ಕಲ್ಪಿತ ಪಾತ್ರಗಳಾದ ಉರಿಗೌಡ, ನಂಜೇಗೌಡನನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಆರೆಸ್ಸೆಸ್ ಮುಖಂಡರು ಒಕ್ಕಲಿಗರ ವಿರುದ್ಧ ಒಕ್ಕಲಿರನ್ನನೇ ಎತ್ತಿಕಟ್ಟುವ ಕುತಂತ್ರ ನಡೆಸಿದ್ದಾರೆಂದು ಪ್ರಗತಿಪರ ಚಿಂತಕ ಪ್ರೊ.ಜಿ.ಟಿ.ವೀರಪ್ಪ ಕಿಡಿಕಾರಿದರು.
ನೇಗಿಲಯೋಗಿ ಸಮಾಜಸೇವಾ ಟ್ರಸ್ಟ್ ವತಿಯಿಂದ ಮಂಡ್ಯನಗರದ ರೈತಸಭಾಂಗಣದಲ್ಲಿ ಆಯೋಜಿಸಿದ್ದ ಅಡ್ಡಂಡ ಕಾರ್ಯಪ್ಪನ ವಿರುದ್ಧ ಖಂಡನಾ ನಿರ್ಣಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯ ಒಕ್ಕಲಿಗ ಮುಖಂಡರಾದ ಸಿ.ಟಿ.ರವಿ, ಅಶ್ವತ್ ನಾರಾಯಣ್, ಶೋಭಾ ಕರಂದ್ಲಾಜೆ ಅವರನ್ನು ಮುಂದೆ ಬಿಟ್ಟು ಬಿಜೆಪಿ ಆರ್ ಎಸ್ ಎಸ್ ಮುಖಂಡರು ಕುತಂತ್ರ ರಾಜಕೀಯ ಮಾಡುತ್ತಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ಒಕ್ಕಲಿಗರು ಮತ್ತು ಮುಸ್ಲಿಂರ ನಡುವೆ ಕೋಮು ಗಲಭೆಯನ್ನು ಹುಟ್ಟು ಹಾಕಲು ಸಂಘಪರಿವಾರ ಹುನ್ನಾರ ನಡೆಸಿದೆ ಎಂದು ದೂರಿದರು.
ಸುವರ್ಣ ಕರ್ನಾಟಕ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡ ಹೆಸರಿರುವುದು ನಿಜ. ಹ.ಕ.ರಾಜೇಗೌಡರು ಜಾನಪದೀಯವಾಗಿ ಅವರ ಹೆಸರನ್ನು ನಮೂದಿಸಿದ್ದಾರೆ. ಆದರೆ ಇದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ, ಹೀಗಿದ್ದರೂ ಪದೇ ಪದೇ ಉರಿಗೌಡ, ನಂಜೇಗೌಡ ವಿಚಾರವನ್ನು ಎಳೆತಂದು ಬಿಜೆಪಿಯು ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಮಂಡ್ಯದ ಜನತೆ ಎಂದಿಗೂ ಅವಕಾಶ ನೀಡುವುದಿಲ್ಲ, ಇಂದು ಮುಂದುವರೆದ ಜಿಲ್ಲೆಗಳು ಎನ್ನಲಾಗುವ ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ದಿನನಿತ್ಯ ಕೋಮು ಗಲಭೆಗಳನ್ನು ಹುಟ್ಟು ಹಾಕುತ್ತಿರುವವರು ಯಾರು ? ಎಂಬುದನ್ನು ಮಂಡ್ಯ ಜನರು ಅರ್ಥಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಮಾಜಿ ಸಚಿವರಾದ ಎಂ ಎಸ್ ಆತ್ಮಾನಂದ, ಮಾಜಿ ಶಾಸಕ ಕೆ ಟಿ ಶ್ರೀಕಂಠೇಗೌಡ, ಸರ್ವೋದಯ ಪಕ್ಷದ ರೈತ ಮುಖಂಡ ಮಧುಚಂದನ್, ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಎ.ಸಿ.ರಮೇಶ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಒಕ್ಕಲಿಗ ಸೇವಾ ಟ್ರಸ್ಟ್ ಅಧ್ಯಕ್ಷ ಗೋಪಾಲ್, ಜಾನಪದ ಪರಿಷತ್ ಅಧ್ಯಕ್ಷ ಡಿ.ಪಿ.ಸ್ವಾಮಿ, ಇಂಜಿನಿಯರ್ ಅಸೋಸಿಯೇಷನ್ ಅಧ್ಯಕ್ಷ ದೇವರಾಜ್, ಮಹಿಳಾ ಮುಖಂಡರಾದ ಸುಜಾತ ಸಿದ್ದಯ್ಯ, ಕರನಾಡು ಸೇವಕರು ಸಂಘಟನೆಯ ಎಂ ಬಿ ನಾಗಣ್ಣಗೌಡ, ಕದಂಬ ಸೈನ್ಯ ಸಂಘಟನೆಯ ಬೇಕರಿ ರಮೇಶ್, ಕರ್ನಾಟಕ ರಕ್ಷಣಾ ವೇದಿಕೆಯ ಚಿದಂಬರಂ, ರಾಜಕುಮಾರ್ ಅಭಿಮಾನಿ ಸಂಘದ ಜಿ.ಟಿ. ರವೀಂದ್ರ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು




