Friday, November 20, 2026

ಪ್ರಾಯೋಗಿಕ ಆವೃತ್ತಿ

ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಗೆ ಅನುಮತಿ ಕಡ್ಡಾಯ: ಡಾ.ಕುಮಾರ

ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿ ಪ್ರತಿಷ್ಠಾಪಿಸುವ ಗುಂಪು, ಸಂಘ, ಸಂಸ್ಥೆಗಳು ಹಾಗೂ ಸಾರ್ವಜನಿಕರು ತಹಶೀಲ್ದಾರ್ ಕಚೇರಿಯಲ್ಲಿ ತೆರೆಯಲಾಗುವ ಏಕಗಾವಕ್ಷಿ ಕೇಂದ್ರದಲ್ಲಿ ನಿಗದಿತ ಅರ್ಜಿ ಭರ್ತಿ ಮಾಡಿ ಅನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಆನ್ ಲೈನ್ ಮೂಲಕ ಸಭೆ ನಡೆಸಿ ಮಾತನಾಡಿದರು.

ಏಕ ಗವಾಕ್ಷಿ ಕೇಂದ್ರದಲ್ಲಿ ಪೊಲೀಸ್, ಅಗ್ನಿಶಾಮಕ, ಚೆಸ್ಕಾಂ, ಸ್ಥಳೀಯ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದು, ಸಲ್ಲಿಸುವ ಅರ್ಜಿ ಪರಿಶೀಲಿಸಿ 24 ಗಂಟೆಯೊಳಗಾಗಿ ವಿಲೇವಾರಿಯಾಗುವಂತೆ ನೋಡಿಕೊಳ್ಳಿ, ಸಾರ್ವಜನಿಕರು ಅಲೆದಾಡದಂತೆ ಎಚ್ಚರಿಕೆ ವಹಿಸಿ ಎಂದರು.

ಅರ್ಜಿಗಳನ್ನು ಪರಿಶೀಲಿಸುವ ವೇಳೆ ಗಣಪತಿಯ ಮೆರವಣಿಗೆ, ಭಾಗವಹಿಸುವ ಭಕ್ತಾಧಿಗಳ ಸಂಖ್ಯೆ, ವಿಸರ್ಜನೆ ಮಾಡುವ ಸ್ಥಳದ ಬಗ್ಗೆ ಪರಿಶೀಲಿಸಿ ಅನುಮತಿ ನೀಡಿದ ನಂತರ ಪ್ರತಿ ದಿನ ಅನುಮತಿ ನೀಡಿದ ವಿವರಗಳು, ಹೆಚ್ಚಿನ ನಿಗಾ ವಹಿಸಬೇಕಿರುವ ಸ್ಥಳಗಳ ಮಾಹಿತಿಯನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದರು.

ಹೋಬಳಿ ಹಾಗೂ ನಗರ ಮಟ್ಟದಲ್ಲಿ ಗಣಪತಿ ವಿಸರ್ಜನೆ ಮಾಡಲು ಸೂಕ್ತ ಎರಡು ಅಥವಾ ಮೂರು ಸ್ಥಳಗಳನ್ನು ಗುರುತಿಸಿ, ಸದರಿ ಸ್ಥಳಗಳಲ್ಲಿ ರಾತ್ರಿ ವೇಳೆ ವಿದ್ಯುತ್ ದೀಪ, ಬ್ಯಾರಿಕ್ಯಾಡಿಂಗ್, ನುರಿತ ಈಜುಗಾರರನ್ನು ನಿಯೋಜಿಸುವ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಸಭೆ ನಡೆಸಿ ಚರ್ಚಿಸಿ ಎಂದರು‌.

ನಗರ ಸ್ಥಳೀಯ ಸಂಸ್ಥೆಗಳಿಂದ ಗಣಪತಿ ವಿಸರ್ಜನೆಗೆ ಟ್ಯಾಂಕರ್ ಗಳ ವ್ಯವಸ್ಥೆ ಮಾಡಿ, ಮಾರ್ಗದ ಬಗ್ಗೆ ಪ್ರಚಾರ ಕೈಗೊಳ್ಳಿ ಇದರಿಂದ ಬಹಳಷ್ಟು ಜನ ಟ್ಯಾಂಕರ್ ನಲ್ಲಿ ಗಣಪತಿ ವಿಸರ್ಜನೆ ಮಾಡುತ್ತಾರೆ ಎಂದರು.

ಪಿ.ಒಪಿ ಗಣಪತಿ ನಿಷೇಧ ಎನ್.ಜಿ.ಟಿ, ಉಚ್ಛ ನ್ಯಾಯಾಲಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಜಿಲ್ಲೆಯಲ್ಲಿ ಪಿ.ಒ.ಪಿ ಗಣಪತಿ ಮಾರಾಟ ಹಾಗೂ ಪ್ರತಿಷ್ಠಾಪನೆ ಮಾಡುವುದು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.

ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳು ಪಿ.ಒ.ಪಿ ಗಣಪತಿ ಮಾರಾಟ ಮಾಡುತ್ತಿದ್ದಲ್ಲಿ ದಾಳಿ ನಡೆಸಿ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಸಿ.ಸಿ.ಟಿ.ವಿ. ಅಳವಡಿಸಬೇಕು. ಈಗಾಗಲೇ ನಾಗಮಂಗಲ ನಗರ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದು, ಸದರಿ ಸ್ಥಳದಲ್ಲಿ ದುರಸ್ತಿಯಾಗಿರುವ ಸಿ.ಸಿ.ಟಿ.ವಿಯನ್ನು ನಗರ ಸ್ಥಳೀಯ ಸಂಸ್ಥೆ ಅವರು ಕೂಡಲೇ ಸರಿಪಡಿಸಬೇಕು ಎಂದು ಸೂಚನೆ ನೀಡಿದರು.

ಈ ಬಾರಿ ಪೊಲೀಸ್ ಇಲಾಖೆಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲು ಅನುಮತಿ ಪಡೆಯುವ ಗಣಪತಿಗಳ ಪ್ರತಿಷ್ಠಾಪನೆ ಗಳಿಗೆ ಸಂಖ್ಯೆ ನೀಡಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಸಿಬ್ಬಂದಿಯು ಪ್ರತಿಷ್ಠಾಪನೆ ಯಿಂದ ವಿಸರ್ಜನೆಯಾಗುವ ವರೆಗೆ ನಿಗಾ ವಹಿಸಲಿದ್ದಾರೆ ಎಂದರು‌.

5 ಅಡಿ ಗಳಿಗಿಂತ ಎತ್ತರ ಇರುವ ಗಣೇಶ ಮೂರ್ತಿಗಳ ಅರ್ಜಿಯನ್ನು ಪ್ರತ್ಯೇಕವಾಗಿಸಿ ಅವುಗಳು ವಿಸರ್ಜನೆಗೆ ಹೊರಡುವ ಮಾರ್ಗದ ನಕಾಶೆಯನ್ನು ಚೆಸ್ಕಾಂ ಗೆ ನೀಡಿ. ಚೆಸ್ಕಾಂ ಅಧಿಕಾರಿಗಳು ವಿದ್ಯುತ್ ತಂತಿಗಳು ಸರಿಯಾದ ಎತ್ತರದಲ್ಲಿ ಇದೆಯೇ ಎಂದು ಪರಿಶೀಲನೆ ನಡೆಸುತ್ತಾರೆ ಎಂದರು.

ಏಕ ಗವಾಕ್ಷಿ ಕೇಂದ್ರದಲ್ಲಿ ಅನುಮತಿ ನೀಡುವ ಸಂದರ್ಭದಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ಸಹ ಬೇಕಿದ್ದ ಲ್ಲಿ ಅನುಮತಿ ಪಡೆದುಕೊಳ್ಳುವುದು ಎಂದರು.

ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರು ಮಾತನಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ದೊಡ್ಡ ಮಟ್ಟದಲ್ಲಿ ಗಣಪತಿ ಪ್ರತಿಷ್ಠಾಪಿಸುವವರು ಅನುಮತಿ ಪಡೆದಿರುವ ಬಗ್ಗೆ ಪರಿಶೀಲಿಸಿ ಎಂದರು.

ಸಭೆಯಲ್ಲಿ ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಮದ್ದೂರು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ