Friday, November 20, 2026

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಚಿಹ್ನೆ- ಸಚಿವ ನಾರಾಯಣಗೌಡ ಭಾವಚಿತ್ರವಿರುವ 4,000 ಬ್ಯಾಗ್ ಗಳ ವಶ : ಇಬ್ಬರ ಮೇಲೆ ಎಫ್ಐಆರ್ ದಾಖಲು

ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಬ್ಯಾಕ್ ಫ್ಯಾಕ್ಟರಿಯೊಂದರಲ್ಲಿ ಅಕ್ರಮವಾಗಿ ಸಿಕ್ಕ ಬಿಜೆಪಿ ಚಿಹ್ನೆ ಹಾಗೂ ಸಚಿವ ನಾರಾಯಣಗೌಡ ಭಾವಚಿತ್ರವಿರುವ 4,000 ಬ್ಯಾಗುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ.27ರಂದು ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಎಫ್ಐಆರ್ ದಾಖಲಾಗಿದೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡದ ನೋಡಲ್ ಅಧಿಕಾರಿ ಎಂ.ಎಸ್ ಉಮೇಶ್ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ, ಕೆ.ಆರ್ ಪೇಟೆ ಮಂಡಲದ ಬಿಜೆಪಿ ಅಧ್ಯಕ್ಷ ಎಂದು ಹೇಳಿಕೊಂಡಿರುವ ಗಂಗಾಧರ್, ಬ್ಯಾಗ್ ಫ್ಯಾಕ್ಟರಿಯ ಮಾಲೀಕ ಅಂಥೋಣಿ ಪ್ರಸಾದ್‌ ವಿರುದ್ಧ ಎಫ್ಐಆರ್  ದಾಖಲಿಸಲಾಗಿದೆ.

ಚಾಮರಾಜಪೇಟೆ, 2ನೇ ಮೈನ್, 3ನೇ ಕ್ರಾಸ್, ಲೀಲಾವತಿ ಆಸ್ಪತ್ರೆ ಹತ್ತಿರ ಯೂನಿಕ್ಸ್‌, ಪ್ರಾಡೆಕ್ಟ್ ಎಂಬ ಬ್ಯಾಗ್ ಫ್ಯಾಕ್ಟರಿಯಲ್ಲಿ ತೆರಿಗೆಯನ್ನು ಕಟ್ಟದೇ ಬ್ಯಾಗ್ ಗಳನ್ನು ಸಂಗ್ರಹಿಸಿರುವುದಾಗಿ ಬಂದ ದೂರಿನ ಮೇರೆಗೆ ಬ್ಯಾಗ್ ಫ್ಯಾಕ್ಟರಿಗೆ ಹೋಗಿ ತಪಾಪಣೆ ಮಾಡಿದಾದ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಮತ್ತು ಡಾ.ನಾರಾಯಣಗೌಡ, ಸಚಿವರು ಹಾಗೂ ಶಾಸಕರು, ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ ಅವರ ಭಾವಚಿತ್ರವಿರುವ ಬ್ಯಾಗ್ ಗಳನ್ನು ಸಂಗ್ರಹಿಸಿದ್ದು ಪತ್ತೆಯಾಗಿದ್ದು, ಅವುಗಳನ್ನು ವಶಕ್ಕೆ ಪಡೆಯಲಾಗಿದೆ.

ಫ್ಯಾಕ್ಟರಿಯ ಮಾಲೀಕ ಅಂಥೋಣಿ ಪ್ರಸಾದ್‌ ಅವರನ್ನು ವಿಚಾರಣೆ ಮಾಡಲಾಗಿ ಕೆ.ಆರ್ ಪೇಟೆ ಮಂಡಲದ ಬಿಜೆಪಿ ಅಧ್ಯಕ್ಷರು ಎಂದು ಹೇಳಿಕೊಂಡು ಗಂಗಾಧರ್ ಎಂಬುವವರು ಸುಮಾರು 4,000/- (ನಾಲ್ಕು ಸಾವಿರ) ಬ್ಯಾಗ್ ಗಳಿಗೆ ಆರ್ಡರ್ ಕೊಟ್ಟಿದ್ದರಿಂದ ಬ್ಯಾಗ್ ಗಳನ್ನು ತಯಾರಿಸಿ ಅವರಿಗೆ ಕೊಡುವ ಸಲುವಾಗಿ ಸಂಗ್ರಹಿಸಿ ಇಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ವಶಪಡಿಸಿಕೊಂಡಿರುವ ಬ್ಯಾಗ್ ಗಳ ಮೌಲ್ಯ 10.40 ಲಕ್ಷ ರೂ.ಗಳಾಗಿವೆ ಎಂದು ಅಂದಾಜಿಸಲಾಗಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಿಕೆ ಮಾಡಿ, ಆಮಿಷವೊಡ್ಡಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಬಿಜೆಪಿ ಪಕ್ಷದ ಕಮಲದ ಚಿಹ್ನೆ ಮತ್ತು ಡಾ.ನಾರಾಯಣಗೌಡ  ಭಾವಚಿತ್ರವಿರುವ ಬ್ಯಾಗ್ ಗಳನ್ನು ಸಂಗ್ರಹಿಸಿ ಇಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಸಚಿವ ನಾರಾಯಣಗೌಡ ಸಾವಿರಾರು ಸಂಖ್ಯೆಯಲ್ಲಿ ಬ್ಯಾಗ್ ಗಳನ್ನು ಸಿದ್ದಪಡಿಸುತ್ತಿರುವ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬೆಂಗಳೂರು ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಎಂಸಿಸಿ ತಂಡದ ನೋಡಲ್ ಅಧಿಕಾರಿ ಎಂ.ಎಸ್ ಉಮೇಶ್ ಅವರಿಗೆ ನೀಡಿದ ಮಾಹಿತಿಗೆ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿ, ಬ್ಯಾಗ್ ಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ. ಈ ಬಗ್ಗೆ ಕರ್ನಾಟಕ ರಾಷ್ಟ್ರ ಸಮಿತಿಯೂ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ