Wednesday, September 11, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ವಿ.ವಿ.ಯಲ್ಲಿ ಅತಿಥಿ ಉಪನ್ಯಾಸಕರ ಶೋಷಣೆ

ಮಂಡ್ಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಅತಿಥಿ ಉಪನ್ಯಾಸಕರ ಶೋಷಣೆ ಮಾಡಲಾಗುತ್ತಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರುಗಳ ರಾಜ್ಯ ಸಮನ್ವಯ ಸಮಿತಿಯ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎಸ್.ನಾಗರಾಜು ಆರೋಪಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ಧಿಕ್ಕರಿಸಿ,ಅನೇಕ ಅವೈಜ್ಞಾನಿಕ ನಿಯಮಗಳನ್ನು ರೂಪಿಸಿ ಜಾರಿಗೆ ತಂದಿರುತ್ತಾರೆ. ವಿಶೇಷವಾಗಿ ದಲಿತ ಸಮುದಾಯದ ಅತಿಥಿ ಉಪನ್ಯಾಸಕರ ಹಾಗೂ ಮಹಿಳೆಯರ ಹಕ್ಕುಗಳನ್ನು ಮೊಟಕುಗೊಳಿಸುವ ಮೂಲಕ ಮಾನಸಿಕವಾಗಿ ಹಿಂಸಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಯಾವುದೇ ಕಾಲೇಜಿನಲ್ಲಿ ಇಲ್ಲದ ನಿಯಮಗಳು ಮಂಡ್ಯ ವಿ.ವಿ.ಯಲ್ಲಿವೆ ಎಂದು ದೂರಿದರು.

ಪ್ರತಿ ಅತಿಥಿ ಉಪನ್ಯಾಸಕರು ಪ್ರತಿದಿನ ಬೆಳಿಗ್ಗೆ ೯ ರಿಂದ ಸಂಜೆ ೫ರವರೆಗೆ ಕಡ್ಡಾಯವಾಗಿ ವಿ.ವಿ.ಯಲ್ಲಿರಬೇಕು. ಬೆಳಿಗ್ಗೆ ಹಾಗೂ ಸಂಜೆ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು. ದಿನಕ್ಕೆ ಎರಡು ಬಾರಿ ಬಯೋಮೆಟ್ರಿಕ್ ದಾಖಲಿಸಬೇಕು.ಹಾಗೂ ವಿಭಾಗದ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಬೇಕು ಎಂಬ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿದರು.

ಅತಿಥಿ ಉಪನ್ಯಾಸಕರಿಗೆ ಯಾವುದೇ ಕೆಸಿಎಸ್‌ಆರ್ ನಿಯಮಗಳು ಅನ್ವಯಿಸುವುದಿಲ್ಲ. ಆದರೂ ಸಹ ಮಾನಸಿಕವಾಗಿ ಹಿಂಸೆ ನೀಡಲಾಗುತ್ತಿದೆ. ದುಡಿದ ಕಾರ್ಯಕ್ಕೆ ಗೌರವಧನ ಪಡೆಯುವ ಸಂದರ್ಭದಲ್ಲಿ ಸಂಬಂಧಪಟ್ಟ ವಿಭಾಗದ ಮುಖ್ಯಸ್ಥರಿಂದ ಹಾಗೂ ನಿರ್ದೇಶಕರಿಂದ ಸಹಿ ಪಡೆಯಬೇಕಾಗಿದೆ.ದಲಿತ ಅತಿಥಿ ಉಪನ್ಯಾಸಕರ ಹಕ್ಕುಗಳನ್ನು ಸಂರಕ್ಷಣೆ ಮಾಡಿ ಗೌರವಯುತವಾಗಿ ಬದುಕಲು ಬಿಡಬೇಕು.

ಚಿಕಿತ್ಸಾ ವೆಚ್ಚ ಭರಿಸಲು ಆಗ್ರಹ

ಮಂಡ್ಯ ವಿ.ವಿ ಕಾರ್ಯನಿರ್ವಹಿಸುತ್ತಿರುವ ಪ್ರೊ.ವೀರಪ್ಪನವರು ಪರೀಕ್ಷಾ ಮೇಲ್ವಿಚಾರಕ ಕಾರ್ಯ ನಿರ್ವಹಿಸುತ್ತಿರುವಾಲೇ ಪಾರ್ಶ್ವವಾಯು ಪೀಡಿತರಾಗಿ ಆಘಾತಕ್ಕೆ ಒಳಗಾದರು. ಮೈಸೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ಸರ್ಕಾರಿ ನೌಕರಿಗೆ ಇರುವಂತೆ ಆರೋಗ್ಯ ಚಿಕಿತ್ಸಾ ವೆಚ್ಚ ಇರುವುದಿಲ್ಲ.

ಸುಮಾರು ಹದಿನೈದು ವರ್ಷಗಳಿಗಿಂತಲೂ ಹೆಚ್ಚು ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವ ಪ್ರೊ. ವೀರಪ್ಪನವರಿಗೆ ಚಿಕಿತ್ಸಾ ಸೌಲಭ್ಯ ಹಾಗೂ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕೆಂದು ಒತ್ತಾಯಿಸಿದರು .

ಮಾನಸಿಕ ಹಿಂಸೆಗಳನ್ನು ನೀಡಬಾರದು. ಕೂಡಲೇ ಸಂಬಂಧಪಟ್ಟ ವಿ.ವಿ.ಯ ಕುಲಪತಿಗಳು ಹಾಗೂ ಇತರೆ ಅಧಿಕಾರಿಗಳು ಸಂವಿಧಾನಬಾಹಿರವಾದ ನಿಯಮಗಳನ್ನು ಕೂಡಲೇ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಹೋರಾಟ ಹಾಗೂ ಚಳವಳಿ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಸಮಿತಿಯ ಡಾ.ಹನುಮಂತ ರಾಜು, ಕೆ.ಎಚ್.ವಸಂತಕುಮಾರ್, ನರಸಿಂಹೇಗೌಡ, ಡಾ.ರವೀಂದ್ರ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!