ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ದುಡ್ಡಿಗಾಗಿ ಜೆಡಿಎಸ್ ಪಕ್ಷ ಬಿಟ್ಟು,ದೇವೇಗೌಡ – ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕಿದರು ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯ ತಾಲ್ಲೂಕಿನ ಭೂತನಹೊಸೂರಿನಲ್ಲಿ ಆಯೋಜಿಸಿದ್ದ ಶ್ರೀರಂಗಪಟ್ಟಣ ಕ್ಷೇತ್ರದ ಕೊತ್ತತ್ತಿ 2ನೇ ವೃತ್ತದ ಜಾ.ದಳ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಮೇಶ್ ಬಾಬು ಅವರನ್ನು ಜೆಡಿಎಸ್ ಬಿಟ್ಟು ಹೋಗಿ ಅಂದೋರು ಯಾರು? ದುಡ್ಡಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಹೋದರು ಎಂದು ಜನರು ಮಾತನಾಡುತ್ತಿದ್ದಾರೆ. ಬಂಡಿಸಿದ್ದೇಗೌಡರ ನಿಧನದ ನಂತರ ಅರಕೆರೆಯ ಅವರ ಮನೆಗೆ ಹೋದ ದೇವೇಗೌಡರು, ವಿಜಯಲಕ್ಷ್ಮಿ ಬಂಡಿಸಿದ್ದೇಗೌಡ ಅವರನ್ನು ನಮ್ಮ ಮಗಳು ಎಂದು ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಿದರು. ನಿಮ್ಮನ್ನು ಎರಡು ಬಾರಿ ಶಾಸಕರನ್ನಾಗಿ ಮಾಡಿದರು. ಆದರೂ ಅದನ್ನು ಮರೆತು ಚಲುವರಾಯಸ್ವಾಮಿ ಮಾತು ಕೇಳಿ ಜೆಡಿಎಸ್ ವರಿಷ್ಠರ ಬೆನ್ನಿಗೆ ಚೂರಿ ಹಾಕಿದ್ರಿ ಎಂದು ಕಿಡಿಕಾರಿದರು.
ರಮೇಶ್ ಬಾಬು ಅವರನ್ನು ಶಾಸಕರಾಗಿ ಮಾಡಿದ ಜೆಡಿಎಸ್ ಪಕ್ಷಕ್ಕೆ ನಿಷ್ಠರಾಗಲಿಲ್ಲ. ಈಗ ಹೋಗಿರುವ ಕಾಂಗ್ರೆಸ್ ಪಕ್ಷವನ್ನು ದರಿದ್ರ ಪಕ್ಷ, ನಾನು ಕಾಂಗ್ರೆಸ್ ಸೇರಿ ತಪ್ಪು ಮಾಡಿದೆ ಎಂದು ಜನರ ಬಳಿ ಹೀಯಾಳಿಸುತ್ತಾ, ಆ ಪಕ್ಷಕ್ಕೂ ನಿಷ್ಠರಾಗಿಲ್ಲ. ಅವರನ್ನು ರಾಜಕೀಯವಾಗಿ ಬೆಳೆಸಿದ ಜಾ.ದಳ ಹಾಗೂ ಪ್ರಸ್ತುತ ಇರುವ ಕಾಂಗ್ರೆಸ್ ಪಕ್ಷಗಳಲ್ಲೂ ಅವರು ನೆಮ್ಮದಿಯಿಂದಿಲ್ಲ ಎಂದರು.
ಜಾ.ದಳವನ್ನು ಏಕೆ ತೊರೆದೆ ಎಂದು ಕಾರ್ಯಕರ್ತರು ಪ್ರಶ್ನಿಸಿದರೆ, ನನ್ನಿಂದ ತಪ್ಪಾಗಿದೆ, ನನ್ನ ತಪ್ಪು ಮನ್ನಿಸಿ ಒಮ್ಮೆ ಚುನಾಯಿಸುವಂತೆ ಅಲವತ್ತುಕೊಳ್ಳುತ್ತಾರೆ. ಕುಮಾರಸ್ವಾಮಿ ಮಂತ್ರಿ ಮಾಡಲು ಮುಂದಾದರೆ ಹಣದ ವ್ಯಾಮೋಹಕ್ಕೆ ಬಲಿಯಾಗಿ ಮಂತ್ರಿ ಪದವಿ ಬೇಡವೆನ್ನುತ್ತಾರೆ. ಇಂತಹವರಿಗೆ ಕ್ಷೇತ್ರದ ಶಾಸಕರಾಗಲು ಅರ್ಹತೆಯಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಟರಾಗಿಲ್ಲ
ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿರುವ ನೀವು ಆ ಪಕ್ಷಕ್ಕೂ ನಿಷ್ಟರಾಗ ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಸಲಹೆಯನ್ನು ಧಿಕ್ಕರಿಸಿ ಅವರ ಸೋಲಿಗೆ ಷಡ್ಯಂತ್ರ ರೂಪಿಸಿದ್ದನ್ನು ಜಿಲ್ಲೆಯ ಜನ ಎಂದಿಗೂ ಮರೆಯುವುದಿಲ್ಲ ಎಂದು ಛೇಡಿಸಿದರು.
ನಿಖಿಲ್ ಸೋಲಿಗಾಗಿ ಸಂಚು ರೂಪಿಸಿ ಸುಮಲತಾ ಅವರನ್ನು ಬೆಂಬಲಿಸಿದ ಜಿಲ್ಲೆಯ ಕಾಂಗ್ರೆಸ್ಸಿಗರನ್ನು ಕ್ಯಾರೆ ಎನ್ನದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ಮುಖಂಡರು ನನ್ನ ನಾಯಕರಲ್ಲ ಎಂದು ಮುಖಕ್ಕೆ ಮಂಗಳರಾತಿ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ಬಿಜೆಪಿ ಮುಖಂಡರು ಎಲ್ಲಿ ಹೋಗಿದ್ದರು
ನನ್ನ ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಎರಡು ವರ್ಷಗಳ ಕಾಲ ಕೋವಿಡ್ ಸಂಕಷ್ಟ ಎದುರಾಯಿತು. ಆ ಸಂದರ್ಭದಲ್ಲಿಯೂ ಕ್ಷೇತ್ರದ 55 ಸಾವಿರ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಜನರೊಂದಿಗೆ ಸದಾ ಇದ್ದೆ. ಆದರೆ, ಮಾಜಿ ಶಾಸಕರಾಗಲೀ, ಇಂದು ಹಳ್ಳಿಗಳಿಗೆ ತೆರಳಿ ಸೀರೆ, ತಟ್ಟೆ ವಿತರಿಸುತ್ತಿರುವ ಬಿಜೆಪಿ ಮುಖಂಡರಾಗಲಿ ಎಲ್ಲಿ ಹೋಗಿದ್ದಿರಿ ಎಂದು ಪ್ರಶ್ನಿಸಿದರು.
ಕ್ಷೇತ್ರದ ಜನರಿಗೆ ಶಕ್ತಿ ಮೀರಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ.ಮುಂದಿನ ಬಾರಿ ಅಧಿಕಾರ ದೊರೆತರೆ ಕ್ಷೇತ್ರದ ಜನತೆ ಎದೆ ತಟ್ಟಿ ಹೇಳಿಕೊಳ್ಳುವಂತೆ ಅಭಿವೃದ್ಧಿ ಕೆಲಸ ಮಾಡಿ ತೋರಿಸುತ್ತೇನೆ. ಕೆ.ಆರ್.ಎಸ್. ನಿರ್ಮಿಸಿದ ಮೊಗರಹಳ್ಳಿ ಮಂಟಿಯ 300 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿರುವುದು ನನ್ನ ಹೆಮ್ಮೆಯ ಕಾರ್ಯ ಎಂದು ಸ್ಮರಿಸಿದರು.
80-90 ಸ್ಥಾನ ಖಚಿತ
ಪಂಚರತ್ನ ರಥಯಾತ್ರೆಯಿಂದ ರಾಜ್ಯದ ಜನಸಾಮಾನ್ಯರಲ್ಲಿ ಜಾ.ದಳದ ಬಗ್ಗೆ ಒಲವು ಮೂಡಿದ್ದು, ಪಕ್ಷ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 80-90 ಸ್ಥಾನಗಳಲ್ಲಿ ಜಯಗಳಿಸಲಿದ್ದು, ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದು ಶತಸಿದ್ಧ. ರೈತರು, ಬಡವರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪಂಚರತ್ನ ಯೋಜನೆ ಜಾರಿಗೊಳಿಸಲು ಪಕ್ಷ ಬದ್ಧವಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ ಎರಡು ಸಾವಿರ ರೂ. ಹಣ ನೀಡುವ ನಕಲಿ ಬಾಂಡ್ಗಳನ್ನು ವಿತರಿಸುತ್ತಿರುವುದು ಸರಿಯಲ್ಲ. ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರದಿದ್ದರೆ ಕ್ಷೇತ್ರದ ಮಾಜಿ ಶಾಸಕರು ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ಹಣ ಕೊಡಲು ಮುಂದಾಗುತ್ತಾರೆಯೇ ಎಂದು ಪ್ರಶ್ನಿಸಿದರು.
ಬಿಜೆಪಿ ಆಡಳಿತದಲ್ಲಿ ಯಾವ ಸಮುದಾಯದ ಜನರು ನೆಮ್ಮದಿಯಾಗಿಲ್ಲ. ಹಿಜಾಬ್ ಸಂಘರ್ಷ, ಕೋಮುವಾದ, ಬಿಜೆಪಿ ಕಾರ್ಯಕರ್ತರನ್ನು ತಾವೇ ಕೊಲ್ಲಿಸಿ ಗಲಭೆ ಸೃಷ್ಟಿಸುವ ಪ್ರವೃತ್ತಿಯಿಂದ ಜನ ರೋಸಿ ಹೋಗಿದ್ದು, ನಿಮ್ಮನ್ನು ಕ್ಷಮಿಸುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಜಾ.ದಳ ಅಧ್ಯಕ್ಷ ಪೈಲ್ವಾನ್ ಮುಕುಂದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕಾಳೇಗೌಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ ವೆಂಕಟೇಗೌಡ, ತಾಪಂ ಮಾಜಿ ಸದಸ್ಯ ಪ್ರಕಾಶ್, ಮಾಜಿ ಪ್ರಧಾನ ಶಂಕರೇಗೌಡ, ಮುಖಂಡರಾದ ಸುರೇಶ್, ಮಂಗಲ ಸಣ್ಣೇಗೌಡ, ತಗ್ಗಹಳ್ಳಿ ಪ್ರಸನ್ನ ಇತರರಿದ್ದರು.




