Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ ವಿಧಾನಸಭೆ | 2,45,946 ಮತದಾರರಿಗೆ 268 ಮತಗಟ್ಟೆಗಳ ಸ್ಥಾಪನೆ

ಮಳವಳ್ಳಿ ಎಸ್‌ಸಿ ಮೀಸಲು ಕ್ಷೇತ್ರದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಟ್ಟು 268 ಮತಗಟ್ಟೆಗಳು ಇದ್ದು, 2,45,946 (ಪರಿಷ್ಕರಣೆ ಹೊರತುಪಡಿಸಿ)ಮತದಾರರಿದ್ದಾರೆಂದು ಚುನಾವಣಾಧಿಕಾರಿ ಬಿ. ಮಲ್ಲಿಕಾರ್ಜುನ ತಿಳಿಸಿದರು.

ಮಳವಳ್ಳಿ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳವಳ್ಳಿ ವಿಧಾನಸಭಾ ಮೀಸಲು ಕ್ಷೇತ್ರದಲ್ಲಿ ಒಟ್ಟು 2,45,946 ಮತದಾರರಿದ್ದು, 1,23,082 ಪುರುಷರು, 1,22,842 ಮಹಿಳೆಯರು ಹಾಗೂ 22 ಇತರೆ ಮತದಾರರಿದ್ದು, 265 ಸರ್ಕಾರಿ ಕಟ್ಟಡದಲ್ಲಿ ಹಾಗೂ 3 ಖಾಸಗಿ ಶಾಲೆಗಳಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

ಅಧಿಕಾರಿಗಳ ನೇಮಕ
268 ಮತಗಟ್ಟೆಗಲ್ಲಿ 268 ಮತಗಟ್ಟೆ ಮಟ್ಟದ ಅಧಿಕಾರಿಗಳು, 28 ಮತಗಟ್ಟೆ ಮಟ್ಟದ ಮೇಲ್ವಿಚಾರಕರನ್ನು ನೇಮಿಸಲಾಗಿದೆ, ಚುನಾವಣೆಯಲ್ಲಿ ಕೆಲಸ ನಿರ್ವಹಿಸಲು 18 ಕಂದಾಯ ಸೆಕ್ಟರ್‌ಗಳು ಅಧಿಕಾರಿಗಳು, 18 ಪೊಲೀಸ್ ಸೆಕ್ಟರ್ ಅಧಿಕಾರಿಗಳು, 8 ಪ್ಲೈಯಿಂಗ್ ಸ್ಕ್ವಾಡ್ ಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಇವಿಎಂ ಭದ್ರ
ಒಟ್ಟು ಎಲೆಕ್ಟ್ರಾನಿಕ್ ಇವಿಎಂಗಳಲ್ಲಿ ಬಿ.ಯು 322, ಸಿಯು 322 ಹಾಗೂ 349 ವಿವಿಪ್ಯಾಡ್‌ಗಳನ್ನು ಸ್ವೀಕರಿಸಿ ಶಾಂತಿ ಕಾಲೇಜು ಮತ್ತು ಅನಿತಾ ಕಾನ್ವೆಂಟ್‌ನಲ್ಲಿ ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದೆ ಎಂದರು.

ವಿಶೇಷ ಮತದಾರರು
ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 3972 ಯುವ ಮತದಾರರು ಹಾಗೂ 83 ಮಂದಿ ಸೇವಾ ನಿರತ ಮತದಾರರು ಹಾಗೂ 6419 ಸಂಖ್ಯೆಯಲ್ಲಿ 80 ವರ್ಷ ಮೇಲ್ಟಟ್ಟವರು, 7585 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ ಎಂದರು.

ವಿಶೇಷ ಮತಗಟ್ಟೆ
ಮತದಾನ ಮಾಡಲು ಮತದಾರರನ್ನು ಸೆಳೆಯಲು ಮತಗಟ್ಟೆ ಸಂಖ್ಯೆ 140 ಮಳವಳ್ಳಿ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆ ಹಾಗೂ ಮತಗಟ್ಟೆ ಸಂಖ್ಯೆ 124 ಅನಿತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪಿಂಕ್(ಸಖಿ) ಮತಗಟ್ಟೆಯನ್ನಾಗಿ ಮಾಡಲಾಗಿದೆ. ಪೂರಿಗಾಲಿ ಮತಗಟ್ಟೆ ಸಂಖ್ಯೆ 243 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಕಲಚೇತನ ಮತಗಟ್ಟೆಯನ್ನು ತೆರೆಯಲಾಗಿದೆ. ಹೊನಗಾನಹಳ್ಳಿ, ಗೊಲ್ಲರಹಳ್ಳಿ, ಮಳವಳ್ಳಿ ಅನಿತಾ ಪ್ರಾಥಮಿಕ ಶಾಲೆ, ಮಳವಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಯುವ ಮತದಾರರ ಮತಗಟ್ಟೆಯನ್ನಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಅಂಚೆ ಮತಪತ್ರ ಮೂಲಕ ಮತದಾನ
ಗೈರು ಮತದಾರರಾದ ಹಿರಿಯ ಮತದಾರರು, ವಿಕಲ ಚೇತನ ಮತದಾರರು ಹಾಗೂ ಕೋವಿಡ್ 19 ಬಾಧಿತ ಮತದಾರರು ಮತಗಟ್ಟೆಗೆ ಹಾಜರಾಗಿ ಮತದಾನ ಮಾಡಲು ಆಶಕ್ತರಾದ ಮತದಾರರು 12 ಡಿ ನಮೂನೆಯಲ್ಲಿ ಘೋಷಣೆ ನೀಡಿದ್ದಲ್ಲಿ ಅವರಿಗೆ ಅಂಚೆ ಪತ್ರವನ್ನು ವಿತರಿಸಿ ಅಂಚೆ ಮತಪತ್ರ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲು ಚುನಾವಣಾ ಆಯೋಗವು ಅನುವು ಮಾಡಿಕೊಟ್ಟಿದೆ ಎಂದು ಹೇಳಿದರು.

ಚೆಕ್‌ಪೊಸ್ಟ್ ನಿರ್ಮಾಣ
ಎನ್‌ಎಚ್ 209 ಕನಕಪುರ ರಸ್ತೆಯ ದೇವಿರಹಳ್ಳಿ ಗೇಟ್, ಮಳವಳ್ಳಿ-ಮೈಸೂರು ರಸ್ತೆಯ ಬೆಂಡರವಾಡಿ, ಮಳವಳ್ಳಿ- ಕೊಳ್ಳೇಗಾಲ ರಸ್ತೆಯ ಸತ್ತೇಗಾಲ ಟೋಲ್‌ಗೇಟ್, ಮಳವಳ್ಳಿ -ಟಿ, ನರಸೀಪುರ ರಸ್ತೆಯ ಚಿಕ್ಕಬಾಗಿಲು, ಹಲಗೂರು ಚನ್ನಪಟ್ಟಣ ರಸ್ತೆಯ ಕುಂತೂರು, ಮಳವಳ್ಳಿ- ತಲಕಾಡು ರಸ್ತೆಯ ಬಿಜಿಮೋಳೆಗಳಲ್ಲಿ ಚೆಕ್‌ಪೊಸ್ಟ್ ನಿರ್ಮಾಣ ಮಾಡಲಾಗಿದೆ ಎಂದರು.

ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲು ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದ್ದು, ಮಳವಳ್ಳಿ ವಿಧಾನಸಭಾ ಕ್ಷೇತ್ರ ಕಂಟ್ರೋಲ್ ರೂಂ ದೂರವಾಣೆ ಸಂಖ್ಯೆ 08231-242277 ಚುನಾವಣೆ ಸಂಬಂಧ ಮಾಹಿತಿ ಇದ್ದರೇ ನೀಡಬಹುದಾಗಿದೆ. ಜಿಲ್ಲಾಡಳಿತದ ವತಿಯಿಂದ ಪೂರ್ವಸಿದ್ದತೆಗಳನ್ನು ಮಾಡಿಕೊಂಡಿದ್ದು, ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಪ್ರತಿಯೊಬ್ಬರು ಚಲಾಯಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಉಪ ಚುನಾವಣೆ ಅಧಿಕಾರಿ ಹಾಗೂ ತಹಶೀಲ್ದಾರ್ ಕೆ. ಲೋಕೇಶ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ