Wednesday, November 18, 2026

ಪ್ರಾಯೋಗಿಕ ಆವೃತ್ತಿ

ಎತ್ತಿನಗಾಡಿಗೆ ಡಿಕ್ಕಿ ಹೊಡೆದ KSRTC ಬಸ್ : 20 ಮಂದಿ ಗಾಯ – ತಪ್ಪಿದ ಅನಾಹುತ

ಚಾಲಕನ ಅಜಾಗರೂಕತೆಯಿಂದ ಕೆಎಸ್‌ಆರ್‌ಟಿಸಿ ಬಸ್ಸೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಎತ್ತಿನಗಾಡಿಗೆ ಡಿಕ್ಕಿ ಹೊಡೆದು ಕಬ್ಬಿನ ಗದ್ದೆಗೆ ನುಗ್ಗಿರುವ ಪರಿಣಾಮ ಬಸ್‌ನಲ್ಲಿದ್ದ ಪ್ರಯಾಣಿಕರು ಸಿನಿಮಿಯ ರೀತಿಯಲ್ಲಿ ಪಾರಾಗಿದ್ದು ನಡೆಯಬಹುದಾದ ಬಾರಿ ಅನಾಹುತ ತಪ್ಪಿದಂತಹ ಘಟನೆ ಪಾಂಡವಪುರ ತಾಲೂಕಿನ ಕನಗನಮರಡಿಯಲ್ಲಿ ನಡೆದಿದೆ.

ಪಾಂಡವಪುರ ತಾಲೂಕಿನ ಕನಗನಮರಡಿ ಗ್ರಾಮದ ಸರ್ಕಾರಿ ಶಾಲೆಯ ಕೂಗಳತೆಯಲ್ಲಿ ಈ ದುರಂತ ನಡೆದಿದ್ದು, ಕೆಎಸ್‌ಆರ್‌ಟಿಸಿ ಬಸ್ ಮಂಡ್ಯದಿಂದ ಹುಲಿಕೆರೆ ಬುಗ, ವದೇಸಮುದ್ರ ಮಾರ್ಗವಾಗಿ ಕನಗನಮರಡಿ ಗ್ರಾಮದ ಬಳಿ ಬರುತ್ತಿದ್ದ ವೇಳೆ ರಸ್ತೆ ಪಕ್ಕದಲ್ಲಿ ನಿಂತಿದ್ದ ಎತ್ತಿನಗಾಡಿಗೆ ಅಪ್ಪಳಿಸಿ ನಂತರದಲ್ಲಿ ಕಬ್ಬಿನಗದ್ದೆಗೆ ನುಗ್ಗಿದೆ.

ಈ ವೇಳೆ ಬಸ್ಸಿನಲ್ಲಿದ್ದ ಶಂಭುಲಿಂಗಯ್ಯ, ಪ್ರಕಾಶ್, ಸೌಂದರ್ಯ, ಪುಷ್ಪಾವತಿ, ಮಾನಸ, ಪ್ರದೀಪ, ಸಾವಿತ್ರಮ್ಮ, ಪಂಕಜಾ, ಲಕ್ಷ್ಮಮ್ಮ, ಪಾರ್ವತಮ್ಮ, ಪ್ರಜ್ವಲ್ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಶಾಲಾ ಮಕ್ಕಳುಗಳಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು ಗಾಬರಿಗೊಂಡ ಶಾಲಾ ಮಕ್ಕಳು ಗಟ್ಟಿಯಾಗಿ ಚೀರಿಕೊಂಡಿದ್ದಾರೆ. ನಂತರದಲ್ಲಿ ಬಸ್ ಕಬ್ಬಿನಗದ್ದೆಗೆ ನುಗ್ಗುತ್ತಿದ್ದಂತೆಯೇ ಅಕ್ಕ-ಪಕ್ಕದಲ್ಲಿದ್ದ ದಾರಿಹೋಕರು ತಕ್ಷಣ ಸ್ಥಳಕ್ಕಾಗಮಿಸಿ ಬಸ್‌ನಲ್ಲಿದ್ದ ಮಕ್ಕಳು ಮತ್ತು ಪ್ರಯಾಣಿಕರನ್ನು ಕೆಳಗಿಳಿಸಿ ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ಮಾನವೀಯತೆ ಮೆರೆದ ಡಾ.ಇಂದ್ರೇಶ್
ಅಂಬುಲೈನ್ಸ್ ನಿಗದಿತ ವೇಳೆಗೆ ಬಾರದ ಕಾರಣ ಅದೇ ಮಾರ್ಗವಾಗಿ ದುದ್ದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಾಸ್ಸಾಗುತ್ತಿದ್ದ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್ ಅವರು ತಮ್ಮ ಇನ್ನೋವಾ ಕಾರಿನಲ್ಲಿ ಗಾಯಾಳುಗಳನ್ನು ಪಾಂಡವಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿ ಪ್ರಥಮ ಚಿಕಿತ್ಸೆ ನೀಡಿಸಿದ್ದು ಎಲ್ಲಾ ಗಾಯಾಳುಗಳು ವಿಶ್ರಾಂತಿ ಪಡೆಯುತ್ತಿದ್ದಾರೆ. ಮಾನವೀಯತೆ ಮೆರೆದ ಡಾ.ಇಂದ್ರೇಶ್ ಕಾರ್ಯವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಳೆದ 8 ವರ್ಷಗಳ ಹಿಂದೆ ಇದೇ ರಸ್ತೆಯ ಸ್ವಲ್ಪ ದೂರದಲ್ಲಿ ಕನಗನಮರಡಿ ಬಸ್ ದುರಂತ ಸಂಭವಿಸಿದ್ದು ಸುಮಾರು 13 ಮಂದಿ ಸಾವಿಗೀಡಾಗಿದ್ದರು.

ಶಾಸಕ ಸಿ.ಎಸ್‌. ಪುಟ್ಟರಾಜು ಭೇಟಿ 
ಅಪಘಾತದಲ್ಲಿ ಗಾಯಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಭೇಟಿ ಮಾಡಿದ ಶಾಸಕ ಸಿ.ಎಸ್.ಪುಟ್ಟರಾಜು, ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರಲ್ಲದೆ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅಪಘಾತಕ್ಕೀಡಾದ ಪ್ರಯಾಣಿಕರಿಗೆ ಸೂಕ್ತ ಚಿಕಿತ್ಸೆ ನೀಡಿಸಿ ಪರಿಹಾರ ನೀಡುವಂತೆ ಜತೆಗೆ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಪೊಲೀಸ್ ಇನ್ಸ್ಪೆಕ್ಟರ್ ಎಂ.ಆರ್.ಲವ ಹಾಗೂ ಸಬ್‌ಇನ್ಸ್ಪೆಕ್ಟರ್ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ದ ಸೂಕ್ತ ತನಿಖೆ ನಡೆಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂಬಂಧ ಪಾಂಡವಪುರ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ತಾತ್ಕಾಲಿಕ ಪರಿಹಾರ
ಕನಗನಮರಡಿ ಗ್ರಾಮದ ಶಿವಣ್ಣಗೌಡ ಎಂಬುವರಿಗೆ ಸೇರಿದ ಎತ್ತಿನಗಾಡಿಯನ್ನು ಜಮೀನಿನ ಬಳಿಯ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ವದೇಸಮುದ್ರ ಕಡೆಯಿಂದ ಬಂದ ಕೆಎಸ್‌ಆರ್‌ಟಿಸಿ ಬಸ್ ಖಾಲಿ ಎತ್ತಿನಗಾಡಿಗೆ ಅಪ್ಪಳಿಸಿದ ಹಿನ್ನೆಲೆಯಲ್ಲಿ ಗಾಡಿ ಸಂಪೂರ್ಣ ಹಾಳಾಗಿದ್ದು, ಎತ್ತುಗಾಡಿಯನ್ನೆ ತಮ್ಮ ಜೀವನಕ್ಕೆ ಆಧಾರವಾಗಿಟ್ಟುಕೊಂಡು ಜೀವನ ನಡೆಸುತ್ತಿದ್ದ ರೈತ ಈ ಘಟನೆಯಿಂದ ಕಂಗಾಲಾಗಿದ್ದು ಮುಂದಿನ ಜೀವನೋಪಾಯದ ಬಗ್ಗೆ ಶಾಸಕ ಸಿ.ಎಸ್.ಪುಟ್ಟರಾಜು ಅವರ ಮೊರೆಹೋದರು. ತಕ್ಷಣ ರೈತನ ಕುಟುಂಬಕ್ಕೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ರೂ. 1ಲಕ್ಷ ಪರಿಹಾರ ನೀಡುವಂತೆ ತಾಕೀತು ಮಾಡಿದರು. ಶಾಸಕರ ನಿರ್ದೇಶನದಂತೆ ಸ್ಥಳದಲ್ಲಿಯೇ ಎತ್ತಿನಗಾಡಿಗೆ ತಾತ್ಕಾಲಿಕವಾಗಿ ರೂ.20 ಸಾವಿರ ಹಾಗೂ ಕಬ್ಬು ಹಾಳಾಗಿದ್ದರಿಂದ ಕಬ್ಬಿನ ಗದ್ದೆಯ ಮಾಲೀಕನಿಗೆ ರೂ.2 ಸಾವಿರ ಪರಿಹಾರ ನೀಡಲಾಯಿತು.

ಈ ವೇಳೆ ಬಿಜೆಪಿ ಮುಖಂಡ ಡಾ.ಎನ್.ಎಸ್.ಇಂದ್ರೇಶ್, ಮೈಷುಗರ್ ಮಾಜಿ ಅಧ್ಯಕ್ಷ ಜೆ.ಶಿವಲಿಂಗೇಗೌಡ, ಮುಖಂಡರಾದ ಸಂದೇಶ್, ಚಿಕ್ಕಮರಳಿ ನವೀನ್‌ಕುಮಾರ್, ಡಿಪೋ ಮ್ಯಾನೇಜರ್ ಅಪ್ಪಿರೆಡ್ಡಿ, ಜೆಡಿಎಸ್ ಮುಖಂಡರಾದ ಸೋಮೇಗೌಡ, ಬೊಮ್ಮರಾಜು ಸೇರಿದಂತೆ ಹಲವರು ಘಟನಾಸ್ಥಳದಲ್ಲಿ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ