Thursday, November 19, 2026

ಪ್ರಾಯೋಗಿಕ ಆವೃತ್ತಿ

ಯಾವುದೇ ಪತ್ರಕರ್ತನಿಗೆ ಇರುವುದು ಎರಡೇ ಆಯ್ಕೆ…..

✍️ ಹರೀಶ್ ಗಂಗಾಧರ್

ಭಾರತ ಇತಿಹಾಸದ ಪುಟಗಳಲ್ಲಿ ಅತ್ಯಂತ ಪರಿಣಾಮಕಾರಿ ಮತ್ತು prolific Journalist ಯಾರು ಅಂತ ಕೇಳಿದರೆ ನಮಗೆ ನಾಲ್ಕು ಹೆಸರುಗಳು ಕೇಳಿ ಬರಬೇಕು

  • ರಾಜ ರಾಮ್ ಮೋಹನ್ ರಾಯ್
  • ಮಹಾತ್ಮ ಗಾಂಧಿ
  • ಡಾ. ಬಿ ಆರ್ ಅಂಬೇಡ್ಕರ್
  • ಭಗತ್ ಸಿಂಗ್

1822ರಲ್ಲಿ ರಾಜರಾಮ್ ಮೋಹನ್ ರಾಯ್ ತಮ್ಮ ‘ಮೀರತ್ ಉಲ್ ಅಕ್ಬರ್’ ಎಂಬ ಪರ್ಶಿಯನ್ ಪತ್ರಿಕೆಯಲ್ಲಿ ಪ್ರತಾಪ್ ನಾರಾಯಣ್ ದಾಸ್ ಎಂಬ ಕೂಲಿಯಾಳಿನ ಕುರಿತು ಬರೆಯುತ್ತಾರೆ. ಈಗಿನ ಬಾಂಗ್ಲಾದೇಶದಲ್ಲಿರುವ ಕೊಮೀಲ ಎಂಬ ನಗರದ ಜಿಲ್ಲಾ ನ್ಯಾಯಾಧೀಶರು ನಾರಾಯಣ್ ದಾಸನಿಗೆ ಚಾಟಿ ಏಟಿನ ಶಿಕ್ಷೆ ವಿಧಿಸುತ್ತಾರೆ. ಮಾಡಿದ ಸಣ್ಣ ತಪ್ಪಿಗೆ ಪೊಲೀಸರು ಯಾವ ಪರಿ ಹೊಡೆಯುತ್ತಾರೆಂದರೆ ನಾರಾಯಣ್ ದಾಸ್ ಸತ್ತೆ ಹೋಗುತ್ತಾನೆ. ಈ ಅಮಾನವೀಯ ಘಟನೆಯಿಂದ ಆಘಾತಕ್ಕೊಳಗಾದ ರಾಮ್ ಮೋಹನ್ ರಾಯ್ ತಮ್ಮ ಪತ್ರಿಕೆಯಲ್ಲಿ ಪೊಲೀಸರ ಮತ್ತು ಈಸ್ಟ್ ಇಂಡಿಯಾ ಕಂಪನಿಯ ಬರ್ಬರತೆ ಖಂಡಿಸಿ ಸಂಪಾದಕೀಯವೊಂದನ್ನು ಬರೆಯುತ್ತಾರೆ. ಅವರು ಬರೆದ ಸಂಪಾದಕೀಯದ ತೀಕ್ಷ್ಣತೆಗೆ ಲಂಡನ್ನಿನಲ್ಲಿನ್ನ ಸುಪ್ರೀಮ್ ಕೋರ್ಟ್, ಈಸ್ಟ್ ಇಂಡಿಯಾ ಕಂಪನಿಗೆ ಮತ್ತು ಜಿಲ್ಲಾ ನ್ಯಾಯಾಧೀಶರಿಗೆ ಸಮನ್ಸ್ ಜಾರಿ ಮಾಡುತ್ತದೆ.

ಮಹಾತ್ಮ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರರು ಬರೆದು, ಸಂಗ್ರಹಿಸಿದ 140 ಸಂಪುಟಗಳು ನಮ್ಮ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಲಭ್ಯವಿದೆ.

ನಾವು ಇಂದು ಹುತಾತ್ಮ, ಕ್ರಾಂತಿಕಾರಿ ಎಂದು ಕೊಂಡಾಡುವ ಭಗತ್ ಸಿಂಗ್ ರವರು ಮೂಲತಃ ಪತ್ರಕರ್ತರಾಗಿದ್ದರು. ಭಗತ್ ಸಿಂಗ್ ನಾಲ್ಕು ಭಾಷೆಗಳಲ್ಲಿ- ಉರ್ದು, ಪಂಜಾಬಿ, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ವಿವಿಧ ಪತ್ರಿಕೆಗಳಿಗೆ ಬರೆದರು. ಸೆರೆಮನೆಯಲ್ಲಿದ್ದ ಕೊನೆಯ 270 ದಿನಗಳಲ್ಲಿ ಪರ್ಶಿಯನ್ ಭಾಷೆ ಕಲಿತು ಬರೆಯುವ ಪ್ರಯತ್ನದಲ್ಲಿದ್ದರು. ಅವರು ಇಷ್ಟೆಲ್ಲಾ ಸಾಧಿಸಿದ್ದು ತಮ್ಮ 23ವಯಸ್ಸಿನಲ್ಲಿ ನೇಣುಗಂಬ ಏರುವ ಮುನ್ನ. ಇದು ನಮ್ಮ ದೇಶದ ಶ್ರೀಮಂತ ಪತ್ರಿಕೋದ್ಯಮ ಪರಂಪರೆ.

ಮೇಲಿನ ನಾಲ್ಕು ದೈತ್ಯರು ನಮ್ಮ ಯುವಕರಿಗೆ ಮಾದರಿಯಾಗಬೇಕೆ ಹೊರತು ಪತ್ರಿಕೋದ್ಯಮದ ಹೆಸರಲ್ಲಿ ಸುಲಿಗೆ ಮಾಡಿದವರಲ್ಲ. ಈ ನಾಲ್ವರ ಶಕ್ತಿಯುತ ಪತ್ರಿಕೋದ್ಯಮವನ್ನ ಮರೆಮಾಚಲೆಂದೇ ಕೆಲ ಗುಂಪುಗಳು ಕಾಲವಾದ ಸುಲಿಗೆಕೋರನ ಹೆಸರಲ್ಲಿ ಕಾರ್ಯಕ್ರಮಗಳನ್ನ ನಡೆಸುತ್ತವೆ. ಆತನ ಸುತ್ತ ಪ್ರಭಾವಳಿ ಸೃಷ್ಟಿಸುತ್ತವೆ. ಕೆಟ್ಟ Cult ಒಂದರ ಅಸ್ತಿತ್ವ ಕಾಪಾಡಿಕೊಳ್ಳುತ್ತವೆ.

ನಮ್ಮ ಪತ್ರಿಕೋದ್ಯಮಕ್ಕೇ ರಾಯ್, ಅಂಬೇಡ್ಕರ್, ಗಾಂಧಿ, ಭಗತ್ ಮರಳಿ ಬಂದರೆ ಇವರಿಗೂ, ಇವರು ಸಮರ್ಥಿಸಿಕೊಂಡು ಬೆಂಬಲ ನೀಡುವ ಪ್ರಭುತ್ವಕ್ಕೂ ಉಳಿಗಾಲವಿರಲ್ಲ… ಇದನ್ನ ಯುವಕರು ಅರ್ಥ ಮಾಡಿಕೊಳ್ಳಬೇಕಿದೆ.

ಯಾವುದೇ ಪತ್ರಕರ್ತನಿಗೆ ಇರುವುದು ಎರಡೇ ಆಯ್ಕೆ – ಪತ್ರಕರ್ತನಾಗಿ ಉಳಿಯುವುದು ಅಥವಾ ಬೇರೆಯವರು ಹೇಳಿದನ್ನ ಸುಮ್ಮನೆ ಬರೆದುಕೊಳ್ಳುವ ಸ್ಟೆನೋಗ್ರಾಫರ್ ಆಗುವುದು. ನಿಮ್ಮ ಆಯ್ಕೆ ಸರಿಯಾಗಿರಲಿ.

( ಪತ್ರಿಕೋದ್ಯಮದ ಬಿಕ್ಕಟ್ಟಿನ ಕುರಿತಾದ ಪಿ. ಸಾಯಿನಾಥ್ ಅವರ ಮಾತುಗಳನ್ನ ಒಮ್ಮೆ ಕೇಳಿ)

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ