Thursday, November 19, 2026

ಪ್ರಾಯೋಗಿಕ ಆವೃತ್ತಿ

ರವೀಂದ್ರ ಶ್ರೀಕಂಠಯ್ಯ ಪುನರಾಯ್ಕೆಗೆ ಸಹಕರಿಸಿ : ಹೆಚ್.ಕೆ.ರಾಮು

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಅಭಿವೃದ್ಧಿ ಕೆಲಸಗಳು ಹಾಗೂ ಸಾವಿರಾರು ಜನರಿಗೆ ಹಕ್ಕುಪತ್ರ ಕೊಡಿಸಲು ಶ್ರಮಿಸಿದ ನೇರವಂತಿಕೆಯ ರಾಜಕಾರಣಿ ರವೀಂದ್ರ ಶ್ರೀಕಂಠಯ್ಯ ಅವರ ಪುನರಾಯ್ಕೆಗೆ ಕ್ಷೇತ್ರದ ಜನತೆ ಸಹಕರಿಸಬೇಕೆಂದು ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಕೆ.ರಾಮು ಮನವಿ ಮಾಡಿದರು.

ಮಂಡ್ಯ ನಗರದ ಮಂಜುನಾಥ ಸಮುದಾಯ ಭವನದಲ್ಲಿ ಆಯೋಜನೆಗೊಂಡಿದ್ದ ಕೊತ್ತತ್ತಿ 1ನೇ ವೃತ್ತದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ತಮ್ಮ ಇಳಿ ವಯಸ್ಸಿನಲ್ಲೂ ರಾಜ್ಯದ ನೀರಾವರಿ ಹಾಗೂ ಕೃಷಿ ಕ್ಷೇತ್ರದ ಬಲವರ್ಧನೆಗೆ ಶ್ರಮಿಸುತ್ತಿರುವ ಮಾಜಿ ಪ್ರಧಾನಿ ದೇವೇಗೌಡರ ಅಪರಿಮಿತ ಜ್ಞಾನದ ಸದ್ಬಳಕೆ ಹಾಗೂ ಗ್ರಾಮ ವಾಸ್ತವ್ಯ ಮತ್ತು ಸಾಲ ಮನ್ನಾದ ರೂವಾರಿ ಹೆಚ್‌.ಡಿ.ಕುಮಾರಸ್ವಾಮಿ ಅವರ ಜನಪರ ಯೋಜನೆಗಳನ್ನು ಜನರ ಮುಂದಿಟ್ಟು ಮತಯಾಚಿಸಿದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ 123 ಅಭ್ಯರ್ಥಿಗಳು ಜಯಗಳಿಸಿ ಕುಮಾರಸ್ವಾಮಿ ಮತ್ತೇ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆಂದು ತಿಳಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದು, ಅವರ ಪುನರಾಯ್ಕೆಯಿಂದ ಸಚಿವಗಾದಿ ಒಲಿದು ಬರಲಿದೆ ಎಂದು ಭವಿಷ್ಯ ನುಡಿದರು.

ಜೆಡಿಎಸ್ ಮುಖಂಡ ಕೊತ್ತತ್ತಿ ತಮ್ಮಣ್ಣ ಮಾತನಾಡಿ, ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲೆಯ ಕೆಚ್ಚೆದೆಯ ಗಂಡು ಹಾಗೂ ಸದನ ಕಲಿಯಾಗಿದ್ದು, ಚೊಚ್ಚಲ ಅವದಿಯಲ್ಲೇ ರಾಜ್ಯದ ರೈತರು ಮಹಿಳೆಯರು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಂಕಷ್ಟದ ಬಗೆ ಸದನದಲ್ಲಿ ದನಿ ಎತ್ತಿದ್ದಾರೆ. ಕಳೆದ ಮೂರು ದಶಕಗಳ ಅವಧಿಯಲ್ಲಿ ಪೂರೈಸಲಾಗದ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ ಜನಮಾನಸರಾಗಿದ್ದಾರೆಂದು ಪ್ರಶಂಸೆ ವ್ಯಕ್ತಪಡಿಸಿದರು.

ಮಾಜಿ ಶಾಸಕ ರಮೇಶ್ ಬಾಬು ವಿರುದ್ಧ ಆಕ್ರೋಶ ಹೊರ ಹಾಕಿದ ತಮ್ಮಣ್ಣ ಅವರು, ಸತ್ತವರ ಮನೆಗೆ ಹಾರ ಹಿಡಿದುಕೊಂಡು ಹೋಗಿ ಅಳುವ ನಾಟಕವಾಡುವ ಮಾಜಿ ಶಾಸಕರು ಯಾವುದೇ ಅಭಿವೃದ್ಧಿಗೆ ಮುಂದಾಗಲಿಲ್ಲ, ಹುಟ್ಟೂರು ಅರಕೆರೆ ಅಭಿವೃದ್ಧಿಗೆ ಅಡ್ಡಿಪಡಿಸಿದರು. ಸರ್ಕಾರಿ ಶಾಲೆಯ ಜಾಗ ಕಬಳಿಸಿ ರಸ್ತೆ ನಿರ್ಮಿಸಿಕೊಂಡಿದ್ದರು. ಅದನ್ನು ತೆರವು ಮಾಡಿಸಿ ಸರ್ಕಾರಿ ಶಾಲೆ ಉಳಿಸಿದ ಕೀರ್ತಿ ಶಾಸಕರಿಗೆ ಸಲ್ಲುತ್ತದೆ. ಇಂತಹವರು ಮತ್ತೇ ಗೆದ್ದು ಬರಲಿ ಎಂದು ಹಾರೈಸಿದರು.

ಕ್ಷೇತ್ರದ ಮತದಾರರು ಕಪೋಲ ಕಲ್ಪಿತ ಮಾತುಗಳಿಗೆ ಕಿವಿಗೊಡದೇ ರವೀಂದ್ರ ಶ್ರೀಕಂಠಯ್ಯ ಅವರನ್ನು ಪುನರಾಯ್ಕೆಗೊಳಿಸಿದರೆ ಕ್ಷೇತ್ರಕ್ಕೆ ಸಚಿವ ಗಾದಿ  ಒದಗಿ ಬರಲಿದೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಕಾಳೇನಹಳ್ಳಿ ತಿಮ್ಮೇಗೌಡ ಮಾತನಾಡಿ, ಜೆಡಿಎಸ್ ಬಳಗಕ್ಕೆ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ಹಾಗೂ ಜನಸಾಮಾನ್ಯರ ಹಾರೈಕೆ ಇದ್ದು ಸಾರಾಯಿ ಹಾಗೂ ಲಾಟರಿ ನಿಷೇಧ ಮಾಡುವ ಮೂಲಕ ಜನ ಮಾನಸರಾಗಿರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ಅವರ ಅಭಿವೃದ್ದಿಯನ್ನು ಮನಗೊಂಡು ಅವರನ್ನು ಬೆಂಬಲಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಜೆಡಿಎಸ್ ಕಾನೂನು ಘಟಕದ ರಾಜ್ಯ ಉಪಾಧ್ಯಕ್ಷ ಬಸವರಾಜು, ಜಿ.ಪಂ.ಮಾಜಿ ಸದಸ್ಯ ನರಸಿಂಹಚಾರ್, ಮುಖಂಡರಾದ ಪುಟ್ಟಸ್ವಾಮಿ, ಯತೀಶ್, ದೇವರಾಜು ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ