ರಾಜ್ಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ 39.59 ಕೋಟಿ ರೂ.ವೆಚ್ಚದಲ್ಲಿ 525 ಕೆರೆಗಳ ಹೂಳೆತ್ತಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದರು.
ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಕೆರೆ ಅಂಗಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಮಂಡ್ಯ ಜಿಲ್ಲಾ ಶಾಖೆ ಆಯೋಜಿಸಿದ್ದ 53ನೇ ಕೆರೆ ಮತ್ತು ಶುದ್ಧಗಂಗಾ ಘಟಕ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬರಗಾಲ ಪೀಡಿತ ಪ್ರದೇಶಗಳಲ್ಲಿ ಮಾನವರು, ಪ್ರಾಣಿ, ಪಕ್ಷಿಗಳಿಗೆ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಯಿಂದ ಕೃಷಿ ಹಾಗೂ ಪರಿಸರ ಸಂರಕ್ಷಣೆಯ ಮಹತ್ವಾಕಾಂಕ್ಷಿ ಯೋಜನೆಯನ್ನು ಹಾಕಿಕೊಂಡು ಕಳೆದ ಏಳು ವರ್ಷಗಳಿಂದ ಪುರಾತನ ಕೆರೆಗಳ ಪುನಶ್ಚೇತನ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ.ಈಗಾಗಲೇ ಬಹಳಷ್ಟು ಕೆರೆಗಳ ಅಭಿವೃದ್ಧಿ ಕಾರ್ಯ ನಿರಂತರವಾಗಿ ಯಶಸ್ವಿಯಾಗಿ ಜನರ ಸಹಕಾರದೊಂದಿಗೆ ಸಾಗುತಿದೆ ಎಂದು ನುಡಿದರು.
ನಮ್ಮ ರಾಜ್ಯದಲ್ಲಿ 2016 ರಿಂದ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ನಮ್ಮೂರು ನಮ್ಮ ಕೆರೆಯ ಪುನಶ್ಚೇತನಕ್ಕೆ ಹೊಸ ನಾಂದಿಯನ್ನು ಹಾಡಿ ಇಡೀ ರಾಜ್ಯದಲ್ಲಿ ಇದುವರೆಗೂ 525 ಕೆರೆಗಳ ಹೂಳೆತ್ತುವ ಕಾರ್ಯವನ್ನು ಮಾಡಿ ನೀರು ಸಂರಕ್ಷಣೆ ಮತ್ತು ಅಂತರ್ಜಲ ವೃದ್ಧಿಗೆ ನಮ್ಮ ಸಂಸ್ಥೆ ಶ್ರಮಿಸುತ್ತಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಈವರೆಗೆ ಸುಮಾರು 95 ಲಕ್ಷ ರೂ.ವೆಚ್ಚದಲ್ಲಿ 17 ಕೆರೆಗಳ ಪುನಶ್ಚೇತನ ಮಾಡಲಾಗಿದೆ. ಇದರಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿವೆ.ಎಲ್ಲಾ ಕೆರೆಗಳಿಗೂ ನೀರು ಬರುತ್ತಿರುವುದು ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಎಂದು ಭಾವಿಸುತ್ತಾ ಇದೀಗ ಮಂಡ್ಯ ತಾಲೂಕಿನ ಗೋಪಾಲಪುರ ಗ್ರಾಮದ ಕೆರೆಯನ್ನು ಊರಿನವರಿಗೆ ಪುನರ್ ಸಮರ್ಪಿಸಲಾಗುತ್ತಿದೆ ಎಂದರು.
ಇಂದು ಗೋಪಾಲಪುರ ಕೆರೆಯ ಹೂಳೆತ್ತಿದ ಒಟ್ಟು ವಿಸ್ತೀರ್ಣ 13.50 ಎಕರೆ. ಹೂಳೆತ್ತಲು 10 ಲಕ್ಷ ರೂ.ಗಳಾಗಿದ್ದು, ಸಾಗಾಟಕ್ಕೆ 9.50 ಲಕ್ಷ ರೂ ಖರ್ಚಾಗಿದೆ. ಒಟ್ಟು ಕಾಮಗಾರಿಯ ವೆಚ್ಚವು 19.50 ಲಕ್ಷ ರೂ.ಗಳಾಗಿದೆ ಎಂದು ತಿಳಿಸಿದರು.
ಈ ಕೆರೆಯ ಹೂಳೆತ್ತುವಿಕೆಯಿಂದ ಸುಮಾರು 300 ಕುಟುಂಬಗಳಿಗೆ ಪ್ರಯೋಜನವಾಗಿದ್ದು ಒಂದು ಸಾವಿರ ಎಕರೆ ಕೃಷಿಗೆ ಆಧಾರವಾಗಿದೆ.1500 ಕ್ಕೂ ಹೆಚ್ಚು ಜಾನುವಾರುಗಳಿಗೆ ಹಾಗೂ ಅಕ್ಕಪಕ್ಕದ ಗ್ರಾಮಗಳ 150ಕ್ಕಿಂತ ಹೆಚ್ಚು ಬೋರ್ವೆಲ್ ಗಳಿಗೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಮೈಕ್ರೋ ಬಚತ್ ಪಾಲಿಸಿ, ಆರೋಗ್ಯ ರಕ್ಷಾ ಕಾರ್ಡ್, ಸಂಪೂರ್ಣ ಸುರಕ್ಷಾ ನೊಂದಾವಣೆ ಕುಟುಂಬ ಸೇರಿವೆ. ಬದಲಿ ಇಂಧನ ಯೋಜನೆಗಳಲ್ಲಿ ಸೋಲಾರ್, ಕುಕ್‌ಸ್ಟವ್ ಹಾಗೂ ವಾತ್ಸಲ್ಯ ಕಾರ್ಯಕ್ರಮದಡಿ ಮನೆಗಳ ನಿರ್ಮಾಣ, ಸಮುದಾಯ ಕಾರ್ಯಕ್ರಮದಡಿ ಕೆರೆ ಕಟ್ಟೆ, ಕೃಷಿ ಯಂತ್ರ, ವಿದ್ಯಾರ್ಥಿ, ಶಿಕ್ಷಕರಿಗೆ, ವಯೋವೃದ್ಧರಿಗೆ ಆರ್ಥಿಕ ನೆರವು, ಜನಜಾಗೃತಿ ಕಾರ್ಯಕ್ರಮ, ಕಾಮನ್ ಸರ್ವಿಸ್ ಕೇಂದ್ರ ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಮಂದಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಎಂ.ಶ್ರೀನಿವಾಸ್, ಜಿ.ಪಂ.ಸಿಇಓ ಶಾಂತ ಎಲ್.ಹುಲ್ಮನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಬಿ.ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕಿ ಎಂ. ಚೇತನಾ, ತಾಲೂಕು ಕ್ಷೇತ್ರ ಯೋಜನಾಧಿಕಾರಿ ನಾರಾಯಣಪ್ಪಪಠಾಳಿ, ಗ್ರಾ.ಪಂ. ಅಧಿಕಾರಿಗಳಾದ ಅನಿತಾ, ಕೋಮಲಾ, ಮಲ್ಲೇಶ್, ಗ್ರಾ.ಪಂ.ಅಧ್ಯಕ್ಷೆ ಸುಧಾ, ಗ್ರಾಮದ ಕೆರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ಜಿ.ಎಸ್.ಸಿದ್ದರಾಜು, ಬಾನುಪ್ರಕಾಶ್,ವೆಂಕಟಪ್ಪ, ತಾ.ಪಂ.ಮಾಜಿ ಸದಸ್ಯ ಬೋರೇಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಸ್ವ-ಸಹಾಯ ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರಿದ್ದರು.




