ಮೇಲುಕೋಟೆಯ ಶ್ರೀಚಲುವನಾರಾಯಣ ಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾಚ್೯ 27 ರಿಂದ ಏಪ್ರಿಲ್ 8 ರವರೆಗೆ ನಡೆಯಲಿದ್ದು, ಜಿಲ್ಲಾಡಳಿತದ ವತಿಯಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ ತಿಳಿಸಿದರು.
ಮೇಲುಕೋಟೆಯ ಪ್ರವಾಸಿ ಮಂದಿರದಲ್ಲಿ ಇಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಏಪ್ರಿಲ್ 1 ರಂದು ವೈರಮುಡಿ ಕಿರೀಟಧಾರಣೆ ನಡೆಯಲಿದೆ. ಹೆಚ್ಚಿನ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ವ್ಯವಸ್ಥೆಗಳು ಸುವ್ಯವಸ್ಥಿತವಾಗಿ ನಡೆಯಬೇಕು ಎಂದರು.
ಕುಡಿಯುವ ನೀರಿನ ಟ್ಯಾಂಕರ್ ಗಳು ಅಗತ್ಯತೆಗೆ ತಕ್ಕಂತೆ ವ್ಯವಸ್ಥೆಯಾಗಬೇಕು. ಬಿಸಿಲು ಹೆಚ್ಚಿರುವುದರಿಂದ ಟ್ಯಾಂಕರ್ ಗೆ ಖಾಲಿಯಾದ ನಂತರ ಮರುಪೂರಣವಾಗಬೇಕು. ಶೌಚಾಲಯ, ವಾಹನ ನಿಲುಗಡೆ, ವಯಸ್ಸಾದವರು ಹಾಗೂ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವಾಹನದ ವ್ಯವಸ್ಥೆಯಾಗಬೇಕು ಎಂದರು.

ಏ.1 ರಂದು ವೈರಮುಡಿ ಕಿರೀಟ ಧಾರಣೆ ಮಹೋತ್ಸವ ನಡೆಯಲಿದೆ. ರಾಜಮುಡಿ ಹಾಗೂ ವೈರಮುಡಿಯನ್ನು ಜಿಲ್ಲಾಖಜಾನೆಯಿಂದ ಮೇಲುಕೋಟೆಗೆ ತೆಗೆದುಕೊಂಡು ಹೋಗುವಾಗ ಮಾರ್ಗದಲ್ಲಿ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಭದ್ರತಾ ವ್ಯವಸ್ಥೆಯಾಗಬೇಕು. ಜಿಲ್ಲಾ ಖಜಾನೆಯಿಂದ, ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಸ್ಥಾನ, ಇಂಡುವಾಳು, ತೂಬಿನಕೆರೆ, ಗಣಂಗೂರು,ಶೆಟ್ಟಿಹಳ್ಳಿ, ಕಿರಂಗೂರು ಬನ್ನಿಮಂಟಪ, ಕೂಡಲಕುಪ್ಪೆ ಗೇಟ್, ದರಸಗುಕುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆನ್ನಾಳು, ಪಾಂಡವಪುರ, ಹಿರೇಮರಳಿ ಗೇಟ್, ಬಣಘಟ್ಟ,ಟಿ.ಎಸ್.ಛತ್ರ,, ಮಹದೇಶ್ವರ ಪುರ, ಬೆಳ್ಳಾಳೆ, ಜಕ್ಕನಹಳ್ಳಿ, ತಗಲಕೆರೆ ಹಾಗೂ ಮೇಲುಕೋಟೆ ತಲುಪಲಿದೆ ಎಂದರು.
ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್ ರಾಜಮುಡಿ ಹಾಗೂ ವೈರಮುಡಿ ಸಾಗುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಯಾವುದಾದರೂ ಸ್ಥಳ ಬಿಟ್ಟಿ ಹೋಗಿದ್ದಲ್ಲಿ ಸೇರಿಸಿ. ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿಎಂದರು.
ಆರೋಗ್ಯ ಇಲಾಖೆ ವತಿಯಿಂದ ಅಂಬ್ಯೂಲೆನ್ಸ್ ಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು, ಕೊಳದ ಹತ್ತಿರ ನುರಿತ ಈಜುಗಾರರನ್ನು ನಿಯೋಜನೆ, ಸಿ.ಸಿ.ಟಿ.ವಿ ಅಳವಡಿಕೆ, ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದುಕೊಂಡರು.
ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು ಮಾತನಾಡಿ, ಮೇಲುಕೋಟೆಯ ವೈರಮುಡಿಗೆ ಬೇರೆ ಜಿಲ್ಲೆ, ರಾಜ್ಯ ಹಾಗೂ ಜಿಲ್ಲೆಯ ಭಕ್ತಾಧಿಗಳು ಆಗಮಿಸಲಿದ್ದಾರೆ. ಅವರಿಗೆ ಯಾವುದೇ ಕೊರತೆಯಾಗದಂತೆ ವ್ಯವಸ್ಥೆಯಾಗಬೇಕು. ವೈರಮುಡಿಯನ್ನು ಜಿಲ್ಲಾ ಖಜಾನೆಯಿಂದ ಮೇಲುಕೋಟೆಗೆ ತರುವಾಗ ಗ್ರಾಮಸ್ಥರು ಪೂಜೆ ಸಲ್ಲಿಸುವ ಸ್ಥಳಗಳನ್ನು ಗುರುತಿಸಬೇಕು. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳೀಯ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ನುರಿತ ಕಲಾವಿದರಿಗೆ ಅವಕಾಶ ನೀಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಎ.ಎಸ್.ಪಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ನಂದೀಶ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.




