ಮಕ್ಕಳಿಗೆ ಪ್ರಾಥಮಿಕ ಹಂತದಲ್ಲೇ ಉತ್ತಮವಾದ ಶಿಕ್ಷಣ ಕೊಟ್ಟರೆ ಉನ್ನತ ಶಿಕ್ಷಣಕ್ಕೆ ಅಡಿಪಾಯ ಹಾಕಿದಂತಾಗುತ್ತದೆ ಎಂದು ಮೈಸೂರಿನ ನೈಪುಣ್ಯ ವಿದ್ಯಾಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಘು ಕೌಟಿಲ್ಯ ಪೋಷಕರಿಗೆ ಸಲಹೆ ನೀಡಿದರು.
ಮದ್ದೂರು ಪಟ್ಟಣದಲ್ಲಿ ಭಾನುವಾರ ರಾತ್ರಿ ಶ್ರೀ ಸರ್ವಶಿವ ಎಜುಕೇಷನಲ್ ಟ್ರಸ್ಟ್ ನ 8ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಹಿಂದೆ ಮಕ್ಕಳಿಗೆ ಎಲ್ ಕೆ ಜಿ,ಯುಕೆಜಿ ಇರಲಿಲ್ಲ ಮನೆಯಲ್ಲಿ ಅಜ್ಜ-ಅಜ್ಜಿ ಹೇಳಿಕೊಡುತ್ತಿದ್ದ ನೀತಿ ಕಥೆಗಳೇ ಅವರಿಗೆ ಪಾಠವಾಗಿತ್ತು. ಇಂದು ಎಲ್ಲೂ ಕೂಡು ಕುಟುಂಬ ಇಲ್ಲ.ನಮ್ಮ ಭವಿಷ್ಯತ್ತಿನ ಮಕ್ಕಳು ಸಹಜವಾದ ಬಾಲ್ಯ ಅನುಭವಿಸುತ್ತಿಲ್ಲ.ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕದೆ ಪ್ರತಿಭೆ,ಸಾಮರ್ಥ್ಯ ಆಧರಿಸಿದ ಶಿಕ್ಷಣ ನೀಡಿದರೆ ಅವರು ಎತ್ತರಕ್ಕೆ ಏರಬಲ್ಲರು. ಅದಕ್ಕಾಗಿ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣವನ್ನೇ ಚೆನ್ನಾಗಿ ನೀಡಿದರೆ ಮುಂದೆ ಅದು ಉನ್ನತ ಶಿಕ್ಷಣಕ್ಕೆ ಅಡಿಪಾಯ ಹಾಕಿದಂತಾಗುತ್ತದೆ ಎಂದರು.
ಭಾರತ ದೇಶದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ ಒಲಂಪಿಕ್ ಪದಕ ಪಟ್ಟಿಯಲ್ಲಿ ಕೆಳಗಿನ ಸ್ಥಾನದಲ್ಲಿ ಇರುತ್ತದೆ. ಆದರೆ ಯಾವುದೇ ಸೌಲಭ್ಯವಿಲ್ಲದ ಇಥಿಯೋಪಿಯಾದಂತಹ ಪುಟ್ಟ ದೇಶ ಪದಕ ಪಟ್ಟಿಯಲ್ಲಿ ಸಾಕಷ್ಟು ಮುಂದೆ ಇರುತ್ತದೆ. ನಮ್ಮಲ್ಲಿ ಒಂದು ಚಿನ್ನದ ಪದಕ ಗೆದ್ದರೆ ಕೊಂಡಾಡುತ್ತೇವೆ, ಆದರೆ ಸಣ್ಣ ಪುಟ್ಟ ದೇಶಗಳು ಸಾಕಷ್ಟು ಚಿನ್ನದ ಪದಕ ಗೆಲ್ಲುತ್ತವೆ. ಹಾಗಾಗಿ ನಾವು ಮಕ್ಕಳಿಗೆ ಮಾಸ್ ಕಾರ್ಡ್ ಆಧರಿತ ಶಿಕ್ಷಣ ನೀಡುವ ಬದಲು ಅವರ ಪ್ರತಿಭೆ, ಸಾಮರ್ಥ್ಯ ಗುರುತಿಸಿ ಶಿಕ್ಷಣ ನೀಡಬೇಕು. ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೂ ಅವಕಾಶ ನೀಡಬೇಕು ಎಂದರು.
ಮಗುವಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಮೊದಲು ಆದ್ಯತೆ ನೀಡಬೇಕು.ಮಾತೃಭಾಷೆ ಚೆನ್ನಾಗಿ ಬರುವ ಮಗು ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿಯುತ್ತದೆ.ಪೋಷಕರು ಮಕ್ಕಳಿಗೆ ಟಿವಿ ಸೀರಿಯಲ್ ನೋಡಿಸುವ ಬದಲು ದಿನಪತ್ರಿಕೆಗಳನ್ನು ಓದಿಸುವ ಅಭ್ಯಾಸ ಮಾಡಿಸಿದರೆ, ಉತ್ತಮ ವಿಚಾರಗಳನ್ನು ತಿಳಿದಂತಾಗುತ್ತದೆ ಎಂದರು.
ಶೈಕ್ಷಣಿಕ, ಸಾಂಸ್ಕೃತಿಕ, ಜಾನಪದ ಮತ್ತು ಕೃಷಿ ಸೇರಿದಂತೆ ರಾಜಕೀಯವಾಗಿಯೂ ಮದ್ದೂರು ತಾಲೂಕು ತನ್ನದೇ ಆದ ಇತಿಹಾಸ ಹೊಂದಿದೆ. ಮದ್ದೂರು ತಾಲೂಕಿಗೆ ಉತ್ತಮ ಸ್ಥಾನಮಾನವಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಹುಟ್ಟೂರು ಪುಣ್ಯ ಭೂಮಿಯಾಗಿ ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವುದು ತಾಲೂಕಿಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಂತಾಗಿದೆ.ಸರ್ವಶಿವ ಶಿಕ್ಷಣ ಸಂಸ್ಥೆ ಬದ್ಧತೆಯುಳ್ಳ ಶಿಕ್ಷಣ ಸಂಸ್ಥೆಯಾಗಿ ಹೆಸರು ಮಾಡಿದ್ದು,ಮುಂದೆಯೂ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚನ್ನಪಟ್ಟಣ ತಾಲೂಕಿನ ಬೆಳ್ಳಕೆರೆ ಸಂಪೂರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಡಾ. ಸಂಪೂರ್ಣ ನಾಯ್ಡು, ಪ್ರಸ್ತುತ ರಾಜ್ಯ ಮತ್ತು ರಾಷ್ಟ್ರದ ಶೈಕ್ಷಣಿಕ ವ್ಯವಸ್ಥೆಯ ಸದ್ಬಳಕೆ ಮತ್ತು ಉಪಯುಕ್ತತೆ ಕುರಿತಾಗಿ ನೆರೆದಿದ್ದ ಪೋಷಕರಿಗೆ ವಿವರ ನೀಡಿದರು.
ಚಲನಚಿತ್ರ ನಟ ಪ್ರಥಮ್, ಬಿಇಓ ಸಿ.ಎಚ್.ಕಾಳೀರಯ್ಯ, ಸಂಸ್ಥೆಯ ಅಧ್ಯಕ್ಷ ಶಿವನಂಜಯ್ಯ ಮಾತನಾಡಿದರು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಮಲ್ಲಕಂಬ, ಸಮರ ಕಲೆ, ಟೇಕ್ವಾಂಡೋ, ಅಬಾಕಸ್, ಯೋಗ, ಸಾಂಸ್ಕೃತಿಕ ನೃತ್ಯಗಳು ಪೋಷಕರು ಮತ್ತು ಸಾರ್ವಜನಿಕರ ಮನಸೆಳೆದವು.
ಪುರಸಭೆ ಸದಸ್ಯೆ ಬಿ.ಸಿ. ಸರ್ವಮಂಗಳ, ಸಂಸ್ಥೆಯ ಸಿಇಓ ಎಂ.ಎಸ್. ಸಂತೋಷ್ಗೌಡ, ಕಾರ್ಯದರ್ಶಿ ಜ್ಯೋತಿ, ಉಪಾಧ್ಯಕ್ಷ ಚಂದ್ರನಾಯಕ, ಆಡಳಿತಾಧಿಕಾರಿ ಸಿ. ಗೋವಿಂದಶೆಟ್ಟಿ, ಮುಖ್ಯಶಿಕ್ಷಕಿ ಎ.ವಿ. ಪಾವನ ಮತ್ತಿತರರು ಉಪಸ್ಥಿತರಿದ್ದರು.




