ಕಲೆ-ಸಂಗೀತ-ಸಾಹಿತ್ಯ ಸಾಂಸ್ಕೃತಿಕ ಉತ್ಸವಗಳು ಎಲ್ಲರನ್ನೂ ಒಗ್ಗೂಡಿಸುವ ಸುಸಂಸ್ಕೃತ ಕ್ಷೇತ್ರಗಳಾಗಿವೆ ಎಂದು ಮಂಡ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಜಯರಾಂ ಅಭಿಪ್ರಾಯಪಟ್ಟರು.
ಮಂಡ್ಯ ತಾಲೂಕಿನ ಬಸರಾಳು ಗ್ರಾಮದ ಶ್ರೀಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಎಸ್.ಡಿ.ಜಯರಾಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಮಾಜಿ ಸಚಿವ ದಿ. ಎಸ್.ಡಿ.ಜಯರಾಮ್ ಹಾಗೂ ಪದ್ಮಶ್ರೀ ಪುರಸ್ಕೃತೆ ಗಾಯಕಿ ದಿ.ವಾಣಿ ಜಯರಾಂ ಅವರ ಸ್ಮರಣಾರ್ಥ ನಡೆದ “ಬಸರಾಳು ಯುಗಾದಿ ಉತ್ಸವ- ಸಾಧಕರಿಗೆ ಅಭಿನಂದನೆ ಹಾಗೂ ಸಂಗೀತ ರಸಸಂಜೆ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ದಿನಗಳಲ್ಲಿ ರಾಜಕರಣ ಹೊಸ ಸ್ವರೂಪವನ್ನು ಪಡೆದುಕೊಳ್ಳುತ್ತಿರುವ ಕಾಲಘಟದಲ್ಲಿಯೂ ಸಾಂಸ್ಕೃತಿಕ ಉತ್ಸವಗಳು ಮನೋಲ್ಲಾಸ ಉಂಟು ಮಾಡುತ್ತವೆ. ಈ ಉತ್ಸವಗಳು ಸಮಾಜವನ್ನು ಒಗ್ಗೂಡಿಸುವ ಸೌಹಾರ್ದತೆ ಹೆಚ್ಚಿಸುತ್ತವೆ, ಈ ನಿಟ್ಟಿನಲ್ಲಿ ನಾವು ಹೊಸ ಬದಲಾವಣೆಯ ನಾಡುಕಟ್ಟುವ ಸುಕಾರ್ಯದಲ್ಲಿ ಭಾಗಿಯಾಗಬೇಕಿದೆ ಎಂದು ನುಡಿದರು.

ಎಸ್.ಡಿ.ಜಯರಾಮ್ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮುಖ್ಯಸ್ಥ ಡಾ.ಪರಮೇಶ್ ಮಾತನಾಡಿ, ಬಸರಾಳು ಹೋಬಳಿಯ ವ್ಯಾಪ್ತಿಯಲ್ಲಿ “ಬಸರಾಳು ಯುಗಾದಿ ಉತ್ಸವ” ಮಾಡುವ ಮೂಲಕ ದೇವರಲ್ಲಿ ಪಾರ್ಥಿಸುತ್ತೇವೆ, ಉತ್ತಮ ಮಳೆ, ಬೆಳೆ, ಆರ್ಥಿಕ ಸಬಲೀಕರಣದೊಂದಿಗೆ ಜೀವನ ಉತ್ತಮವಾಗಿರಲಿ, ಹೊಸ ಬದಲಾವಣೆಯ ಕಾಲಘಟ್ಟದಲ್ಲಿ ನಾವಿದ್ಧೇವೆ, ಅಭಿವೃದ್ಧಿಯ ಅಲೆ ಆರಂಭಗೊಂಡಿದೆ ಎಂದು ನುಡಿದರು.
ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಹೊಸ ನಾಯಕರನ್ನು ಕೊಡುಗೆಯಾಗಿ ನೀಡಿ, ಅಭಿವೃದ್ಧಿಯ ಪರ್ವ ಆರಂಭಗೊಳ್ಳುವುದು. ಮಂಡ್ಯದಲ್ಲಿ ಜಯರಾಮೋತ್ಸವ ಮಾಡಿದ್ದೀವಿ, ಈ ಭಾಗದ ಜನತೆ ನಮ್ಮ ಬಳಿ ಕೇಳಿದರು, ಬಸರಾಳು ಭಾಗದಲ್ಲಿ ಒಂದು ಕಾರ್ಯಕ್ರಮ ಮಾಡಿ ಎಂದು, ಆಗ ಯುಗಾದಿ ಉತ್ಸವ ಮಾಡಲು ತೀರ್ಮಾನಿಸಿದೇವು ಎಂದು ಹೇಳಿದರು.
ಬಸರಾಳು ಹೋಬಳಿಯ ಜನತೆ ನಮ್ಮ ಮಾವನವರಾದ ಮಾಜಿ ಸಚಿವ ಎಸ್.ಡಿ.ಜಯರಾಂ ಅವರ ಮೇಲೆ ಅಪಾರ ಅಭಿಮಾನ ಇರಿಸಿದ್ದರು, ನಮ್ಮ ಕುಟುಂಬದೊಂದಿಗೆ ಈಗಲೂ ಆಪ್ತತೆಯಿಂದ ಸಹಕರಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವೆ ಮಾಡಲು ರಾಜಕೀಯ ಶಕ್ತಿ ನೀಡಿ ಎಂದು ಕೋರಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲಾತಂಡ ಮತ್ತು ಗಣ್ಯರ ಭಾವಚಿತ್ರ ಮೆರವಣೆಗೆ ಸಾಗಿ ಬಸರಾಳು ಯುಗಾದಿ ಉತ್ಸವಕ್ಕೆ ಹೊಸ ಮೆರಗು ನೀಡಿತು, ವೇದಿಕೆಯಲ್ಲಿ ಜಾನಪದ ಮತ್ತು ಜನಪ್ರಿಯ ಸಿನಿಮಾ ಗೀತೆಗಳ ಗಾಯನ ಯಾನ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪ್ರಭಾವತಿ ಜಯರಾಂ, ಬಿಜೆಪಿ ಗ್ರಾಮಾಂತರ ಅಧ್ಯಕ್ಷೆ ಸುಜಾತಾ ರಮೇಶ್, ಬಸರಾಳು ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಶಿವು, ಗ್ರಾಮ ಪಂಚಾಯತಿ ಅಧ್ಯಕ್ಷೆ ಪದ್ಮ, ಸದಸ್ಯರಾದ ನಿವೇದಿತಾ, ಬಿಜೆಪಿ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಧನಂಜಯ್, ಪ್ರಧಾನ ಕಾರ್ಯದರ್ಶಿ ನಿರಂಜನ್, ಮಧುಸೂದನ್, ಮಹಿಳಾ ಮೋರ್ಚಾದ ಸದಸ್ಯರಾದ ಕಾವ್ಯ, ಸಾಕಮ್ಮ, ಗಾಯಕರಾದ ಡಾ.ಮಾದೇಶ್, ಕಾರಸವಾಡಿ ಮಹದೇವು, ಪುಟ್ಟಸ್ವಾಮಿ ಯರಹಳ್ಳಿ, ಬಸರಾಳು ಹೋಬಳಿ ಘಟಕದ ಭಾಜಪ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.




