂಡರುಗಳನ್ನು ಬಾಯಿಗೆ ಬಂದಂತೆ ಮಾತನಾಡುವುದು ಸರ್ವೇ ಸಾಮಾನ್ಯವಾಗಿದ್ದು, ಮುಂದೆಯೂ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಿದರೆ, ನಾವು ಸುಮ್ಮನೆ ಕುಳಿತುಕೊಳ್ಳುವ ಕಾರ್ಯಕರ್ತರಲ್ಲ ಎಂದು ಎಚ್ಚರಿಕೆ ನೀಡಿದರು.
ನಾಗಮಂಗಲ ತಾಲೂಕಿನ ಯಾವುದೇ ನಾಯಕರಾಗಲಿ, ಜನರ ಪ್ರೀತಿ, ವಿಶ್ವಾಸವನ್ನು ಗಳಿಸಿಕೊಂಡು ಚುನಾವಣೆ ಎದುರಿಸುವುದು ಕರ್ತವ್ಯ. ಆದರೆ ಇಂತಹ ವ್ಯಕ್ತಿಗಳನ್ನ ಮುಂದಿಟ್ಟುಕೊಂಡು ಬಾಯಿಗೆ ಬಂದಂತೆ ಮಾತನಾಡುತ್ತಿರುವುದು ಶೋಭೆ ತರುವಂತಹದ್ದಲ್ಲ ಎಂದರು.
ಜವರೇಗೌಡ ಜೆಡಿಎಸ್ ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಅನುಭವಿಸಿ ಹಾಗೂ ಚಾಣಕ್ಯತನದಿಂದ ಸ್ವಾರ್ಥ ಸಾಧನೆಗಳನ್ನು ಮಾಡಿಕೊಂಡು, ಬಾಯಿಗೆ ಬಂದಂತೆ ಪದ ಬಳಸುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹವರಿಗೆ ಆ ಪಕ್ಷದ ನಾಯಕರು ಕಡಿವಾಣ ಹಾಕುವುದು ಸೂಕ್ತ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಬುಲೆಟ್ ರಾಜಣ್ಣ, ಪುರಸಭೆ ಸದಸ್ಯ ಚನ್ನಪ್ಪ, ಮುಖಂಡರಾದ ನಾಗೇಶ್, ಉಪ್ಪಾರಹಳ್ಳಿ ತಿರುಮಲಯ್ಯ ಮತ್ತಿತರರಿದ್ದರು.




